Saturday, July 19, 2025
Homeರಾಜ್ಯಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪೈಲಟ್ ವಾಹನ ಅಪಘಾತ, ನಾಲ್ವರು ಪೊಲೀಸರಿಗೆ ಗಾಯ

ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪೈಲಟ್ ವಾಹನ ಅಪಘಾತ, ನಾಲ್ವರು ಪೊಲೀಸರಿಗೆ ಗಾಯ

DCM D.K. Shivakumar's pilot vehicle accident, four policemen injured

ಬೆಂಗಳೂರು, ಜು.19- ಮೈಸೂರಿನಲ್ಲಿ ನಡೆದ ರಾಜ್ಯ ಸರ್ಕಾರದ ಎರಡು ವರ್ಷದ ಸಾಧನಾ ಸಮಾವೇಶದಲ್ಲಿ ಪಾಲ್ಗೊಂಡು ನಗರಕ್ಕೆ ಮರಳುತ್ತಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪೈಲಟ್ ವಾಹನ ಶ್ರೀರಂಗಪಟ್ಟಣದ ಕೋಡಿಶೆಟ್ಟಿಪುರ ಬಳಿ ಹೆದ್ದಾರಿಯಲ್ಲಿ ಪಲ್ಟಿಯಾಗಿ ನಾಲ್ವರು ಪೊಲೀಸರು ಗಾಯಗೊಂಡಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಇಂದು ಮಧ್ಯಾಹ್ನ 2.30 ಗಂಟೆ ಸಮಯದಲ್ಲಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಶ್ರೀರಂಗಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಕೋಡಿಶೆಟ್ಟಿಪುರದ ಬಳಿ ಬರುತ್ತಿದ್ದಾಗ ಪೈಲಟ್ ಜೀಪು ಅಪಘಾತಕ್ಕೀಡಾಗಿದೆ.

ವೇಗವಾಗಿ ಬರುತ್ತಿದ್ದ ಪೊಲೀಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಸುದ್ದಿ ತಿಳಿದ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗಾಯಗೊಂಡಿರುವ ಪೊಲೀಸರನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಕ್ಷಣ ಕಾರನ್ನು ನಿಲ್ಲಿಸಿ, ಸ್ಥಳ ಪರಿಶೀಲಿಸಿ ಪೊಲೀಸರಿಗೆ ಸಲಹೆ, ಸೂಚನೆ ನೀಡಿ ನಂತರ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.

RELATED ARTICLES

Latest News