Thursday, October 9, 2025
Homeಇದೀಗ ಬಂದ ಸುದ್ದಿಸಚಿವರಿಗೆ ಸಿಎಂ ಆಯೋಜಿಸಿದ್ದ ಔತಣಕೂಟವನ್ನು ಸಮರ್ಥಿಸಿಕೊಂಡ ಡಿಸಿಎಂ

ಸಚಿವರಿಗೆ ಸಿಎಂ ಆಯೋಜಿಸಿದ್ದ ಔತಣಕೂಟವನ್ನು ಸಮರ್ಥಿಸಿಕೊಂಡ ಡಿಸಿಎಂ

DCM defends CM's dinner for ministers

ಬೆಂಗಳೂರು, ಅ.9– ಸಿದ್ದರಾಮಯ್ಯ ಅವರು ತಮ್ಮ ಸಂಪುಟದ ಸಚಿವರಿಗೆ ಆಯೋಜಿಸಿರುವ ಔತಣಕೂಟವನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿದಂತೆ ಹಲವರು ಸಮರ್ಥಿಸಿಕೊಂಡಿದ್ದಾರೆ. ಕಾಂಗ್ರೆಸ್‌‍ ಸರ್ಕಾರಕ್ಕೆ ಎರಡೂವರೆ ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಸೋಮವಾರ ತಮ ನಿವಾಸದಲ್ಲಿ ಔತಣ ಕೂಟವನ್ನು ಆಯೋಜಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಊಟ ಮಾಡುವುದರಲ್ಲಿ ತಪ್ಪೇನಿದೆ. ಆ ವೇಳೆ ಚರ್ಚೆ ನಡೆಸುವುದು ಅಪರಾಧವೇನಲ್ಲ ಎಂದಿದ್ದಾರೆ.ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಮುಖ್ಯಮಂತ್ರಿಯವರು ಸಾಮಾನ್ಯವಾಗಿ ಸಚಿವರನ್ನು ಪದೇ ಪದೇ ಊಟಕ್ಕೆ ಕರೆಯುತ್ತಾರೆ. ಶಾಸಕರನ್ನೂ ಔತಣ ಕೂಟಕ್ಕೆ ಕೆಲವು ಬಾರಿ ಆಹ್ವಾನಿಸಿರುವ ಉದಾಹರಣೆಗಳಿವೆ. ಸಚಿವರ ಜೊತೆ ಎರಡು ಮೂರು ಬಾರಿ ಔತಣಕೂಟಗಳಾಗಿವೆ ಎಂದರು.ಎಲ್ಲರಿಗೂ ಊಟ ಹಾಕಿಯೇ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂದೇನಿಲ್ಲ, ಮುಖ್ಯಮಂತ್ರಿಯವರ ಮೇಲೆ ಎಲ್ಲರಿಗೂ ವಿಶ್ವಾಸ ಇದ್ದೇ ಇದೆ ಎಂದು ಹೇಳಿದ್ದಾರೆ.

ಸಚಿವರಾದ ಶಿವರಾಜ ತಂಗಡಗಿ, ರಾಮಲಿಂಗಾರೆಡ್ಡಿ ಮತ್ತಿತರರು ಡಿನ್ನರ್‌ ಮೀಟಿಂಗ್‌ ಅನ್ನು ಸಮರ್ಥಿಸಿಕೊಂಡಿದ್ದಾರೆ. ಸಚಿವ ಚೆಲುವರಾಯಸ್ವಾಮಿ ತಮಗೆ ಮಾಹಿತಿ ಇಲ್ಲ ಎಂದಿದ್ದಾರೆ. ಇತ್ತೀಚೆಗೆ ಸಚಿವರ ನಡುವೆ ಹೊಂದಾಣಿಕೆಯ ಕೊರತೆ ಕಂಡು ಬರುತ್ತಿದೆ. ಲಿಂಗಾಯತ ವೀರಶೈವ ಸಮುದಾಯಕ್ಕೆ ಅಲ್ಪ ಸಂಖ್ಯಾತ ಸ್ಥಾನಮಾನ ನೀಡುವ ಬಗ್ಗೆ ಸಚಿವರ ನಡುವೆಯೇ ವ್ಯತಿರಿಕ್ತ ಹೇಳಿಕೆಗಳು ಕೇಳಿ ಬರುತ್ತಿವೆ. ಸಚಿವರಾದ ಎಂ.ಬಿ.ಪಾಟೀಲ್‌, ಈಶ್ವರ್‌ಖಂಡ್ರೆ ಪರಸ್ಪರ ಜಟಾಪಟಿಗೆ ಇಳಿದಿದ್ದಾರೆ.

ಜೊತೆಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವಿಚಾರವಾಗಿಯೂ ಸಾಕಷ್ಟು ಆಕ್ಷೀಪಗಳು ಒಳಗೊಳಗೆ ಕುದಿಯುತ್ತಿವೆ. ಈ ಹಿನ್ನೆಲೆಯಲ್ಲಿ ಸಚಿವರ ನಡುವೆ ಹೊಂದಾಣಿಕೆ ತರುವ ನಿಟ್ಟಿನಲ್ಲಿ ಈ ಔತಣ ಕೂಟ ಮಹತ್ವದ್ದಾಗಿದೆ ಎಂದು ಹೇಳಲಾಗುತ್ತಿದೆ.

ಜೊತೆಗೆ ಸಚಿವ ಸಂಪುಟ ವಿಸ್ತರಣೆಯ ಬಗ್ಗೆಯೂ ಇದೇ ವೇಳೆ ಚರ್ಚೆಯಾಗಲಿವೆ ಎಂದು ತಿಳಿದು ಬಂದಿದೆ. ಬಿಹಾರ ವಿಧಾನಸಭೆ ಚುನಾವಣೆ ಬಳಿಕ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂಬ ಚರ್ಚೆಗಳಿದ್ದು, ಸಂಪುಟದಿಂದ ನಿರ್ಗಮಿಸುವ ಸಚಿವರ ಮನವೊಲಿಸಲು ಸಭೆ ಮುಖ್ಯಮಂತ್ರಿ ಔತಣ ಕೂಟ ಆಯೋಜಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಸಕಾರ ಮುಂದಿನ ಎರಡೂವರೆ ವರ್ಷ ಅವಧಿಯಲ್ಲೂ ಯಾವುದೇ ತಕರಾರು ಇಲ್ಲದೆ ಸುಲಲಿತವಾಗಿ ನಡೆಯಲು ಈ ಸಭೆ ಅತ್ಯಂತ ಮಹತ್ವ ಪಡೆದುಕೊಂಡಿದೆ. ರಾಜಕೀಯ ವಲಯದಲ್ಲಿಯೂ ನಾನಾ ರೀತಿಯ ಚರ್ಚೆಗೆ ಗ್ರಾಸವಾಗಿದೆ.

ಶೈಕ್ಷಣಿಕ, ಸಾಮಾಜಿಕ, ಸಮೀಕ್ಷೆಗೆ ಸಂಬಂಧ ಪಟ್ಟಂತೆ ಎಲ್ಲಾ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದು, ಸಭೆಯ ಮೂಲಕ ಅಸಮಾಧಾನವನ್ನು ನಿವಾರಿಸುವ ಪ್ರಯತ್ನಕ್ಕೆ ಕೈಹಾಕಿದ್ದಾರೆ ಎನ್ನಲಾಗಿದೆ.

RELATED ARTICLES

Latest News