ಬೆಂಗಳೂರು, ಅ.19- ನಿಮ ಆಸ್ತಿ ದಾಖಲೆ ಸರಿ ಮಾಡಿಸಿಕೊಳ್ಳಲು ಸರ್ಕಾರ ಉತ್ತಮ ಅವಕಾಶ ಕಲ್ಪಿಸಿದ್ದು, ಎಲ್ಲರೂ ಇ ಖಾತಾ ಮಾಡಿಸಿಕೊಳ್ಳಿ. ಸರ್ಕಾರ ಬಿ ಖಾತೆಯಿಂದ ಎ ಖಾತಾಗೆ ಪರಿವರ್ತನೆ ಮಾಡಲು ಅವಕಾಶ ಕಲ್ಪಿಸಿದ್ದು, ಈ ಅವಕಾಶವನ್ನು ಯಾರೂ ಕಳೆದುಕೊಳ್ಳಬೇಡಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಲಹೆ ನೀಡಿದ್ದಾರೆ.
ಬೆಂಗಳೂರಿನ ಕೋರಮಂಗಲದ ವೀರ ಯೋಧ ಉದ್ಯಾನವನದಲ್ಲಿ ಭಾನುವಾರ ಹಮಿಕೊಂಡಿದ್ದ ಬೆಂಗಳೂರು ನಡಿಗೆ ಅಭಿಯಾನದ ಅಂಗವಾಗಿ ನಾಗರಿಕರೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ಸಿಎ ನಿವೇಶನದ ಬಗ್ಗೆ ಸಾರ್ವಜನಿಕರು ಪ್ರಸ್ತಾಪ ಮಾಡಿದ್ದು, ಸರ್ಕಾರ ಈ ವಿಚಾರದಲ್ಲಿ ಪ್ರತ್ಯೇಕ ನೀತಿ ರೂಪಿಸುತ್ತಿದೆ. ಈ ಹಿಂದೆ ಬಿಡಿಎ ನಿಭಾಯಿಸುತ್ತಿದ್ದ ಯೋಜನಾ ಪ್ರಾಧಿಕಾರದ ಜವಾಬ್ದಾರಿಯನ್ನು ಜಿಬಿಎಗೆ ವರ್ಗಾವಣೆ ಮಾಡಿದ್ದೇನೆ. ಬೆಂಗಳೂರಿನಲ್ಲಿ ದೊಡ್ಡ ಯೋಜನೆಗಳನ್ನು ಜಿಬಿಎ ನಿಭಾಯಿಸಲಿದ್ದು, ಉಳಿದ ಸಣ್ಣ ಯೋಜನೆಗಳನ್ನು ಪಾಲಿಕೆಗಳು ಮಾಡಲಿವೆ ಎಂದರು.
ಜನರ ಕಲ್ಯಾಣಕ್ಕೆ ಪ್ರತಿ ವರ್ಷ 1 ಲಕ್ಷ ಕೋಟಿ ವೆಚ್ಚ: ಜನರ ಹೊಟ್ಟೆ ತುಂಬಿಸಬೇಕು. ಬೆಲೆ ಏರಿಕೆ ಸಮಸ್ಯೆಯಿಂದ ಜನರನ್ನು ರಕ್ಷಿಸಬೇಕು ಎಂದು ಐದು ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದೇವೆ. ಪ್ರತಿ ವರ್ಷ ಇದಕ್ಕೆ 52 ಸಾವಿರ ಕೋಟಿ ವೆಚ್ಚ ಮಾಡುತ್ತಿದ್ದೇವೆ. ಇದರ ಜೊತೆಗೆ ರೈತರಿಗೆ ಉಚಿತ ವಿದ್ಯುತ್ ನೀಡಲು ನಾವು ಪ್ರತಿ ವರ್ಷ 20 ಸಾವಿರ ಕೋಟಿ ನೀಡುತ್ತಿದ್ದೇವೆ. ಹೀಗೆ ಜನರ ಕಲ್ಯಾಣ ಕಾರ್ಯಕ್ರಮಗಳಿಗೆ 1 ಲಕ್ಷ ಕೋಟಿಯಷ್ಟು ಮೀಸಲಿಡುತ್ತಿದ್ದೇವೆ ಎಂದರು.
ರಾಜ್ಯ ಸರ್ಕಾರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದ್ದು, ನೀವೆಲ್ಲರೂ ಅದರಲ್ಲಿ ಭಾಗವಹಿಸಬೇಕು. ಇದನ್ನು ಎಲ್ಲ ಸಮಾಜದ ಭವಿಷ್ಯಕ್ಕಾಗಿ ಮಾಡುತ್ತಿದ್ದೇವೆ. ನೀವು ಅಗತ್ಯವಾದ ಮಾಹಿತಿ ನೀಡಿ, ಅನಗತ್ಯ ಎನಿಸಿದ ಪ್ರಶ್ನೆಗಳನ್ನು ನಿರ್ಲಕ್ಷಿಸಿ ಎಂದು ಹೇಳಿದರು.
ರಾಮಲಿಂಗಾ ರೆಡ್ಡಿ ಅವರ ಬಗ್ಗೆ ನೀವು ಅಪಾರ ವಿಶ್ವಾಸ ವ್ಯಕ್ತಪಡಿಸಿದ್ದೀರಿ. ಬೆಂಗಳೂರು ದಕ್ಷಿಣ ಉಸ್ತುವಾರಿ ಸಚಿವರಾಗಿರುವ ಅವರು ಹೆಚ್ಚು ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ. ಇಂತಹ ಹಿರಿಯ ನಾಯಕರನ್ನು ಹೊಂದಿರುವುದು ನಿಮ ಭಾಗ್ಯ. ನೀವು 8 ಬಾರಿ ಅವರನ್ನು ಆಯ್ಕೆ ಮಾಡಿದ್ದು, ಬೆಂಗಳೂರನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ನಮಗೆ ಮಾರ್ಗದರ್ಶನ ನೀಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದರು.
ಪ್ರಶ್ನೋತ್ತರ:
ಬೆಂಗಳೂರು ನಡಿಗೆ ಕಾರ್ಯಕ್ರಮದ ಬಗ್ಗೆ ಕೇಳಿದಾಗ, ಜನರ ಅಭಿಪ್ರಾಯ, ಸಲಹೆ, ಅಹವಾಲು ಕೇಳಬೇಕು, ಉತ್ತಮ ಆಡಳಿತ ನೀಡಬೇಕು ಎಂದು ನಾನೇ ಜನರ ಬಳಿಗೆ ತಲುಪುತ್ತಿದ್ದೇನೆ. ಜನರಿಂದಲೂ ಉತ್ತಮ ಸಹಕಾರ ನೀಡುತ್ತಿದ್ದು, ನನಗೂ ಇದು ಹೊಸ ಅನುಭವ ನೀಡಿದೆ. ಜನರ ಅಹವಾಲನ್ನು ಅಧಿಕಾರಿಗಳು ಬಗೆಹರಿಸಲಿದ್ದಾರೆ ಎಂದರು.ಈಜಿಪುರ ಮೇಲ್ಸೇತುವೆ ಯಾವಾಗ ಮುಗಿಯಲಿದೆ ಎಂದು ಕೇಳಿದಾಗ, ಅದು ಆದಷ್ಟು ಬೇಗ ಮುಕ್ತಾಯವಾಗುತ್ತದೆ ಎಂದರು.
ಐಟಿ ಬಿಟಿ ಕಂಪನಿಗಳ ಸಿಇಓಗಳ ಸಭೆ ಯಾವಾಗ ಮಾಡುತ್ತೀರಿ ಎಂದು ಕೇಳಿದಾಗ, ನಾನು ಅವರೊಂದಿಗೆ ಪ್ರತ್ಯೇಕ ಸಭೆ ಮಾಡುವೆ. ಸಚಿವರಾದ ಪ್ರಿಯಾಕ್ ಖರ್ಗೆ, ಎಂ.ಬಿ ಪಾಟೀಲ್ ಅವರ ಜೊತೆಗೂಡಿ ಚರ್ಚೆ ಮಾಡುತ್ತೇವೆ ಎಂದರು.
ಖಾತಾ ಪರಿವರ್ತನೆಗೆ ಶೇ.5 ಹಣ ಪಾವತಿ ಬಗ್ಗೆ ಕೇಳಿದಾಗ, ಜನರು ತಮ ಆಸ್ತಿ ದಾಖಲೆ ಸರಿ ಮಾಡಿಕೊಳ್ಳಲು ಇದು ದೊಡ್ಡ ಮೊತ್ತವಲ್ಲ. ಖಾತಾ ಪರಿವರ್ತನೆಯಿಂದ ಅವರ ಆಸ್ತಿ ಮೌಲ್ಯ ದುಪ್ಪಟ್ಟಾಗಲಿದೆ. ಅನೇಕರು ಕಂದಾಯ ನಿವೇಶನ ಖರೀದಿ ಮಾಡಿದ್ದು, ನಾವು ಎಲ್ಲರಿಗೂ ಸಮನಾದ ಸೇವೆ ನೀಡಬೇಕು. ಹೀಗಾಗಿ ಅವರ ಸಹಕಾರ ಬೇಕಾಗಿದೆ.
ಈ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಲಿದ್ದು, ಯಾರೂ ಲಂಚ ನೀಡುವ ಅಗತ್ಯವಿಲ್ಲ ಎಂದು ತಿಳಿಸಿದರು.ಆರ್‌ಎಸ್‌ಎಸ್ ನಿರ್ಬಂಧ ವಿಚಾರವಾಗಿ ಕೇಳಿದಾಗ, ಆರ್‌ಎಸ್‌ಎಸ್ ವಿಚಾರದಲ್ಲಿ ನಾವು ಹೊಸ ನಿಯಮ ರೂಪಿಸಿಲ್ಲ. ಬಿಜೆಪಿ ಸರ್ಕಾರದ ಆದೇಶವನ್ನೇ ಹೊರಡಿಸಿದ್ದೇವೆ. 2013ರಲ್ಲಿ ಜಗದೀಶ್ ಶೆಟ್ಟರ್ ಅವರ ಸರ್ಕಾರದ ಆದೇಶವನ್ನು ಮತ್ತೆ ಜಾರಿಗೊಳಿಸುತ್ತಿದ್ದೇವೆ ಎಂದರು.