Wednesday, September 3, 2025
Homeರಾಜ್ಯಪ್ರಗತಿ ಪರಿಶೀಲನಾ ಸಭೆಯಲ್ಲಿ ಡಿಸಿಎಂ ಡಿಕೆಶಿ - ತಿಮ್ಮಾಪುರ್‌ ನಡುವೆ ಜಟಾಪಟಿ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಿಸಿಎಂ ಡಿಕೆಶಿ – ತಿಮ್ಮಾಪುರ್‌ ನಡುವೆ ಜಟಾಪಟಿ

DCM DK Shivakumar and Excise Minister R.B. Timapur clashed in review meeting

ಬೆಂಗಳೂರು, ಸೆ.3- ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿಗಳಿಗೆ ಸಂಬಂಧಪಟ್ಟಂತೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಅಬಕಾರಿ ಸಚಿವ ಆರ್‌.ಬಿ. ತಿಮಾಪುರ ನಡುವೆ ಜಟಾಪಟಿ ನಡೆದಿದೆ.

ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಅನುಷ್ಠಾನಕ್ಕೆ ಸಂಬಂಧಪಟ್ಟಂತೆ ಭೂ ಸ್ವಾಧೀನ, ಪುನರ್‌ ವಸತಿ, ಪುನರ್‌ ನಿರ್ಮಾಣ, ಭೂ ಪರಿಹಾರ, ವಿವಿಧ ನ್ಯಾಯಾಲಯಗಳಲ್ಲಿ ಹೆಚ್ಚುವರಿ ಪರಿಹಾರ ಕೋರಿ ದಾಖಲಿಸಿರುವ ಪ್ರಕರಣಗಳ ಕುರಿತು ಜಲ ಸಂಪನೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕಮಾರ್‌ ಸಭೆ ಕರೆದಿದ್ದರು. ಸಚಿವರಾದ ಪ್ರಿಯಾಂಕ ಖರ್ಗೆ, ಎನ್‌.ಎಸ್‌‍.ಬೋಸ್‌‍ರಾಜ್‌, ಶಿವಾನಂದ ಪಾಟೀಲ್‌, ಆರ್‌.ಬಿ. ತಿಮಾಪುರ್‌, ಶರಣ ಬಸಪ್ಪ ದರ್ಶನಾಪೂರ್‌, ಡಿ.ಸುಧಾಕರ್‌ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರತಿ ಎಕರೆಗೆ 40 ರಿಂದ 50 ಲಕ್ಷ ರೂ. ಗಳ ಭೂ ಪರಿಹಾರ ನೀಡಬೇಕೆಂದು ಸಭೆಯಲ್ಲಿ ಆರ್‌.ಬಿ.ತಿಮಾಪುರ್‌ ಆಗ್ರಹಿಸಿದ್ದರು. ಇದರಿಂದ ಸಿಟ್ಟಾದ ಡಿ.ಕೆ.ಶಿವಕಮಾರ್‌, ಮಿಸ್ಟರ್‌ ಮಿನಿಸ್ಟರ್‌ ಸಂಪುಟದ ಸಚಿವರಾಗಿ ನೀವು ಈ ರೀತಿ ಮಾತನಾಡುವುದು ಸರಿಯಲ್ಲ. ಈ ಹಿಂದೆ ಜಲಸಂಪನೂಲ ಸಚಿವರು ಮತ್ತು ಮುಖ್ಯಮಂತ್ರಿಯಾಗಿದ್ದ ಬಸವರಾಜ್‌ ಬೊಮಾಯಿ ಅವರು ಭೂ ಪರಿಹಾರಕ್ಕೆ ಒಂದು ದರ ನಿಗದಿ ಪಡಿಸಿದ್ದಾರೆ. ಈಗ ಸಚಿವರಾಗಿರುವ ನಿಮಗೆ ಗೌರವ ಸಿಗಬೇಕು ಎಂಬ ಕಾರಣಕ್ಕೆ ಅದರ ಮೇಲೆ ಒಂದಿಷ್ಟು ಹೆಚ್ಚಳ ಮಾಡಿ ಪರಿಹಾರ ನೀಡಬಹುದು. ನೀನು ಹೇಳಿದಂತೆ 40 ರಿಂದ 50ಲಕ್ಷ ರೂ.ಗಳವರೆಗೂ ನೀಡಲು ಸಾಧ್ಯವಿಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ.

ಜನರ ಅಭಿಪ್ರಾಯಗಳನ್ನು ನಿಮ ಗಮನಕ್ಕೆ ತರುವುದು ನನ್ನ ಜವಾಬ್ದಾರಿ. ಆ ಕೆಲಸ ಮಾಡಿದ್ದೇನೆ. ನಿಮ ಅನುಭವ ಹಾಗೂ ಅವಕಾಶದಲ್ಲಿ ನಿರ್ಧಾರ ತೆಗೆದುಕೊಳ್ಳಿ ಎಂದು ತಿಮಾಪುರ್‌ ಅಸಮಾಧಾನದಿಂದಲೇ ಪ್ರತಿಕ್ರಿಯಿಸಿದ್ದಾರೆ.ಶಾಸಕರು, ರೈತ ಮುಖಂಡರುಗಳು ಮಾತನಾಡಲಿ. ಇಂತಹ ವೇದಿಕೆಯಲ್ಲಿ ನೀವು ಸಚಿವರಾಗಿ ಈ ರೀತಿ ಮಾತನಾಡಬಾರದು ಎಂದು ಡಿ.ಕೆ.ಶಿವಕುಮಾರ್‌ ಗರಂ ಆಗಿದ್ದಾರೆ.

ಮಾಧ್ಯಮಗಳ ಮುಂದೆ ಈ ಮಾತುಕತೆ ನಡೆಯುತ್ತಿತ್ತು. ಜಟಾಪಟಿ ಬಹಿರಂಗಗೊಂಡು ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಸೃಷ್ಟಿಯಾಗಬಾರದು ಎಂಬ ಕಾರಣಕ್ಕಾಗಿ ಸಚಿವ ಪ್ರಿಯಾಂಕ ಖರ್ಗೆ ಮಾಧ್ಯಮಗಳ ಕ್ಯಾಮೆರಾಮನ್‌ಗಳನ್ನು ಹೊರಗೆ ಕಳುಹಿಸಲು ಪ್ರಯತ್ನಿಸಿದರು. ಇದಕ್ಕೂ ಅವಕಾಶ ನೀಡದ ಡಿ.ಕೆ.ಶಿವಕುಮಾರ್‌ ಮಾಧ್ಯಮಗಳು ಇರಲಿ ಎಂದು ಹೇಳಿ ಅವರು ಮಾತನಾಡಲಿ ಎಂದು ಶಾಸಕರಿಗೆ ಅವಕಾಶ ಮಾಡಿಕೊಟ್ಟರು.

ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನಾ ವೆಚ್ಚ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇತ್ತೀಚಿನ ವರದಿಗಳ ಪ್ರಕಾರ ಯೋಜನಾ ವೆಚ್ಚ 75 ಸಾವಿರ ಕೋಟಿಯಿಂದ ಒಂದು ಲಕ್ಷ ಕೋಟಿಗೂ ಮಿಗಿಲಾಗಿ ಹೆಚ್ಚಳವಾಗಿದೆ. ಯೋಜನೆಯನ್ನು ಅನುಷ್ಠಾನಕ್ಕೆ ತಂದು ಪೂರ್ಣಗೊಳಿಸುವುದಾಗಿ ಎಲ್ಲಾ ಸರ್ಕಾರಗಳು ಭರವಸೆ ನೀಡುತ್ತಲೇ ಬಂದಿವೆ.

ಆದರೆ ಭೂಸ್ವಾಧೀನದ ಖರ್ಚುವೆಚ್ಚಗಳು ದುಬಾರಿಯಾಗಿರುವ ಕಾರಣಕ್ಕೆ ಯೋಜನೆ ಆರಂಭಿಕ ಹಂತದಲ್ಲೇ ಇದೆ. ಯೋಜನೆಗೆ ತಾರ್ಕಿಕ ಅಂತ್ಯ ಕಾಣಿಸಬೇಕು ಎಂಬ ಕಾರಣಕ್ಕೆ ಡಿ.ಕೆ.ಶಿವಕುಮಾರ್‌ ಅವರು ಮಹತ್ವದ ಸಭೆ ನಡೆಸಿದ್ದರು. ಸಭೆಯಲ್ಲಿ ಪರಿಹಾರ ಹೆಚ್ಚಳದ ಬಗ್ಗೆ ಪ್ರತಿಪಾದಿಸಿದ ಕಾರಣಕ್ಕೆ ಸಚಿವ ತಿಮಾಪುರ್‌ ಅವರು ಡಿ.ಕೆ.ಶಿವಕುಮಾರ್‌ ಅವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

RELATED ARTICLES

Latest News