ಬೆಂಗಳೂರು, ಆ.26- ವಿಧಾನಸಭೆಯಲ್ಲಿ ನಮಸ್ತೇ ಸದಾ ವತ್ಸಲೆ ಎಂದು ಆರ್‌ಎಸ್‌ಎಸ್‌ನ ಪ್ರಾರ್ಥನೆ ಮಾಡಿದ್ದು, ತಪ್ಪಾಗಿದ್ದರೆ ಪಕ್ಷದ ಕಾರ್ಯಕರ್ತರು, ಮುಖಂಡರು, ಇಂಡಿಯಾ ರಾಜಕೀಯ ಕೂಟದ ಮುಖಂಡರ ಕ್ಷಮೆ ಕೇಳುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಪ್ರಕರಣದ ಕುರಿತು ಚರ್ಚೆ ನಡೆಯುತ್ತಿದ್ದಾಗ ನಾನು ವಿರೋಧ ಪಕ್ಷದ ನಾಯಕ ಆರ್.ಆಶೋಕ್ ಅವರ ಹಿನ್ನೆಲೆಯನ್ನು ಹೇಳುವ ಸಲುವಾಗಿ ನಮಸ್ತೆ ಸದಾ ವತ್ಸಲೆ ಎಂದು ಹಾಡಿದ್ದೇನೆ. ಇದರಲ್ಲಿ ಆರ್‌ಎಸ್‌ಎಸ್ ಅನ್ನು ಹೊಗಳುವ ಉದ್ದೇಶ ಇರಲಿಲ್ಲ ಎಂದಿದ್ದಾರೆ.
ನನ್ನ ಜೀವನ ಕಾಂಗ್ರೆಸ್ ಕಾರ್ಯಕರ್ತರ ಬದುಕಿಗೆ ಮೆಟ್ಟಿಲು ಆಗಬೇಕೆ ಹೊರತು, ಭಾವನೆಗಳಿಗೆ ಧಕ್ಕೆಯಾಗಬಾರದು. ನಮ ಪಕ್ಷದ ಹಿರಿಯ ನಾಯಕರುಗಳು ದೊಡ್ಡ ದೊಡ್ಡ ಸಲಹೆಗಳನ್ನು ನೀಡಿದ್ದಾರೆ. ಅದನ್ನು ಗೌರವಿಸುತ್ತೇನೆ. ಆದರೆ ಮಾಧ್ಯಮಗಳಲ್ಲಿ ಮಾತನಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ನೇರವಾಗಿ ಕಾಂಗ್ರೆಸ್ ಕಚೇರಿಗೆ ಬನ್ನಿ, ಸಭೆ ಮಾಡಿ ಚರ್ಚಿಸಿ ಎಂದು ಮನವಿ ಮಾಡಿದರು.
ಎಲ್ಲರಿಗಿಂತ ದೊಡ್ಡವನೆಂಬ ಭಾವನೆ ನನಗೆ ಇಲ್ಲ. ಯಾರೇ ಸಲಹೆ ನೀಡಿದ್ದರೂ ಸ್ವೀಕರಿಸುತ್ತೇನೆ. ಹಲವಾರು ಬಾರಿ ನನ್ನ ತಪ್ಪುಗಳನ್ನು ತಿದ್ದಿದ್ದಾರೆ. ನಾನು ಗಾಂಧಿ ಪರಿವಾರದ ಮೇಲೆ ನಿಷ್ಠೆ ಇರುವವನು. ಮಲ್ಲಿಕಾರ್ಜುನ್ ಖರ್ಗೆ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡಿದ್ದೇನೆ ಎಂದರು.
ಈ ಹಿಂದೆ ಮಹಾರಾಷ್ಟ್ರದಲ್ಲಿ ರಾಜಕೀಯ ಏರಿಳಿತವಾದಾಗ 100 ಜನ ಶಾಸಕರನ್ನು ಬೆಂಗಳೂರಿಗೆ ಕರೆ ತಂದು ಕೂಡಿಡಲಾಗಿತ್ತು. ಆ ವೇಳೆ ಜಿಂಕೆ ಮಾಂಸ ಬಡಿಸಿದ್ದಾರೆ ಎಂಬ ಆರೋಪ ಮಾಡಿ, ಷಡ್ಯಂತ್ರ ನಡೆಸಿದ್ದರು. ಹೋಟೆಲ್‌ನವರ ಮೇಲೆ ಆದಾಯ ತೆರಿಗೆ ದಾಳಿಯಾಗಿತ್ತು.
ಗುಜರಾತಿನ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರಿಗೆ ಆಶ್ರಯ ನೀಡಿದ್ದಕ್ಕಾಗಿ ನನ್ನ ಸಂಬಂಧಿಕರು ಹಾಗೂ ಸ್ನೇಹಿತರಾದ 77ಕ್ಕೂ ಹೆಚ್ಚು ಜನರ ಮೇಲೆ ದಾಳಿಯಾಗಿತ್ತು. 400 ಕೇಸ್‌ಗಳನ್ನು ದಾಖಲಿಸಿದ್ದರು.
ಇಡಿ, ಆದಾಯ ತೆರಿಗೆ, ಸಿಬಿಐ ತನಿಖೆಗಳನ್ನು ಮಾಡಿಸಲಾಯಿತು. ಇಡಿ ಪ್ರಕರಣದಲ್ಲಿ ನನ್ನನ್ನು ಬಂಧಿಸಿ ತಿಹಾರ್ ಜೈಲಿನಲ್ಲಿಟ್ಟಿದ್ದರು. ಒಂದು ಕುರ್ಚಿಯೂ ಇಲ್ಲದ 10್ಡ10 ಅಡಿ ವಿಸ್ತೀರ್ಣದ ಶೌಚಾಲಯ ಸಹಿತ ಕೊಠಡಿಯಲ್ಲಿ ಇರಿಸಲಾಗಿತ್ತು. ನೆಲದ ಮೇಲೆ ಮಲಗುತ್ತಿದ್ದೆ, ಜೈಲಿನ ಊಟ ಮಾಡುತ್ತಿದ್ದೆ. ವಿಚಾರಣೆಯ ಸಂದರ್ಭದಲ್ಲಿ ದೀರ್ಘಕಾಲ ನಿಲ್ಲಿಸಿದ್ದರಿಂದ ಮೊಣಕಾಲಿನ ನೋವು ಹೆಚ್ಚಾಗಿತ್ತು. ಜೈಲಿನ ಯಾತನೆಗಳ ಬಗ್ಗೆ ಬೇರೆ ಸಂದರ್ಭದಲ್ಲಿ ಮಾತನಾಡುತ್ತೇನೆ ಎಂದರು.
ಜಾರಿ ನಿರ್ದೇಶನಾಲಯದ ಪ್ರಕರಣವನ್ನು ಸುಪ್ರೀಂಕೋರ್ಟ್ ಕೊನೆಗೆ ವಜಾಗೊಳಿಸಿತ್ತು ಅದರ ಬಗ್ಗೆ ಯಾರೂ ಮಾತನಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿಂದೆ ಎಸ್.ಎಂ.ಕೃಷ್ಣ ಅವರು ಪಕ್ಷದ ಅಧ್ಯಕ್ಷರಾಗಿದ್ದಾಗ ಪಾಂಚಜನ್ಯ ಯಾತ್ರೆ ಮಾಡಲಾಯಿತು. ಯಾತ್ರೆಗೆ ಪಾಂಚಜನ್ಯ ಎಂದು ಹೆಸರಿಟ್ಟಿದ್ದಕ್ಕಾಗಿ ಕೆಂದ್ರ ಸಚಿವರೊಬ್ಬರು ಸೋನಿಯಾ ಗಾಂಧಿ ಅವರ ಬಳಿ ನನ್ನ ವಿರುದ್ಧ ದೂರು ನೀಡಿದ್ದರು. ನಾನು ಪಾಂಚಜನ್ಯ ಎಂದರೆ ಏನೆಂದು ವಿವರಿಸಿದ್ದೆ. ನಂತರ ಯಾತ್ರೆ ಮಾಡಿ ಗೆದ್ದೆವು, ಸಚಿವರಾದೆವು ಎಂದರು.
ಈಗಲೂ ನನ್ನ ಹೇಳಿಕೆಯನ್ನು ಎಲ್ಲೆಲ್ಲಿ ಕಟ್ ಆ್ಯಂಡ್ ಪೇಸ್ಟ್ ಮಾಡಿ ಕಳುಹಿಸಲಾಗುತ್ತಿದೆ ಎಂದು ನನಗೆ ಗೊತ್ತಿದೆ. ರಾಜಕೀಯ ವಿದ್ಯಾರ್ಥಿಯಾಗಿ ನಾನು ಎಲ್ಲಾ ಪಕ್ಷಗಳ ಸಿದ್ಧಾಂತಗಳನ್ನು ತಿಳಿದುಕೊಳ್ಳಬೇಕು. ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ ಸೇರಿದಂತೆ ಹಲವು ಧರ್ಮಗಳ ಆಚರಣೆಗಳನ್ನು ಅರಿತುಕೊಳ್ಳಬೇಕಾಗುತ್ತದೆ. ನನಗೆ ಜಾತಿಯ ಮೇಲೆ ನಂಬಿಕೆಯಿಲ್ಲ. ನಾನೊಬ್ಬ ಜಾತ್ಯತೀತ ವ್ಯಕ್ತಿ. ಪ್ರತಿದಿನ ನಾನು ನಂಬುವ ಅಜ್ಜಯ್ಯನನ್ನು ಪೂಜಿಸುತ್ತೇನೆ. ಧರ್ಮಸ್ಥಳದ ಬೊಟ್ಟು ಇಟ್ಟುಕೊಂಡೇ ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.ನಾನು ಹುಟ್ಟಾ ಕಾಂಗ್ರೆಸ್ಸಿಗ. ಸಾಯುವುದು ಕಾಂಗ್ರೆಸ್ಸಿನವನಾಗಿ ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ಎಂದು ತಿರುಗೇಟು ನೀಡಿದರು.