Saturday, October 18, 2025
Homeಬೆಂಗಳೂರುಪಾರ್ಕ್‌ನಲ್ಲಿ ನಾಗರಿಕರ ಸಮಸ್ಯೆ ಆಲಿಸಿದ ಡಿಸಿಎಂ ಡಿಕೆಶಿ

ಪಾರ್ಕ್‌ನಲ್ಲಿ ನಾಗರಿಕರ ಸಮಸ್ಯೆ ಆಲಿಸಿದ ಡಿಸಿಎಂ ಡಿಕೆಶಿ

DCM DK Shivakumar listens to citizens' problems in park

ಬೆಂಗಳೂರು, ಅ.18- ಜನಸಾಮಾನ್ಯರ ಸಮಸ್ಯೆಯನ್ನು ತಿಳಿದುಕೊಳ್ಳಲು ಬೆಂಗಳೂರು ನಗರಾಭಿವೃದ್ಧಿ ಸಚಿವರು ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಇಂದು ಕೆಆರ್‌ಪುರಂನ ಟಿ.ಸಿ. ಪಾಳ್ಯದ ವೆಂಗಯ್ಯ ಇಕೋ ಪಾರ್ಕ್‌ನಲ್ಲಿ ನಾಗರಿಕರ ಸ್ಪಂದನೆ ಕಾರ್ಯಕ್ರಮ ನಡೆಸಿದರು.

ಈ ವೇಳೆ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು, ಚ ಅಧಿಕಾರಿಗಳ ಭ್ರಷ್ಟಾಚಾರ ಹಾಗೂ ನಾಗರಿಕ ಸೌಲಭ್ಯಗಳ ಕೊರತೆಯ ದೂರಿನ ಸರಮಾಲೆಗಳೇ ಕಂಡು ಬಂದವು. ಆಸ್ಪತ್ರೆ, ಸಿಸಿಟಿವಿ ಸ್ಕೈ ವಾಕ್‌ಗಳು, ಒತ್ತುವರಿ ಸಶಾನಕ್ಕಾಗಿ ಜಾಗ ಸೇರಿದಂತೆ ನಾನಾ ಬೇಡಿಕೆಗಳನ್ನು ಸಾರ್ವಜನಿಕರು ಉಪಮುಖ್ಯಮಂತ್ರಿ ಮುಂದೆ ಮಂಡಿಸಿದರು.

ಇದೇ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್‌ ಅವರು ರಾಜಕಾಲುವೆ ಕೆರೆ ಭಾಗದಲ್ಲಿ ವಾಸಿಸುವ ನಾಗರಿಕರ ಸಮಸ್ಯೆಗಳನ್ನು ಆಲಿಸಿದರು. ನಾಗರಿಕರು ತಮ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಂಡರು.

ಎಆರ್‌ಓ ಬಸವರಾಜ್‌ ಮತ್ತು ವಿಜಿನಾಪುರ ಆರ್‌ಐ ಖಾತೆ ಬದಲಾವಣೆಗೆ 15 ರಿಂದ 20 ಸಾವಿರ ಲಂಚ ಕೇಳುತ್ತಿದ್ದಾರೆ, 2 ತಿಂಗಳಿನಿಂದಲೂ ಅನಗತ್ಯವಾಗಿ ಅಲೆಸುತ್ತಿದ್ದಾರೆ ಎಂದು ನಾಗರಿಕರೊಬ್ಬರು ದೂರು ನೀಡಿದರು. ಆಧಾರರಹಿತವಾಗಿ ಆರೋಪ ಮಾಡಬೇಡಿ ಎಂದು ಡಿ.ಕೆ.ಶಿವಕುಮಾರ್‌ ಎಚ್ಚರಿಕೆ ನೀಡಿದರು. ಆದರೆ ಸದರಿ ವ್ಯಕ್ತಿ ತಮ ಆರೋಪವನ್ನು ಪುನರುಚ್ಚರಿಸಿದಾಗ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡುವುದಾಗಿ ಡಿ.ಕೆ.ಶಿವಕುಮಾರ್‌ ಪ್ರಕಟಿಸಿದರು.

ವಿಜಿನಾಪುರ ಎನ್‌ಆರ್‌ ಬಡಾವಣೆಯ ವಿಘ್ನೇಶ್‌ ಎಂಬುವರು ತಾವು ಎಲ್ಲಾ ತೆರಿಗೆಗಳನ್ನು ಪಾವತಿಸಿ ಅನುಮತಿ ಪಡೆದು, ಮನೆ ನಿರ್ಮಿಸಲು ಮುಂದಾದಾಗ ನೆರೆಯ ಮಲ್ಲಿಕಾರ್ಜುನ ಎಂಬುವರು ಅಡ್ಡಿ ಪಡಿಸಿದ್ದಾರೆ. ಕಷ್ಟಪಟ್ಟು ಮನೆ ಪೂರ್ಣಗೊಳಿಸಿದ್ದೇನೆ. ಈಗ ಒಳಗೆ ಹೋಗಲು ಬಿಡುತ್ತಿಲ್ಲ, ರೌಡಿಗಳನ್ನು ಬಿಟ್ಟು ಬೆದರಿಸುತ್ತಿದ್ದಾರೆ. 10 ಲಕ್ಷ ರೂ.ಹಣ ನೀಡಬೇಕು. ಇಲ್ಲವಾದರೆ, ಡಿ.ಕೆ.ಶಿವಕುಮಾರ್‌ ನನಗೆ ಪರಿಚಿತರಿದ್ದು, ತೊಂದರೆ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾರೆ.

ಸಂಘಟನೆಯ ಹೆಸರು ಹೇಳಿ ನನ್ನನ್ನು ಬೆದರಿಸುವ ಪ್ರಯತ್ನಗಳಾಗುತ್ತಿವೆ ಎಂದು ಅಳುತ್ತಾ ವಿವರಿಸಿದರು. ಇಲ್ಲಿ ನಾಟಕ ಮಾಡಬೇಡ, ಪೊಲೀಸ್‌‍ ದೂರು ಕೊಡು ಯಾರೇ ಆದರೂ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಡಿ.ಕೆ.ಶಿವಕುಮಾರ್‌ ಭರವಸೆ ನೀಡಿದರು. ನಿಮ ಉಪಕಾರವನ್ನು ಮರೆಯುವುದಿಲ್ಲ, ನಮ ಮನೆಗೆ ನಿಮ ಹೆಸರಿಡುತ್ತೇನೆ ಎಂದು ವಿಘ್ನೇಶ್‌ ಹೇಳಿದರು.
ಕೆಆರ್‌ಪುರಂ ಸಂತೆಗೆ 250 ವರ್ಷಗಳ ಇತಿಹಾಸವಿದೆ. ಆದರ ಸೌಲಭ್ಯಗಳು ಇಲ್ಲ ಎಂದು ನಾಗರಿಕರೊಬ್ಬರು ದೂರಿದರು. ಸಂತೆ ಮೈದಾನದಲ್ಲಿ ಬೀದಿ ಬದಿಯ ವ್ಯಾಪಾರಿಗಳಿಂದ ಸಂಚಾರ ದಟ್ಟಣೆಯಾಗುತ್ತಿದೆ ಎಂದು ಮಹಿಳೆಯೊಬ್ಬರು ಆಕ್ಷೇಪಿಸಿದರು. ಈ ಸಂತೆಯನ್ನು ಸ್ಥಳಾಂತರಿಸಬೇಕೆಂಬ ಬೇಡಿಕೆಯೂ ಕೇಳಿ ಬಂತು.

ಇಸ್ರೋದ ಮಾಜಿ ವಿಜ್ಞಾನಿ ಕೋದಂಡ ಎಂಬುವರು ಕಾವೇರಿ ನೀರಿನ ಸಮಸ್ಯೆ, ಅಸಮರ್ಪಕ ತಾಜ್ಯವಿಲೇವಾರಿ, ಕೆಆರ್‌ಪುರಂನಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಮೆಲ್ಸೇತುವೆ ನಿರ್ಮಾಣ, ರಾತ್ರಿ ಪೊಲೀಸ್‌‍ ಗಸ್ತು ಹೆಚ್ಚಳ, ಸಿಸಿಟಿವಿ ನಿಗಾವಣೆ, ಹೊಸಕೋಟೆ ಮಾರ್ಗಕ್ಕೆ ಕೆಆರ್‌ಪುರಂನಿಂದ ಮೆಟ್ರೋ ಸಂಪರ್ಕ ಸೇರಿದಂತೆ ಹಲವಾರು ಸಮಸ್ಯೆ ಹಾಗೂ ಬೇಡಿಕೆಗಳನ್ನು ಮುಂದಿಟ್ಟರು.
ಚಂದ್ರಮ ಎಂಬ ಮಹಿಳೆ ನಾವು ಕಷ್ಟಪಟ್ಟು ನಿವೇಶನ ಖರೀದಿಸಿದ್ದೇವೆ. ಈಗ ನಮ ನಿವೇಶನಕ್ಕೆ ಹೋಗಲು ರಸ್ತೆಗಳನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದ್ದೇವೆ. ಭೂ ಮಾಲಿಕರು ನಮ ನೆರವಿಗೆ ಬರುತ್ತಿಲ್ಲ ಎಂದು ಅಳಲು ತೋಡಿಕೊಂಡರು. ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲೂ, ರಸ್ತೆಗಳಲ್ಲೂ ಸರ್ಕಾರಿ ಆಸ್ತಿ ಎಂದು ಘೋಷಿಸುವುದಾಗಿ ಪ್ರಕಟಿಸಿದರು.

ಮತ್ತೊಬ್ಬ ಮಹಿಳೆ ಮೈಸೂರಿನಲ್ಲಿ 10 ದಿನಗಳ ಹಿಂದೆ ನಡೆದ ಅತ್ಯಾಚಾರ ಪ್ರಕರಣವನ್ನು ಪ್ರಸ್ತಾಪಿಸಿ, ರೇಪಿಸ್ಟ್‌ಗಳಿಗೆ ಕಠಿಣ ಶಿಕ್ಷೆ ಕೊಡಬೇಕು ಎಂದು ಮನವಿ ಮಾಡಿದರು.
ಬೆಂಗಳೂರಿಗೆ ಸಂಬಂಧಪಟ್ಟ ಸಮಸ್ಯೆಗಳ ಬಗ್ಗೆ ಮಾತನಾಡುವಂತೆ ಡಿ.ಕೆ.ಶಿವಕುಮಾರ್‌ ಸಲಹೆ ನೀಡಿದರು. ಬೆಂಗಳೂರು, ಮೈಸೂರು ಸೇರಿ ಎಲ್ಲಾ ಕಡೆಯಲ್ಲೂ ಹೆಣ್ಣು ಮಕ್ಕಳಿದ್ದಾರೆ, ಅತ್ಯಾಚಾರಗಳಾಗುತ್ತಿವೆ. ರಕ್ಷಣೆ ಕೊಡಿ ಎಂದು ಆವೇಶ ಭರಿತರಾಗಿ ಮಾತನಾಡಿದರು.
ಕೆಆರ್‌ಪುರಂನ ಸ್ಕೈ ವಾಕ್‌ಗೆ ಎಲಿವೇಟರ್‌ ಅಳವಡಿಸುವಂತೆ ಬೇಡಿಕೆ ಕೇಳಿ ಬಂತು. ನಾಗರಿಕ ಸೌಲಭ್ಯ ಕೊರತೆ ಹಾಗೂ ಭ್ರಷ್ಟಾಚಾರದ ಬಗ್ಗೆ ಜನ ಸಾಮಾನ್ಯರು ಮುಲಾಜಿಲ್ಲದೆ ಮಾತನಾಡಿದರು.

ಬಳಿಕ ಡಿ.ಕೆ.ಶಿವಕುಮಾರ್‌ ಬೆಂಗಳೂರಿನಲ್ಲಿ 5 ಪಾಲಿಕೆಗಳನ್ನು ನಿರ್ಮಿಸುವ ಮೂಲಕ ಇತಿಹಾಸ ಸೃಷ್ಟಿಸಲಾಗಿದೆ. ಕೆಆರ್‌ಪುರಂ ಭಾಗದ ಪೂರ್ವ ಪಾಲಿಕೆ ಬೆಂಗಳೂರಿನಲ್ಲೇ ಅತೀ ಶ್ರೀಮಂತ ಸಂಸ್ಥೆ. ಇಲ್ಲಿಂದಲೇ ಒಟ್ಟು 6 ಸಾವಿರ ಕೋಟಿ ತೆರಿಗೆ ಬರುತ್ತಿದೆ, ಅದರಲ್ಲಿ ಪೂರ್ವ ಪಾಲಿಕೆಗೆ 1600 ಕೋಟಿ ರೂ. ಗಳನ್ನು ಖರ್ಚು ಮಾಡಲು ಉಳಿಸಲಾಗುತ್ತಿದೆ ಎಂದರು.

ಈ ಮೊದಲು ಇಲ್ಲಿನ ತೆರಿಗೆಯನ್ನು ಬೇರೆ ಬೇರೆ ಪ್ರದೇಶಗಳಿಗೆ ಹಂಚಲಾಗುತ್ತಿತ್ತು. ಹೆಚ್ಚು ತೆರಿಗೆ ಪಾವತಿಸುವ ಈ ಭಾಗದ ಜನರಿಗೆ ಉತ್ತಮ ಮೂಲಭೂತ ಸೌಲಭ್ಯ ಕಲ್ಪಿಸಲು ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನ ಒದಗಿಸಲಾಗುವುದು. ಸದ್ಯಕ್ಕೆ 50 ವಾರ್ಡ್‌ಗಳಿದ್ದು ಹಂತಹಂತವಾಗಿ ಇನ್ನಷ್ಟು ಪ್ರದೇಶಗಳನ್ನು ಸೇರ್ಪಡೆ ಮಾಡುವುದಾಗಿ ತಿಳಿಸಿದರು.
ಪಾಲಿಕೆ ಸದಸ್ಯರಿಗೆ ಅನುದಾನವನ್ನು ಎರಡು ಪಟ್ಟು ಹೆಚ್ಚಿಸಲಾಗಿದೆ. ಇಲ್ಲಿ ಸಮಸ್ಯೆ ಹೇಳಿಕೊಳ್ಳಲಾಗದಿದ್ದವರು 1533 ಸಂಖ್ಯೆ ಸಹಾಯವಾಣಿಗೆ ಕರೆ ಮಾಡಿ, ಸಮಸ್ಯೆಗಳನ್ನು ನೋಂದಾಯಿಸಬಹುದು ಎಂದು ಹೇಳಿದರು.

ಬಿ ಖಾತೆಯಿಂದ ಎ ಖಾತಾ ಪರಿವರ್ತನಾ ಅಭಿಯಾನವನ್ನು ನಾಗರಿಕರು ಸದುಪಯೋಗ ಪಡಿಸಿಕೊಳ್ಳಬೇಕು. ನಗರದಲ್ಲಿ 30 ಸಾವಿರ ಫುಟ್‌ಪಾತ್‌ ವ್ಯಾಪಾರಿಗಳಿದ್ದು, ಅವರಿಗೆ ತಳ್ಳುವ ಗಾಡಿ ಹಾಗೂ ವಾಹನ ನೀಡಲಾಗುತ್ತದೆ ಎಂದರು.

ಸುಪ್ರೀಂಕೋರ್ಟ್‌ನ ಮಾರ್ಗದರ್ಶನ ಪ್ರಕಾರ ಒತ್ತುವರಿಯನ್ನು ನಿರ್ಧಾಕ್ಷಿಣ್ಯವಾಗಿ ತೆರವು ಮಾಡಲಾಗುವುದು. ಮುಂದಿನ ದಿನಗಳಲ್ಲಿ ಮನೆ ನಿರ್ಮಿಸುವಾಗ ಸುತ್ತಮುತ್ತಲೂ ಗಾಳಿ, ಬೆಳಕಿಗೆ ಜಾಗ ಬಿಡಬೇಕು. ಈ ಬಗ್ಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗುವುದು. ರಸ್ತೆ ಹಾಗೂ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡು ನಿರ್ಮಾಣ ಮಾಡಿದರೆ ಮುಲಾಜಿಲ್ಲದೆ ತೆರವು ಮಾಡುತ್ತೇವೆ ಎಂದು ಎಚ್ಚರಿಸಿದರು.

ಮಹದೇವಪುರ, ಕೆಆರ್‌ಪುರಂಗಳಲ್ಲಿ ಹೊಸ ಪಾಲಿಕೆ ಕಚೇರಿಗಳನ್ನು ನಿರ್ಮಿಸಲಾಗುವುದು. ಮಾಹಿತಿ ತಂತ್ರಜ್ಞಾನ ಕಂಪನಿಗಳ ಜೊತೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಮತ್ತೊಂದು ಸಭೆ ನಡೆಸಲಾಗುವುದು. ಆ ದಿನ ಕೈಗಾರಿಕೆ ಐಟಿಬಿಟಿ ಸಚಿವರು ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು.

RELATED ARTICLES

Latest News