ಬೆಂಗಳೂರು,ಅ.16- ಎತ್ತಿನಹೊಳೆ ಯೋಜ ನೆಯಿಂದ ಬೆಂಗಳೂರಿನ ಒಂದು ಭಾಗಕ್ಕೆ ನೀರು ಪೂರೈಸಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ 5ನೇ ಹಂತದ ಯೋಜನೆಯಿಂದ ಬೆಂಗಳೂರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ.
5ನೇ ಹಂತದ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲಾಗಿದೆ. ಎತ್ತಿನಹೊಳೆಯಿಂದ ತಿಪ್ಪಗೊಂಡನಹಳ್ಳಿಗೆ ನೀರು ಪೂರೈಸಲು ಯೋಜನೆ ರೂಪಿಸಲಾಗುತ್ತಿದೆ ಎಂದರು. ಮಳೆ ಬರಬೇಕು, ಎಷ್ಟೇ ಮಳೆ ಬಂದರೂ ಅರ್ಧಗಂಟೆಯಲ್ಲೇ ಅದನ್ನು ಸರಿಪಡಿಸುತ್ತೇವೆ. ಈಗಾಗಲೇ ಪೊಲೀಸರು, ಅಗ್ನಿಶಾಮಕ ದಳ, ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಎಲ್ಲಾ ರೀತಿಯ ಸಿದ್ಧತೆಗಳಾಗಿವೆ. ಸಂಜೆ ಮತ್ತೊಂದು ಸುತ್ತಿನ ಸಭೆ ನಡೆಸಲಾಗುವುದು. ಯಾರೂ ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಮುಂಜಾಗ್ರತೆಯಾಗಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ ಎಂದರು.
ವಿರೋಧ ಪಕ್ಷದವರು ಮಾಡಿದ ಟೀಕೆಗಳು ಸತ್ತುಹೋಗುತ್ತವೆ. ನಾವು ಮಾಡಿದ ಒಳ್ಳೆಯ ಕೆಲಸಗಳು ಉಳಿಯುತ್ತವೆ ಎಂದು ತಿಳಿಸಿದರು.
ಇಂದಿನ ಕಾರ್ಯಕ್ರಮಕ್ಕೆ ಜಪಾನಿನ ಜೈಕದ ಸಚಿವರು ಭಾಗವಹಿಸಿದ್ದಾರೆ. 4,336 ಕೋಟಿ ರೂ.ಗಳ ಆರ್ಥಿಕ ನೆರವನ್ನು ಜೈಕ ಸಂಸ್ಥೆ ನೀಡಿದೆ.
110 ಕಿ.ಮೀ. ದೂರದಿಂದ ನೀರು ತೆಗೆದುಕೊಂಡು ಹೋಗಲಾಗುತ್ತಿದೆ. ಗಂಗಾ, ಯಮುನಾ, ಕಾವೇರಿ, ನರ್ಮದಾ, ತುಂಗೆ ಸೇರಿ ಸಪ್ತನದಿಗಳ ನೀರನ್ನು ಇಲ್ಲಿ ಇಟ್ಟು ಪೂಜೆ ಮಾಡಲಾಗಿದೆ. ದಕ್ಷಿಣ ಭಾರತದ ಗಂಗೆಯೆಂದೇ ಪ್ರಸಿದ್ಧಿಯಾಗಿರುವ ಕಾವೇರಿ ನೀರನ್ನು ಬೆಂಗಳೂರಿಗೆ ಹರಿಸಲಾಗುತ್ತಿದೆ. ಈವರೆಗೂ ಮೂರು ಹಂತದಲ್ಲಿ ಎರಡು ಹಂತದ ಯೋಜನೆಗಳಿಂದ 1440 ಎಂಎಲ್‌ಡಿ ನೀರು ಬೆಂಗಳೂರಿಗೆ ಹರಿಯುತ್ತಿದ್ದು, 5ನೇ ಹಂತದ ಯೋಜನೆಯಲ್ಲಿ ಒಂದೇ ದಿನ 750 ಎಂಎಲ್‌ಡಿ ನೀರು ಹರಿಯುತ್ತಿದೆ ಎಂದು ವಿವರಿಸಿದರು.
ಎಸ್.ಟಿ.ಸೋಮಶೇಖರ್‌ರವರ ಕ್ಷೇತ್ರ ಯಶವಂತಪುರದಿಂದ ಆರಂಭಗೊಂಡು ಕೆ.ಆರ್.ಪುರ, ದಾಸರಹಳ್ಳಿ, ರಾಜರಾಜೇಶ್ವರಿ ನಗರ, ಮಹದೇವಪುರ, ಬೊಮನಹಳ್ಳಿ ಸೇರಿ 7 ನಗರಸಭೆಗಳ ವ್ಯಾಪ್ತಿಗೆ ನೀರು ಪೂರೈಕೆಯಾಗುತ್ತಿವೆ ಎಂದರು.
ಈ ಹಿಂದೆ 70 ಲಕ್ಷ ಇದ್ದ ಬೆಂಗಳೂರು ಜನಸಂಖ್ಯೆ ಇಂದು 1 ಕೋಟಿ 40 ಲಕ್ಷದಷ್ಟಾಗಿದೆ. ಅಷ್ಟೂ ಮಂದಿಗೆ ನೀರು ಪೂರೈಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.