ಬೆಂಗಳೂರು,ಜು.24– ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದು, ಮಹದಾಯಿ ನದಿಗೆ ಅಡ್ಡಲಾಗಿ ಕಳಸಾ ಬಂಡೂರಿ ಅಣೆಕಟ್ಟು ನಿರ್ಮಾಣ ಕಾಮಗಾರಿಯನ್ನು ಕರ್ನಾಟಕ ಸರ್ಕಾರ ಕೈಗೆತ್ತಿಕೊಳ್ಳಲಿದೆ ಎಂದು ಜಲಸಂಪನೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದ ಬಳಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ 28 ಮಂದಿ ಲೋಕಸಭಾ ಸದಸ್ಯರು, 12 ಮಂದಿ ರಾಜ್ಯಸಭಾ ಸದಸ್ಯರು ಬಾಯಿ ಮುಚ್ಚಿ ಕುಳಿತುಕೊಂಡಿರುವುದು ತಪ್ಪು, ಮಹದಾಯಿ ವಿಚಾರದಲ್ಲಿ ಸಂಸತ್‌ನಲ್ಲಿ ದನಿ ಎತ್ತಬೇಕು ಎಂದು ಆಗ್ರಹಿಸಿದರು.
ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅಲ್ಲಿನ ವಿಧಾನಸಭೆಯಲ್ಲಿ ನೀಡಿರುವ ಹೇಳಿಕೆ ಖಂಡನೀಯ. ಅವರಿಗೆ ಮಾನಸಿಕ ಸ್ಥಿಮಿತ ಇಲ್ಲವಾಗಿದೆ. ಒಕ್ಕೂಟ ವ್ಯವಸ್ಥೆಯ ಬಗ್ಗೆ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ನ್ಯಾಯಾಧೀಕರಣದಲ್ಲಿ ಮಹದಾಯಿ ನದಿ ನೀರಿನ ಹಂಚಿಕೆ ಮಾಡಿ ತೀರ್ಪು ನೀಡಿ ಆಗಿದೆ. ಅದರಂತೆ ಕಳಸಾ ಬಂಡೂರಿ ನಾಲಾ ಅಣೆಕಟ್ಟು ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಸವರಾಜು ಬೊಮಾಯಿ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರು ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಸಂಭ್ರಮಾಚರಣೆ ಮಾಡಿದ್ದರು. ಅರಣ್ಯ ಇಲಾಖೆಯ ಅನುಮತಿ ಮಾತ್ರ ಬಾಕಿ ಇತ್ತು. ಎಲ್ಲಿಯೂ ಕೆಲಸ ಮಾಡಬೇಡಿ ಎಂದು ಹೇಳಿಲ್ಲ ಎಂದರು.
ಗೋವಾ ಸರ್ಕಾರ ಕರ್ನಾಟಕಕ್ಕೆ ನೋಟೀಸ್ ನೀಡಿರುವುದು ಅಕ್ರಮ. ಒಂದು ರಾಜ್ಯ ಮತ್ತೊಂದು ರಾಜ್ಯಕ್ಕೆ ನೋಟೀಸ್ ನೀಡಲು ಅವಕಾಶ ಇಲ್ಲ. ಆದರೂ ಗೋವಾ ಸರ್ಕಾರ ಉದ್ಧಟತನ ಪ್ರದರ್ಶಿಸಿದೆ. ಇದನ್ನು ಪ್ರಶ್ನಿಸಿ ನಾವು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಹಿಂಪಡೆಯುತ್ತೇವೆ. ಕಳಸಾ ಬಂಡೂರಿ ನಾಲಾ ಅಣೆಕಟ್ಟು ನಿರ್ಮಾಣ ಕಾಮಗಾರಿಯನ್ನು ಆರಂಭಿಸುತ್ತೇವೆ ಎಂದು ಹೇಳಿದರು.
ಇದು ನಾಡಿನ ಸಂಸದರ ಸ್ವಾಭಿಮಾನದ ಪ್ರಶ್ನೆ. ಈವರೆಗೂ ಬಾಯಿ ಮುಚ್ಚಿಕೊಂಡು ಕುಳಿತಿರುವುದು ತಪ್ಪು. ನಾಡಿನ ಪರವಾಗಿ ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ಒಂದು ಸಂಸದ ಸ್ಥಾನಕ್ಕಾಗಿ ಕರ್ನಾಟಕವನ್ನು ಮಾರಾಟ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದರು.ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಲು ಸಮಯ ಕೇಳುತ್ತೇನೆ. ಸಮಯ ಸಿಕ್ಕರೆ ರಾಜ್ಯದ ಎಲ್ಲಾ ಸಂಸದರನ್ನೂ ಜೊತೆಗೆ ಕರೆದುಕೊಂಡು ಹೋಗಿ ಒತ್ತಡ ಹೇರಲು ಪ್ರಯತ್ನಿಸುತ್ತೇನೆ, ತಮೊಂದಿಗೆ ಎಲ್ಲಾ ಸಂಸದರೂ ಬರುವ ವಿಶ್ವಾಸವಿದೆ ಎಂದು ತಿಳಿಸಿದರು.
ಕೇಂದ್ರ ಸಚಿವರು ಸಮತೋಲಿತವಾಗಿದ್ದಾರೆ. ನಾನು ಐದಾರು ಬಾರಿ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿದ್ದೇನೆ. ಅವರು ರಾಜಕೀಯ ಮಾಡುವುದಿಲ್ಲ. ಅಭಿವೃದ್ಧಿ ಕೆಲಸಗಳಾಗಬೇಕು ಎಂದು ಅವರು ಹೇಳಿದ್ದಾರೆ. ಸಮಸ್ಯೆ ಬಗ್ಗೆ ಅವರಿಗೆ ತಿಳುವಳಿಕೆ ಇದೆ. ಕೇಂದ್ರ ಸರ್ಕಾರದ ಅರಣ್ಯ ಮತ್ತು ಜಲಸಂಪನೂಲ ಎರಡೂ ಇಲಾಖೆಗಳ ಜವಾಬ್ದಾರಿ ಇರುವ ಸಚಿವರು ರಾಜಕಾರಣ ಮಾಡುತ್ತಿಲ್ಲ.
ಗೋವಾದ ರಾಜಕಾರಣಿಗಳು ರಾಜಕಾರಣ ಮಾಡುತ್ತಿದ್ದಾರೆ. ನಾವು ಕೆಲಸ ಆರಂಭಿಸುತ್ತೇವೆ. ಅವರು ಹೇಗೆ ನಿಲ್ಲಿಸುತ್ತಾರೆ ನೋಡೋಣ ಎಂದು ಸವಾಲು ಹಾಕಿದರು. ನಮ ಜಾಗದಲ್ಲಿ ನಾವು ಕೆಲಸ ಮಾಡುತ್ತೇವೆ. ಅದನ್ನು ತಡೆಯಲು ಅವರಿಗೆ ಯಾವ ಹಕ್ಕುಗಳೂ ಇಲ್ಲ. ಹಣೆಬರಹದಲ್ಲಿ ಅವಕಾಶಗಳಿದ್ದರೆ ನಮ ಕೆಲಸವನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಹೇಳಿದರು.