ಬೆಂಗಳೂರು,ಫೆ.16- ನಗರದಲ್ಲಿ ಸುರಂಗ ಮಾರ್ಗದ ರಸ್ತೆ ನಿರ್ಮಾಣ ವೈಜ್ಞಾನಿಕವಾಗಿ ಸಾಧುವಲ್ಲ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿಕೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.ಕೊಳವೆ ಮಾರ್ಗದ ರಸ್ತೆಗಳಿಂದ ಸಂಚಾರ ದಟ್ಟಣೆ ನಿಯಂತ್ರಣ ಕಾರ್ಯಸಾಧುವಲ್ಲ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದರು.
ಹಾಗಿದ್ದ ಮೇಲೆ ಮಹಾರಾಷ್ಟ್ರದಲ್ಲಿ ಈ ಯೋಜನೆಯನ್ನು ಏಕೆ ಮಾಡಲಾಗುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಬೆಂಗಳೂರಿನಲ್ಲಿ ಸುರಂಗ ಮಾರ್ಗ ರಸ್ತೆ ನಿರ್ಮಾಣಕ್ಕೆ ಸಕಾರಾತಕವಾಗಿ ಸ್ಪಂದಿಸಿದ್ದಾರೆ.
ಹಾಗಿದ್ದ ಮೇಲೆ ಅಶ್ವಿನಿ ವೈಷ್ಣವ್ ವಿರೋಧ ವ್ಯಕ್ತಪಡಿಸುತ್ತಿರುವುದೇಕೆ?, ಬೆಂಗಳೂರಿನ ಸುರಂಗ ಮಾರ್ಗದ ಯೋಜನೆಗೂ, ಅಶ್ವಿನಿ ವೈಷ್ಣವ್ಗೂ ಏನು ಸಂಬಂಧ?, ಆಯಾ ಸಚಿವರುಗಳಿಗೆ ಆಯಾ ಇಲಾಖೆಯ ಕೆಲಸ ಮಾಡಲು ಇತರರು ಸಹಕಾರ ನೀಡಬೇಕು ಎಂದು ತಿರುಗೇಟು ನೀಡಿದರು.
ನಗರದಲ್ಲಿ ನಡೆಯುತ್ತಿರುವ ವಿವಿಧ ವೈಟ್ ಟಾಪಿಂಗ್ ಕಾಮಗಾರಿಗಳನ್ನು ಖುದ್ದು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 30 ವರ್ಷ ರಸ್ತೆಗಳು ಸುಸ್ಥಿತಿಯಲ್ಲಿರಬೇಕು ಎಂಬ ಕಾರಣಕ್ಕೆ 1,500 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಹಿಂದೆ ಹಲವಾರು ರಸ್ತೆಗಳನ್ನು ವೈಟ್ ಟಾಪಿಂಗ್ ಮಾಡಲಾಗಿದೆ. 150 ಕಿ.ಮೀ. ವೈಟ್ ಟಾಪಿಂಗ್ ಕಾಮಗಾರಿಗೆ 1,700 ಕೋಟಿ ರೂ. ವೆಚ್ಚವಾಗಲಿದೆ ಎಂದರು.
ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚುವರಿಯಾಗಿ 450 ಕಿ.ಮೀ. ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲು ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದರು. ಬಿಡಬ್ಲ್ಯೂಎಸ್ಎಸ್ಬಿ, ಬೆಸ್ಕಾಂ, ಸಂಚಾರಿ ಪೊಲೀಸರು ಸೇರಿದಂತೆ ವಿವಿಧ ಇಲಾಖಾಧಿಕಾರಿಗಳ ಜೊತೆ ಸಮನ್ವಯ ಸಭೆ ನಡೆಸಿ ನಾಗರಿಕ ಸೌಲಭ್ಯಗಳನ್ನು ಒದಗಿಸುವ ಮಾರ್ಗಗಳನ್ನು ಸಮರ್ಪಕವಾಗಿ ಅಳವಡಿಸಲಾಗುವುದು. ಮುಂದಿನ 30 ವರ್ಷ ಈ ರಸ್ತೆಗಳು ಸುಸ್ಥಿತಿಯಲ್ಲಿರಬೇಕು ಎಂದರು.
ಕಾಮಗಾರಿ ಗುಣಮಟ್ಟ ಉತ್ತಮವಾಗಿರಬೇಕು ಎಂಬುದು ನಮ ಆದ್ಯತೆ. ಖುದ್ದು ನಾನು ಪರಿಶೀಲಿಸಿದ್ದೇನೆ. ಜೊತೆಗೆ ತಜ್ಞರ ಮೂಲಕವೂ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.