ಬೆಂಗಳೂರು,ಡಿ.28- ಕರವೇ ಅಧ್ಯಕ್ಷ ನಾರಾಯಣಗೌಡ ಮತ್ತು ಅವರ ತಂಡದ ಬಂಧನವನ್ನು ಸಮರ್ಥಿಸಿಕೊಂಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾನೂನು ಕೈಗೆತ್ತಿಕೊಂಡು ಆಸ್ತಿಪಾಸ್ತಿ ಹಾನಿ ಮಾಡುವುದನ್ನು ನೋಡಿಕೊಂಡು ಕಣ್ಣುಮುಚ್ಚಿಕೊಂಡಿರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡಪರ ಹೋರಾಟಕ್ಕೆ ನನ್ನ ಅಭ್ಯಂತರವಿಲ್ಲ. ಆದರೆ ಕಾನೂನು ಕೈಗೆತ್ತಿಕೊಳ್ಳಲು ಅವಕಾಶವಿಲ್ಲ. ಬೆಂಗಳೂರು ನಗರದ ಆಸ್ತಿಪಾಸ್ತಿಗಳನ್ನು ಹಾನಿ ಮಾಡುವುದನ್ನು ಒಪ್ಪಲು ನಾವು ಸಿದ್ಧರಿಲ್ಲ. ಹೋರಾಟಕ್ಕೂ ಒಂದು ಇತಿಮಿತಿಯಿದೆ. ಆಸ್ತಿಪಾಸ್ತಿ ಹಾನಿ ಮಾಡಿದರೆ ಸರ್ಕಾರ ಕಣ್ಣುಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದರು.
ಹೋರಾಟ ಮಾಡುವುದಕ್ಕೆ ನಮ್ಮ ಬೆಂಬಲವಿದೆ. ಕನ್ನಡಕ್ಕೆ ಆದ್ಯತೆ ಸಿಗಬೇಕು. ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಬಳಕೆಯಾಗಬೇಕು. ಇದಕ್ಕೆ ನಮ್ಮ ಒತ್ತಾಸೆಯೂ ಇದೆ. ಕನ್ನಡ ನಾಮಫಲಕ ಹಾಕಬೇಕು ಎಂದು ಹೇಳಿದ್ದ ಕರವೇ ಅಧ್ಯಕ್ಷ ನಾರಾಯಣಗೌಡರ ಬಣದ ವಿರುದ್ಧ ದೂರು ಕೊಟ್ಟಿದ್ದು, ಪ್ರಕರಣ ದಾಖಲಾಗಿದ್ದು ತಮ್ಮ ಗಮನಕ್ಕೆ ಬಂದಾಗ ನಾನೇ ಖುದ್ದು ಮಾತನಾಡಿ, ಅದೆಲ್ಲಾ ಸರಿಯಲ್ಲ ಎಂದು ಆಕ್ಷೇಪಿಸಿದ್ದೇನೆ ಎಂದು ಹೇಳಿದರು.
ಉತ್ತರ ಭಾರತದಲ್ಲಿ ಕವಿದ ಮಂಜು, 134 ವಿಮಾನ, 22 ರೈಲು ಸಂಚಾರದಲ್ಲಿ ವ್ಯತ್ಯಯ
ನಾರಾಯಣಗೌಡರಿಗೆ ತಾವು ಹೇಳುವುದಿಷ್ಟೇ, ಯಾರ ಆಸ್ತಿಯನ್ನು ಹಾನಿ ಮಾಡಬಾರದು. ಪ್ರತಿಭಟನೆ ಮಾಡಲಿ, ಕ್ಕಾರ ಕೂಗಲಿ, ನಮ್ಮ ಮನೆಯ ಮುಂದೆಯೂ ಪ್ರತಿಭಟನೆ ಮಾಡಲಿ, ತಪ್ಪು ಮಾಡಿದಾಗ ಹೇಳಲಿ, ನಾವೆಲ್ಲಾ ಸೇರಿ ಕನ್ನಡ ಉಳಿಸೋಣ. ಆದರೆ ಆಸ್ತಿಪಾಸ್ತಿಗೆ ಹಾನಿ ಮಾಡುವುದು ಸರಿಯಲ್ಲ ಎಂದರು.
ಖುದ್ದು ಮುಖ್ಯಮಂತ್ರಿಯವರು ಎಲ್ಲಾ ಸಚಿವರಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. ಎಲ್ಲಾ ಟಿಪ್ಪಣಿಗಳು, ಪತ್ರ ವ್ಯವಹಾರಗಳು ಕನ್ನಡದಲ್ಲೇ ಇರಬೇಕು ಎಂದು ಸಂಪುಟದಲ್ಲೇ ಸೂಚನೆ ನೀಡಿದ್ದಾರೆ. ಸರ್ಕಾರ ಕನ್ನಡಕ್ಕೆ ಬದ್ಧವಾಗಿದೆ. ಹಾಗೆಂದು ಕಾನೂನು ಕೈಗೆತ್ತಿಕೊಳ್ಳುವುದನ್ನು ಒಪ್ಪಲಾಗುವುದಿಲ್ಲ ಎಂದು ಹೇಳಿದರು.
ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದರೆ ಬಂಡವಾಳ ಹೂಡಿಕೆಯ ಮೇಲೆ ಪರಿಣಾಮ ಬೀರುತ್ತದೆ. ಹೊರಗಿನಿಂದ ಬಂದವರು ಕನ್ನಡ ಕಲಿಯಬೇಕು. ಆದರೆ ಈ ರೀತಿಯ ಸಂಘರ್ಷಗಳಿಂದ ಅನ್ಯ ಭಾಷಿಗರಲ್ಲಿ ಆತಂಕ ಮೂಡಿಸಿದಂತಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರತಿಭಟಿಸುವ ಹಕ್ಕುಗಳಿವೆ. ಆದರೆ ನಾರಾಯಣಗೌಡರ ತಂಡ ಆಸ್ತಿಪಾಸ್ತಿ ಹಾನಿ ಮಾಡುವ ಹೋರಾಟವನ್ನು ಸಮರ್ಥಿಸಿಕೊಳ್ಳಲಾಗುವುದಿಲ್ಲ ಎಂದರು.