ಬೆಂಗಳೂರು, ಮಾ.27- ಬಿಗ್‌ಬಾಸ್‌ನ ಇಬ್ಬರು ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ ಹಾಗೂ ರಜತ್ ಲಾಂಗ್ ಹಿಡಿದು ರೀಲ್ಸ್ ಮಾಡಿದ ಮಾರಾಕಾಸ್ತ್ರ ಇನ್ನೂ ಪತ್ತೆಯಾಗಿಲ್ಲ.
ಬಸವೇಶ್ವರನಗರ ಠಾಣೆ ಪೊಲೀಸರ ವಶದಲ್ಲಿರುವ ಈ ಇಬ್ಬರನ್ನು ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ಈ ಇಬ್ಬರು ಮಾರಾಕಾಸ್ತ್ರ ಹಿಡಿದು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ತದನಂತರದಲ್ಲಿ ಇವರಿಬ್ಬರ ವಿರುದ್ಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ನಂತರ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದರು. ವಿಚಾರಣೆ ಸಂದರ್ಭದಲ್ಲಿ ರೀಲ್ಸ್ ಗೆ ಬಳಸಿದ್ದ ಮಾರಾಕಾಸ್ತ್ರ ನೀಡದೆ, ಫೈಬರ್ ಮಾರಾಕಾಸ್ತ್ರವನ್ನು ಪೊಲೀಸರಿಗೆ ಒಪ್ಪಿಸಿ ತನಿಖೆ ಹಾದಿ ತಪ್ಪಿಸಲು ಯತ್ನಿಸಿದ್ದರು.
ಈ ಇಬ್ಬರನ್ನು ಸ್ಥಳ ಮಹಜರಿಗೆ ಕರೆದೊಯ್ದಾಗ ರೀಲ್ಸ್ ಮಾಡಲು ಮಾರಕಾಸ್ತ್ರ ಬಳಸಿದ್ದಾಗಿ ಹೇಳಿದ್ದಾರೆ. ಪೊಲೀಸರು ಈ ಇಬ್ಬರನ್ನು ವಿಚಾರಣೆಗೆ ಒಳಪಡಿಸಿದ್ದು, ಸ್ಟುಡಿಯೋದಲ್ಲಿ ಐದಾರು ಮಾರಾಕಾಸ್ತ್ರಗಳಿದ್ದವು. ಶೂಟಿಂಗ್‌ಗಾಗಿ ಅವುಗಳನ್ನು ತರಿಸಲಾಗಿತ್ತು. ಆಪೈಕಿ ಒಂದು ಆಯುಧವನ್ನು ತೆಗೆದುಕೊಂಡು ರೀಲ್ಸ್ ಗೆ ಬಳಸಿದ್ದಾಗಿ ಹೇಳಿಕೆ ನೀಡಿದ್ದಾರೆ. ಒಟ್ಟಾರೆ ರೀಲ್ಸ್‌ಗೆ ಬಳಸಿದ್ದ ಮಾರಾಕಾಸ್ತ್ರ ಇದುವರೆಗೂ ಪೊಲೀಸರಿಗೆ ದೊರೆತಿಲ್ಲ, ಶೋಧ ಕಾರ್ಯ ಮುಂದುವರೆದಿದೆ.