Friday, May 23, 2025
Homeರಾಜ್ಯರನ್ಯಾರಾವ್ ಜೊತೆ ವ್ಯವಹಾರ : ಗೃಹಸಚಿವ ಪರಮೇಶ್ವರ್ ಅವರಿಗೆ ಶೀಘ್ರದಲ್ಲಿ ಇಡಿ ಸಮನ್ಸ್..?

ರನ್ಯಾರಾವ್ ಜೊತೆ ವ್ಯವಹಾರ : ಗೃಹಸಚಿವ ಪರಮೇಶ್ವರ್ ಅವರಿಗೆ ಶೀಘ್ರದಲ್ಲಿ ಇಡಿ ಸಮನ್ಸ್..?

Deal with Ranya Rao: Home Minister Parameshwara to be summoned by ED soon..?

ನವದೆಹಲಿ,ಮೇ23 ಕನ್ನಡದ ಚಿತ್ರನಟಿ ಹಾಗೂ ಕಡ್ಡಾಯದ ರಜೆ ಮೇಲೆ ತೆರಳಿರುವ ಡಿಜಿಪಿ ರಾಮಚಂದ್ರರಾವ್ ಅವರ ಮಲಮಗಳು ರನ್ಯಾರಾವ್ ಚಿನ್ನದ ಕಳ್ಳಸಾಗಣೆ ಪ್ರಕರಣದ ತನಿಖೆಯನ್ನು ಇ.ಡಿ ದೆಹಲಿಯ ತನ್ನ ಪ್ರಧಾನ ಕಚೇರಿಗೆ ವರ್ಗಾಯಿಸುತ್ತಿದ್ದು, ಆರೋಪಿಗಳೊಂದಿಗಿನ ಅವರ ಹಣಕಾಸು ವಹಿವಾಟುಗಳ ಕುರಿತು ವಿಚಾರಣೆಗಾಗಿ ಹಾಜರಾಗುವಂತೆ ಕರ್ನಾಟಕದ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಶೀಘ್ರದಲ್ಲಿ ಸಮನ್ಸ್ ನೀಡಲು ಮುಂದಾಗಿದೆ.

ಪರಮೇಶ್ವರ್ ತೆರಿಗೆ ವಿನಾಯಿತಿ ಪಡೆದಿರುವ ಟ್ರಸ್ಟ್‌ಗಳು ನಟಿಯ ಕ್ರೆಡಿಟ್ ಕಾರ್ಡ್ ಬಿಲ್‌ ಗಳು ಮತ್ತು ಅವರ ಇತರ ಖರ್ಚುಗಳಿಗೆ 40 ಲಕ್ಷ ರೂ.ಗಳನ್ನು ಭರಿಸಿರುವುದು ಕಂಡುಬಂದಿದೆ. ಇದು ಕಾನೂನುಬಾಹಿರವೆಂದು ತೋರುತ್ತದೆ, ಟ್ರಸ್ಟ್‌ ಹಣವನ್ನು ಟ್ರಸ್ಟಿಗಳು ಅಥವಾ ಅವರ ಸ್ನೇಹಿತರ ವೈಯಕ್ತಿಕ ವೆಚ್ಚಗಳಿಗೆ ಬಳಸದೆ ದತ್ತಿ ಸಂಸ್ಥೆಯ ಚಟುವಟಿಕೆಗಳಿಗೆ ಮಾತ್ರ ಬಳಸಬೇಕು ಎಂದು ಪರಿಗಣಿಸಲಾಗಿದೆ. ಹೀಗಾಗಿ ಯಾವುದೇ ಸಂದರ್ಭದಲ್ಲಿ ವಿಚಾರಣೆಗೆ ಹಾಜರಾಗುವಂತೆ ಇ.ಡಿ ಸಮನ್ಸ್ ಜಾರಿ ಮಾಡಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.

ಶೈಕ್ಷಣಿಕ ಟ್ರಸ್ಟ್ ಹಣವನ್ನು ಬೇರೆಡೆಗೆ ತಿರುಗಿಸಿ ರನ್ಯಾ ರಾವ್ ಅವರ ಕ್ರೆಡಿಟ್ ಕಾರ್ಡ್ ಬಿಲ್‌ಗಳಿಗೆ 40 ಲಕ್ಷ ರೂ.ಗಳನ್ನು ಪಾವತಿಸಲಾಗಿದೆ. ಇದು ಪ್ರಭಾವಿ ವ್ಯಕ್ತಿಯ ಸೂಚನೆಯ ಮೇರೆಗೆ ನಡೆದಿದೆ ಎಂದು ಆರೋಪಿಸಿ ಕರ್ನಾಟಕ ಸಚಿವ ಪರಮೇಶ್ವರ ಅವರ ಹೆಸರನ್ನು ಉಲ್ಲೇಖಿಸದೆ ಇ.ಡಿ ಮೂಲಗಳು ಖಚಿತಪಡಿಸಿವೆ.

ಬುಧವಾರ ಮತ್ತು ಗುರುವಾರ 16 ಸ್ಥಳಗಳಲ್ಲಿ ನಡೆಸಿದ ಶೋಧದ ನಂತರ ಇಡಿ ಪ್ರಮುಖ ಪ್ರಗತಿ ಸಾಧಿಸಿದೆ. ಇದು ಹವಾಲಾ ಡೀಲಗಳು ಮತ್ತು ಎಂಟ್ರಿ ಆಪರೇಟರ್‌ಗಳ ಮೂಲಕ (ಆ ದಂಧೆಕೋರ ಕಂಪನಿಗಳು) ಹಣ ಅಕ್ರಮ ವರ್ಗಾವಣೆಯಲ್ಲಿ ತೊಡಗಿರುವ ಹಲವಾರು ಉನ್ನತ ಉದ್ಯಮಿಗಳು ಮತ್ತು ರಾಜಕಾರಣಿಗಳ ಹೆಸರುಗಳನ್ನು ಬಹಿರಂಗಪಡಿಸಿದೆ ಎಂದು ತಿಳಿದು ಬಂದಿದೆ.

40 ಲಕ್ಷ ರೂಪಾಯಿಗಳ ಪಾವತಿಯನ್ನು ದೃಢೀಕರಿಸಲು ಮತ್ತು ಅಂತಹ ಖರ್ಚಿನ ಉದ್ದೇಶವನ್ನು ಬಹಿರಂಗಪಡಿಸಲು ಪೋಷಕ ಪೋಚರ್‌ಗಳು ಅಥವಾ ದಾಖಲೆಗಳನ್ನು ನೀಡುವಂತೆ ಇಡಿ ಟ್ರಸ್ಟ್ ಅಧಿಕಾರಿಗಳಿಗೆ ಸೂಚಿಸಿದೆ. ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿರುವ ಹಲವಾರು ಹವಾಲಾ ಡೀಲರ್‌ಗಳ ಮೇಲೆ ಶೋಧ ಕಾರ್ಯ ನಡೆಸಲಾಗಿದೆ. ರಾಜ್ಯದ ಹಲವಾರು ಉನ್ನತ ವ್ಯಕ್ತಿಗಳಿಂದ ಲೆಕ್ಕವಿಲ್ಲದಷ್ಟು ಹಣವನ್ನು ವಂಚಿಸಲಾಗಿದೆ. ಈ ಡೀಲರ್‌ಗಳು ಆರ್‌ಬಿಐ ಅನುಮೋದನೆಯಿಲ್ಲದೆ ಅಕ್ರಮ ವಿದೇಶೀ ವಿನಿಮಯ ವ್ಯವಹಾರದಲ್ಲಿ ಭಾಗಿಯಾಗಿದ್ದರು.

ವಿಚಾರಣೆಯ ಸಮಯದಲ್ಲಿ ಹವಾಲಾ ಡೀಲರ್‌ಳು ರನ್ಯಾ ಜೊತೆ ವ್ಯವಹಾರ ನಡೆಸಿದ್ದಾಗಿ ಮತ್ತು ಅವರ ಅಪರಾಧದ ಆದಾಯವನ್ನು ಮತ್ತು ಅವರ ಕಕ್ಷಿದಾರರಿಗೆ ಅಕ್ರಮವಾಗಿ ವರ್ಗಾಯಿಸಲು ವಸತಿ ನಮೂದುಗಳನ್ನು ಒದಗಿಸಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಇಡಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ :
ಗೃಹಸಚಿವ ಹಾಗೂ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಉಪಕುಲಪತಿಯೂ ಆಗಿರುವ ಡಾ.ಜಿ.ಪರಮೇಶ್ವರ್ ವಿರುದ್ಧ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು. ಬುಧವಾರ ಹಾಗೂ ಗುರುವಾರ ತುಮಕೂರು ಹಾಗೂ ಇತರ ಭಾಗಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿತ್ತು, ಗುರುವಾರವೂ ಇ.ಡಿ ಅಧಿಕಾರಿಗಳು ತಪಾಸಣೆಯನ್ನು ನಡೆಸಿ,ಮಹತ್ವದ ದಾಖಲೆಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ರನ್ನಾರಾವ್ ಜೊತೆಗೆ ಹಣಕಾಸು ವ್ಯವಹಾರ ನಡೆಸಲಾಗಿದೆ ಎಂಬ ಆರೋಪ ಈ ದಾಳಿಗೆ ಕಾರಣವಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ರನ್ನಾ ರಾವ್ ಜೊತೆಗೆ ಹಣಕಾಸು ವಹಿವಾಟು ನಡೆಸಿದ್ದ ಖಾಸಗಿ ಭದ್ರತಾ ಏಜೆನ್ಸಿಯೊಂದರ ಜೊತೆಗೆ ಸಿದ್ದಾರ್ಥ ಶಿಕ್ಷಣ ಸಂಸ್ಥೆಯೂ ನಂಟು ಹೊಂದಿದೆ. ಈ ಕಂಪನಿ ರನ್ಯಾರಾವ್ ಅವರ ಕ್ರೆಡಿಟ್ ಕಾರ್ಡ್ ಬಿಲ್ 40 ಲಕ್ಷವನ್ನು ಪಾವತಿಸಿದೆ. ಅಲ್ಲದೆ ಇದೇ ಕ್ರೆಡಿಟ್ ಕಾರ್ಡ್‌ ನಿಂದ ರನ್ಯಾ ರಾವ್ ಅವರು ರಷ್ಯಾ ಏರ್ ಟಿಕೆಟ್ ಖರೀದಿ ಮಾಡಿದ್ದರು.

ದುಬೈನಿಂದ ಬಂದ ರನ್ಯಾ ರಾವ್ ಅವರನ್ನು ಮಾರ್ಚ್ 3ರಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಪಡಿಸಲಾಗಿತ್ತು.
ಖಚಿತ ಮಾಹಿತಿ ಮೇರೆಗೆ ಡಿಆರ್‌ಐ ಅಧಿಕಾರಿಗಳು ರನ್ಯಾ ರಾವ್ ಅವರನ್ನು ಬಂಧಿಸಿ 14.2 ಕೆಜಿ ತೂಕದ ಮತ್ತು 12.56 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯವು ಮಂಗಳವಾರ ರನ್ಯಾ ರಾವ್ ಮತ್ತು ಸಹ-ಆರೋಪಿ ತರುಣ್ ಕೊಂಡುರು ರಾಜು ಅವರಿಗೆ ಜಾಮೀನು ನೀಡಿದೆ. ನಿಗದಿತ ಅವಧಿಯೊಳಗೆ ಡಿಆರ್‌ಐ ಆರೋಪಪಟ್ಟಿ ಸಲ್ಲಿಸಲು ವಿಫಲವಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಇಬ್ಬರಿಗೂ ಜಾಮೀನು ನೀಡಿತ್ತು. ಆದರೆ, ಜಾಮೀನು ಬಳಿಕವೂ ರನ್ಯಾ ಅವರು ಜೈಲಿನಲ್ಲೇ ಉಳಿಯಬೇಕಾಗಿ ಬಂದಿದೆ. ರನ್ಯಾ ರಾವ್ ವಿರುದ್ಧ ಕೇಂದ್ರೀಯ ಗುಪ್ತಚರ ಬ್ಯೂರೋ (ಸಿಇಐಬಿ) ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆ (ಕಾಫಿಪೋಸಾ) ಅಡಿಯಲ್ಲಿ ಬಂಧನ ಆದೇಶ ಹೊರಡಿಸಿರುವುದರಿಂದ ಬಿಡುಗಡೆ ಭಾಗ್ಯ ಲಭ್ಯವಾಗಿಲ್ಲ.

ಈ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಕೂಡಾ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ರನ್ಯಾ ರಾವ್ ಅವರಿಗೆ ಪರಮೇಶ್ವರ್ ಅವರು 15 ರಿಂದ 25 ಲಕ್ಷದ ಗಿಫ್ಟ್ ಕೊಟ್ಟಿರಬಹುದು. ಅದು ಮದುವೆಗೆ ಕೊಟ್ಟ ಉಡುಗೊರೆಯಾಗಿದೆ. ಹಾಗಂತ ರನ್ಯಾ ರಾವ್ ಚಿನ್ನದ ಅಕ್ರಮ ಸಾಗಾಟಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿರುವುದು ಪ್ರಕರಣಕ್ಕೆ ಹೊಸ ಟ್ವಿಸ್ಟ್ ಕೊಟ್ಟಿದೆ.

RELATED ARTICLES

Latest News