ಬೆಂಗಳೂರು,ಜು.6- ರಾಜ್ಯದಲ್ಲಿ ಡೆಂಘೀ ದಿನೇ ದಿನೇ ಉಲ್ಬಣಗೊಳ್ಳುತ್ತಿದ್ದು, ಮತ್ತಷ್ಟು ಆತಂಕ ಎದುರಾಗಿದೆ. ಮಹಾಮಾರಿ ಮಕ್ಕಳನ್ನು ಬಲಿ ತೆಗೆದುಕೊಳ್ಳುತ್ತಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಬಾಲಕನೋರ್ವ ಡೆಂಘೀಗೆ ಬಲಿಯಾಗಿದ್ದಾನೆ.ಈಗಾಗಲೇ ಡೆಂಘೀ ಮಹಾಮಾರಿಗೆ ಈಗಾಗಲೇ ಹಾಸನದಲ್ಲಿ ನಾಲ್ಕು ಮಕ್ಕಳು ಮೃತಪಟ್ಟಿದ್ದು, ರಾಜಧಾನಿ ಬೆಂಗಳೂರಿನಲ್ಲಿ 11 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.
ಡೆಂಘೀ ಜ್ವರದಿಂದ ಬಳಲುತ್ತಿದ್ದ ಅಂಜನಾಪುರದ ಗಗನ್(11) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ತಡರಾತ್ರಿ ಸಾವನ್ನಪ್ಪಿದ್ದಾನೆ.ರಾಜಧಾನಿ ಬೆಂಗಳೂರಿನಲ್ಲಿ ಡೆಂಘೀ ಅಬ್ಬರ ಮುಂದುವರೆದಿದೆ. ದಿನೇ ದಿನೇ ಡೆಂಘೀ ಲಕ್ಷಣಗಳಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.
ಈಗಾಗಲೇ ನಗರದಲ್ಲಿ 1700ಕ್ಕೂ ಹೆಚ್ಚು ಮಂದಿ ಡೆಂಘೀ ಲಕ್ಷಣಗಳಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿವಮೊಗ್ಗ, ಮೈಸೂರು, ಹಾಸನ, ಧಾರವಾಡ, ಚಿತ್ರದುರ್ಗ, ಹಾವೇರಿ ಹಲವೆಡೆ ಡೆಂಘೀ ತನ್ನ ಹಾವಳಿಯನ್ನು ಮುಂದುವರೆಸಿದ್ದು, 6700ಕ್ಕೂ ಹೆಚ್ಚು ಜನ ಡೆಂಘೀ ಸೋಂಕಿನಿಂದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಡೆಂಘೀ ಆರ್ಭಟ ಮುಂದುವರೆದಿದೆ. ಡೆಂಘೀ ಜ್ವರಕ್ಕೆ ನಾಲ್ವರು ಈಗಾಗಲೇ ಬಲಿಯಾಗಿದ್ದಾರೆ. ಕಳೆದ ಜೂ.30ರಂದು ಹೊಳೆನರಸೀಪುರ ತಾಲ್ಲೂಕಿನ ದೊಡ್ಡಮಗ್ಗೆಯ ವರ್ಷಿಕ(8) ಸಾವನ್ನಪಿದ್ದಳು. ಜು.1ರಂದು ಅರಕಲಗೂಡಿನ ಅಕ್ಷತಾ(13), ಜುಲೈ 3ರಂದು ಗುಡ್ಡೇನಹಳ್ಳಿಯ ಕಲಾಶ್ರೀ( 11), ಜು.5ರಂದು ಹೊಳೆನರಸೀಪುರದ ದೊಡ್ಡಳ್ಳಿ ಗ್ರಾಮದ ಸಮೃದ್ದಿ(8) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಇತ್ತ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ನಿವಾಸಿ ವೇಣು ಡೆಂಘೀ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ ಇವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ರಾಮನಗರ ಜಿಲ್ಲೆಯಲ್ಲೂ ಕೂಡ ಡೆಂಘೀ ಕಾಯಿಲೆ ಬಗ್ಗೆ ತಪಾಸಣೆ ಮಾಡಲಾಗಿದ್ದು, 773 ಜ್ವರ ಪೀಡಿತ ರೋಗಿಗಳ ರಕ್ತ ಮಾದರಿ ಪರೀಕ್ಷೆ ಮಾಡಿದ್ದು, 58 ಜನರಿಗೆ ಡೆಂಘೀ ಪಾಸಿಟಿವ್ ಇರುವುದು ಪತ್ತೆಯಾಗಿದೆ.
ದಿನೇ ದಿನೇ ಡೆಂಘೀ ಉಲ್ಬಣಗೊಳ್ಳುತ್ತಿದ್ದು, ಸಾವುನೋವುಗಳಿಂದ ಜನ ಬಳಲುತ್ತಿರುವುದರಿಂದ ಆತಂಕ ಸೃಷ್ಟಿಯಾಗಿದ್ದು, ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ.ರೋಗ ಬರದಂತೆ ಮುನ್ನೆಚ್ಚರಿಕೆಗೆ ವಹಿಸಲು ಸಾರ್ವಜನಕರಿಗೆ ಹಲವು ಸೂಚನೆಗಳನ್ನು ನೀಡಲಾಗಿದೆ.