Thursday, September 19, 2024
Homeರಾಷ್ಟ್ರೀಯ | Nationalಸ್ಮಶಾನದಂತಾದ ವಯನಾಡು, ಎಲ್ಲೆದರಲ್ಲಿ ಮೃತದೇಹಗಳು, ಸಾವಿನ ಸಂಖ್ಯೆ 166ಕ್ಕೇರಿಕೆ

ಸ್ಮಶಾನದಂತಾದ ವಯನಾಡು, ಎಲ್ಲೆದರಲ್ಲಿ ಮೃತದೇಹಗಳು, ಸಾವಿನ ಸಂಖ್ಯೆ 166ಕ್ಕೇರಿಕೆ

ವಯನಾಡ್‌,ಜು.31- ಇತಿಹಾಸದಲ್ಲೇ ಕಂಡು ಕೇಳರಿಯದ ಭೀಕರ ನರಕ ಸದೃಶವಾಗಿರುವ ಕೇರಳದ ವಯನಾಡ್‌ ಅಕ್ಷರಶಃ ಸಶಾನದಂತಾಗಿದೆ.ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತ ದಲ್ಲಿ ಮೃತರ ಸಂಖ್ಯೆ ಈವರೆಗೂ 166ಕ್ಕೆ ಏರಿಕೆಯಾಗಿದೆ. ಮಣ್ಣಿನ ಅವಶೇಷಗಳಡಿ ಇನ್ನೂ ಹಲವರು ಸಿಲುಕಿರುವ ಶಂಕೆಯಿದ್ದು, ರಕ್ಷಣಾ ಸಿಬ್ಬಂದಿ ನಿರಂತರವಾಗಿ ರಕ್ಷಣಾ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ.

ಸುಮಾರು 400ಕ್ಕೂ ಹೆಚ್ಚು ಕುಟುಂಬಗಳು ಭೂಕುಸಿತದ ಭೀಕರತೆಗೆ ಸಿಲುಕಿ ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಪರಿಹಾರ ಹಾಗೂ ರಕ್ಷಣಾ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಭಾರತೀಯ ಸೇನೆ ರಕ್ಷಣಾ ಕಾರ್ಯದಲ್ಲಿ ತೊಡಗಿದೆ.

ತಾತ್ಕಾಲಿಕ ಸೇತುವೆಯ ಮೂಲಕ ಸುಮಾರು 1,000 ಜನರನ್ನು ರಕ್ಷಿಸುವಲ್ಲಿ ಸೇನೆ ಯಶಸ್ವಿಯಾಗಿದೆ. ಅಲ್ಲದೆ 128 ಮಂದಿ ಗಾಯಗೊಂಡಿದ್ದಾರೆ. 800ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಪೀಡಿತಪ್ರದೇಶಗಳ ಶಾಲೆ, ಕಾಲೇಜುಗಳನ್ನು ಮುಚ್ಚಲಾಗಿದೆ.

ಭೂಕುಸಿತದಿಂದ ಅನೇಕ ಮನೆಗಳು ನೆಲಸಮವಾಗಿವೆ, ನದಿಗಳು ಉಕ್ಕಿ ಹರಿಯುತ್ತಿವೆ. ಅಲ್ಲದೆ ಹಲವು ಮರಗಳು ನೆಲಕ್ಕುರುಳಿವೆ. ವಿದ್ಯುತ್‌, ರಸ್ತೆ ಸಂಪರ್ಕವಿಲ್ಲದೆ ಜನರಲ್ಲಿ ಆತಂಕ ಮನೆ ಮಾಡಿದೆ. ಸೇನೆ, ನೌಕಾಪಡೆ ಮತ್ತು ಎನ್‌ಡಿಆರ್‌ಎಫ್‌ ತಂಡಗಳು ಪ್ರತಿಕೂಲ ಹವಾಮಾನದ ನಡುವೆ ಸಂತ್ರಸ್ತರನ್ನು ಹುಡುಕಾಟ ಇಂದೂ ಮುಂದುವರೆಸಿದ್ದಾರೆ.

ಸಂತ್ರಸ್ತರಿಗೆ ಅಗತ್ಯ ನೆರವು ನೀಡಲು ಬಹು ಏಜೆನ್ಸಿಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ಭೂಕುಸಿತದಲ್ಲಿ ಮೃತಪಟ್ಟವರ ಮೃತದೇಹಗಳನ್ನು ಗುರುತಿಸಲಾಗುತ್ತಿಲ್ಲ. ಪತ್ತೆ ಮಾಡಲಾದ ದೇಹಗಳನ್ನು ಮೃತರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ.

ರಾಜ್ಯದ ಪೋತುಕಲ್‌ ಚಾಲಿಯಾರ್‌ ನದಿಯಿಂದ 16 ಶವಗಳು ಪತ್ತೆಯಾಗಿವೆ. ಇದಲ್ಲದೆ ಮೃತ ದೇಹಗಳ ತುಂಡುಗಳನ್ನು ಸಹ ಹೊರತೆಗೆಯಲಾಗಿದೆ. ಇನ್ನೂ ಹಲವರು ಕೆಸರಿನಲ್ಲಿ ಸಿಕ್ಕಿಬಿದ್ದಿರುವ ಅಥವಾ ಕೊಚ್ಚಿ ಹೋಗಿರುವ ಸಾಧ್ಯತೆಗಳಿದ್ದು, ರಕ್ಷಣಾ ಕಾರ್ಯಾಚರಣೆಮುಂದುವರಿಸಲಾಗಿದೆ.ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ 45 ಪರಿಹಾರ ಶಿಬಿರಗಳಿಗೆ 3,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.

ನದಿಯಲ್ಲಿ ಕೊಚ್ಚಿಕೊಂಡು ಹೋದ ಸ್ಥಳೀಯರ ಶವ ಪಕ್ಕದ ಜಿಲ್ಲೆ ಮಲ್ಲಪ್ಪುರಂನಲ್ಲಿ ಸಿಕ್ಕಿದೆ. ಇನ್ನು ಮಣ್ಣು, ಕಲ್ಲುಬಂಡೆಗಳ ರಾಶಿಯಲ್ಲಿ ಮೃತದೇಹಗಳು ಕಂಡು ಬಂದಿದ್ದು, ಗುರುತೇ ಸಿಗದಷ್ಟು ನಜ್ಜುಗುಜ್ಜಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಗಾಯಗೊಂಡವರಿಗೆ ಮೆಪ್ಪಾಡಿ ಆರೋಗ್ಯ ಕೇಂದ್ರ, ವಿಮ್ಸೌ ಆಸ್ಪತ್ರೆ, ಬತ್ತೇರಿ ತಾಲೂಕು ಆಸ್ಪತ್ರೆ, ನಿಲಂಬೂರ್‌ ಜಿಲ್ಲಾಸ್ಪತ್ರೆ ಮುಂತಾದೆಡೆ ಚಿಕಿತ್ಸೆ ನೀಡಲಾಗುತ್ತಿದೆ.

ಮಳೆಗಾಲವಾಗಿರುವ ಹಿನ್ನೆಲೆಯಲ್ಲಿ ಸೇನೆ ಕಟ್ಟೆಚ್ಚರ ವಹಿಸಿದೆ. ಎನ್‌ಡಿಆರ್‌ಎಫ್‌ ಮತ್ತು ರಾಜ್ಯ ತಂಡಗಳೂ ಕೂಡ ರಕ್ಷಣಾ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ. ನೌಕಾಪಡೆ ಮತ್ತು ವಾಯುಪಡೆಯೂ ಸಮಾನ ಕೊಡುಗೆ ನೀಡುತ್ತಿವೆ ಎಂದು ರಕ್ಷಣಾ ಭದ್ರತಾ ದಳ ಕೇಂದ್ರದ ಕಮಾಂಡೆಂಟ್‌, ಕರ್ನಲ್‌ ಪರಮವೀರ್‌ ಸಿಂಗ್‌ ನಾಗ್ರಾ ತಿಳಿಸಿದರು.ಭೂಕುಸಿತವಾದ ಭಾಗದಲ್ಲಿ ಪ್ರಮುಖ ಸಂಪರ್ಕ ಸೇತುವೆಯೊಂದು ಕೊಚ್ಚಿಹೋಗಿದೆ. ತಾತ್ಕಾಲಿಕ ಸೇತುವೆ ನಿರ್ಮಿಸಲಾಗಿದೆ.

ಭಾರತೀಯ ಕೋಸ್ಟ್‌ ಗಾರ್ಡ್‌ನಿಂದ ಅಪಾರ ಪ್ರಮಾಣದ ಇಂಜಿನಿಯರಿಂಗ್‌ ಉಪಕರಣಗಳು, ರಕ್ಷಣಾ ಶ್ವಾನ ದಳ, ವಿಪತ್ತು ಪರಿಹಾರ ತಂಡಗಳನ್ನೂ ರವಾನಿಸಲಾಗಿದೆ.ರಕ್ಷಣಾ ಮತ್ತು ಪರಿಹಾರಕ್ಕಾಗಿ 300 ಸೇನಾ ಸಿಬ್ಬಂದಿಯನ್ನು ಕೂಡಲೇ ರವಾನಿಸಲಾಗಿತ್ತು. ನಂತರ ಭೂಸೇನೆ, ನೌಕಾಪಡೆ, ವಾಯುಪಡೆಯು ಹೆಚ್ಚುವರಿ ಸಿಬ್ಬಂದಿ ಕುಸಿತಪೀಡಿತ ಪ್ರದೇಶಗಳಿಗೆ ತಲುಪಿದ್ದಾರೆ. ಹೆಲಿಕಾಪ್ಟರ್‌ಗಳನ್ನೂ ನಿಯೋಜಿಸಲಾಗಿದೆ.

ತಿರುವನಂತಪುರ, ಬೆಂಗಳೂರು ಮತ್ತು ದೆಹಲಿಯಿಂದ ಸರ್ವಿಸ್‌‍ ಏರ್‌ಕ್ರಾಫ್‌್ಟಗಳ ಮೂಲಕ ವಯನಾಡ್‌ಗೆ ಬೃಹತ್‌ ಇಂಜಿನಿಯರಿಂಗ್‌ ಉಪಕರಣಗಳು, ರಕ್ಷಣಾ ಶ್ವಾನ ತಂಡಗಳು ಮತ್ತು ಇತರ ಅಗತ್ಯ ಪರಿಹಾರ ಸಾಮಗ್ರಿಗಳನ್ನು ಸಾಗಿಸಲಾಗಿದೆ.

ನುರಿತ ಐಸಿಜಿ ಸಿಬ್ಬಂದಿ ಮತ್ತು ವೈದ್ಯಕೀಯ ತಂಡವನ್ನು ಒಳಗೊಂಡಿರುವ ಡಿಆರ್‌ಟಿ ತಂಡಗಳನ್ನೂ ಸಜ್ಜುಗೊಳಿಸಲಾಗಿದೆ. 690 ಅಡಿ ಬೈಲಿ ಸೇತುವೆ ನಿಯೋಜನೆಗೆ ರಾಜ್ಯ ಸರ್ಕಾರ ಮನವಿ ಮಾಡಿದೆ. ಪ್ರಸ್ತುತ, ಸೇತುವೆಯ 330 ಅಡಿವರೆಗೆ ಬೆಂಗಳೂರಿನ ಮದ್ರಾಸ್‌‍ ಇಂಜಿನಿಯರ್‌ ಗ್ರೂಪ್‌ ಸೆಂಟರ್‌ನಿಂದ ರಸ್ತೆಯ ಮೂಲಕ ಸ್ಥಳಾಂತರಿಸಲಾಗುತ್ತಿದೆ. ಉಳಿದ ಭಾಗಗಳನ್ನು ದೆಹಲಿ ಕಂಟೋನೆಂಟ್‌ನಿಂದ ಏರ್‌ಲಿಫ್ಟ್ ಮಾಡಲಾಗುತ್ತಿದೆ. ಒಂದು 110 ಅಡಿ ಬೈಲಿ ಸೇತುವೆಯನ್ನು ದೆಹಲಿಯಿಂದ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದೆ.

ಇದಲ್ಲದೇ, ರಬ್ಬರ್‌ ದೋಣಿಗಳು, ಪಂಪ್‌ಗಳು, ಸುರಕ್ಷತೆಗಾಗಿ ಲೈಫ್‌ ಜಾಕೆಟ್‌ಗಳು, ಪ್ರತಿಕೂಲ ಹವಾಮಾನದಲ್ಲಿ ಸಿಬ್ಬಂದಿ ರಕ್ಷಣೆಗಾಗಿ ರೈನ್‌ಕೋಟ್‌ಗಳು ಮತ್ತು ಗಮ್‌ ಬೂಟ್‌ಗಳು ಮತ್ತು ಇತರ ಭೂ ತೆರವು ಉಪಕರಣಗಳಂತಹ ಅಗತ್ಯ ವಿಪತ್ತು ಪರಿಹಾರ ಸಾಮಗ್ರಿಗಳನ್ನು ತಂಡಗಳಿಗೆ ಒದಗಿಸಲಾಗಿದೆ. ಸಂತ್ರಸ್ತರಿಗೆ ಆಹಾರ ಸಾಮಗ್ರಿಗಳು, ಕುಡಿಯುವ ನೀರು ಮತ್ತು ಇತರ ಅಗತ್ಯ ಸರಬರಾಜುಗಳನ್ನೂ ಸಹ ರವಾನಿಸಲಾಗಿದೆ ಎಂದು ಮಾಹಿತಿ ನೀಡಿದೆ.

ಈ ಮಧ್ಯೆ ಇಂದೂ ವಯನಾಡು ಭಾಗದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು, ಆತಂಕ ಮೂಡಿಸಿದೆ. ಉತ್ತರ ಕೇರಳದ ವಿವಿಧೆಡೆಗಳಲ್ಲಿ ಧಾರಾಕಾರ ಮಳೆ ಸುರಿಯುವ ಮುನ್ನೆಚ್ಚರಿಕೆ ನೀಡಿದೆ. ಜುಲೈ 31 ಮತ್ತು ಆಗಸ್ಟ್‌ 1ರಂದು ವಯನಾಡು ಮತ್ತು ನೆರೆಯ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.

2ರಂದು ಈ ಭಾಗಗಳಲ್ಲಿ ಮಳೆಯ ಪ್ರಮಾನ ಇನ್ನೂ ಹೆಚ್ಚಾಗಲಿದೆ. ಇಂದು ಕೇರಳದಲ್ಲಿ ಗಂಟೆಗೆ 30-40ರಿಂದ 50 ಕಿ.ಮೀ. ವೇಗದಲ್ಲಿ ಬಲವಾದ ಮೇಲೈ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ.ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಕಾಸರಗೋಡು, ಕಣ್ಣೂರು, ಕೋಝಿಕೋಡ್‌, ವಯನಾಡು, ಮಲಪ್ಪುರಂ, ಪಾಲಕ್ಕಾಡ್‌, ತ್ರಿಶೂರ್‌, ಇಡುಕ್ಕಿ, ಎರ್ನಾಕುಲಂ, ಅಲಪ್ಪುಳ ಮತ್ತು ಪತ್ತನಂತೊಟ್ಟ ಜಿಲ್ಲೆಗಳ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಜತೆಗೆ ನಡೆಯಲಿರುವ ಪರೀಕ್ಷೆಗಳನ್ನೂ ಮುಂದೂಡಲಾಗಿದೆ.

RELATED ARTICLES

Latest News