Sunday, September 8, 2024
Homeರಾಜ್ಯನಾಳೆಯಿಂದ ವಿಧಾನಮಂಡಲದಲ್ಲಿ ಬಜೆಟ್ ಫೈಟ್

ನಾಳೆಯಿಂದ ವಿಧಾನಮಂಡಲದಲ್ಲಿ ಬಜೆಟ್ ಫೈಟ್

ಬೆಂಗಳೂರು,ಫೆ.18- ಲೋಕಸಭಾ ಚುನಾವಣೆಯ ತಯಾರಿಯಲ್ಲಿರುವ ರಾಜಕೀಯ ಪಕ್ಷಗಳು ನಾಳೆಯಿಂದ ವಿಧಾನಮಂಡಲದಲ್ಲಿ ಆರಂಭವಾಗುವ ಬಜೆಟ್ ಮೇಲಿನ ಚರ್ಚೆಯಲ್ಲಿ ಹಣಾಹಣಿಯ ವಾಕ್ಸಮರಕ್ಕೆ ಸಜ್ಜುಗೊಂಡಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ 3.71 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದಾರೆ. ಬಜೆಟ್‍ನಲ್ಲಿ 55 ಸಾವಿರ ಕೋಟಿ ಬಂಡವಾಳ ವೆಚ್ಚ ಹಾಗೂ ಪಂಚಖಾತ್ರಿ ಯೋಜನೆಗೆ 52 ಸಾವಿರ ಕೋಟಿ ಹಣ ನಿಗದಿ ಮಾಡಿದ್ದಾರೆ.

ಜೊತೆಗೆ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯದ ಸಾಲದ ಪ್ರಮಾಣ 1 ಲಕ್ಷ ಕೋಟಿ ರೂ. ದಾಟಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ವಿರೋಧ ಪಕ್ಷಗಳು ರಾಜ್ಯಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ತಯಾರಿ ನಡೆಸಿದರೆ, ಇದಕ್ಕೆ ಪ್ರತಿಯಾಗಿ ಹಿಂದಿನ ಸರ್ಕಾರಗಳು ಮಾಡಿದ್ದ ಸಾಲದ ಪ್ರಮಾಣವನ್ನು ಲೆಕ್ಕ ಹಾಕಿಟ್ಟುಕೊಂಡು ಸಿದ್ದರಾಮಯ್ಯ ತಿರುಗೇಟು ನೀಡಲು ಸಜ್ಜುಗೊಂಡಿದ್ದಾರೆ.

2024-25ನೇ ಸಾಲಿನಲ್ಲಿ 1.05 ಲಕ್ಷ ಕೋಟಿ ಸಾಲ ಪಡೆಯಲಾಗುತ್ತಿದೆ. ಆದರೆ ಇದನ್ನು ಸರಿಯಾದ ಮಾರ್ಗದಲ್ಲೇ ಉಪಯೋಗಿಸಲಾಗುತ್ತಿದೆ. ಬಂಡವಾಳ ವೆಚ್ಚ ಮತ್ತು ಪಂಚಖಾತ್ರಿಗಳಿಗೆ 1.07 ಲಕ್ಷ ಕೋಟಿ ವೆಚ್ಚವಾಗುತ್ತಿದೆ. ಈ ಎರಡೂ ಬಾಬ್ತುಗಳು ಒಂದು ಆಸ್ತಿ ಸೃಜನೆಯಾಗಿದ್ದರೆ, ಮತ್ತೊಂದು ಜನಸಾಮಾನ್ಯರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸುವ ಮಹತ್ವಾಕಾಂಕ್ಷೆಯುಳ್ಳದ್ದಾಗಿದೆ ಎಂದು ಕಾಂಗ್ರೆಸ್ ಸಮರ್ಥಿಸಿಕೊಳ್ಳಲು ಮುಂದಾಗಿದೆ.

ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿಯವರು ಕೇಂದ್ರ ಸರ್ಕಾರದ ಆರ್ಥಿಕ ತಾರತಮ್ಯದ ಬಗ್ಗೆ ಹಾಗೂ ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅಸಹಕಾರದ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.ಬಜೆಟ್ ಮಂಡನೆಯಲ್ಲಿ ಹನ್ನೊಂದನೇ ಪುಟ ಓದುವ ವೇಳೆಗೆ ಜೆಡಿಎಸ್ ಮತ್ತು ಬಿಜೆಪಿ ಕಲಾಪವನ್ನು ಬಹಿಷ್ಕರಿಸಿ ಹೊರ ನಡೆದಿದ್ದವು. ಕೇಂದ್ರ ಸರ್ಕಾರವನ್ನು ಟೀಕಿಸಿದ್ದು ವಿರೋಧಪಕ್ಷಗಳಿಗೆ ಸಹಿಸಲಾಸಾಧ್ಯವಾಗಿತ್ತು. ಬಜೆಟ್‍ನಲ್ಲಿ ಏನೂ ಇಲ್ಲ ಎಂದು ಟ್ರೋಲಿಂಗ್ ಹಾಡು ಹಾಡಿ ಲೇವಡಿ ಮಾಡಿವೆ. ಇದಕ್ಕೆ ಮುಖ್ಯಮಂತ್ರಿಯವರು ವಿಪಕ್ಷಗಳ ತಲೆಯಲ್ಲಿ ಏನೂ ಇಲ್ಲ ಎಂದು ತಿರುಗೇಟು ನೀಡಿಯೂ ಆಗಿದೆ.

ನಂತರ ಬಜೆಟ್‍ನಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹೆಚ್ಚಿನ ಹಣ ನೀಡಲಾಗಿದೆ. ಹಿಂದೂಗಳನ್ನು ಕಡೆಗಣಿಸಲಾಗಿದೆ ಎಂಬ ಪ್ರಚಾರವನ್ನು ವಿಪಕ್ಷಗಳು ವ್ಯಾಪಕವಾಗಿ ಬಿಂಬಿಸಿವೆ. ಇದಕ್ಕೆ ಕಾಂಗ್ರೆಸ್ ಎಷ್ಟೇ ಸಮರ್ಥನೆ ನೀಡಿದರೂ ಜನರ ಮನಸ್ಸಿನಲ್ಲಿರುವ ಅನುಮಾನ ನಿವಾರಣೆಯಾಗುವ ಸನ್ನಿವೇಶಗಳು ಕಂಡುಬರುತ್ತಿಲ್ಲ. ಮುಖ್ಯಮಂತ್ರಿಯವರು 15 ಬಜೆಟ್ ಮಂಡಿಸಿದ ಅನುಭವದ ಆಧಾರದ ಮೇಲೆ ವಿಪಕ್ಷಗಳ ಟೀಕೆ ಹಾಗೂ ಅಪಪ್ರಚಾರವನ್ನು ಹೇಗೆ ನಿಭಾಯಿಸುತ್ತಾರೆಂಬುದು ಕುತೂಹಲ ಕೆರಳಿಸಿದೆ.

ಲೋಕಸಭೆ ಚುನಾವಣೆ ಸಮೀಪ ಇರುವುದರಿಂದ ಕಾಂಗ್ರೆಸ್ ಪಕ್ಷವನ್ನು ಹಿಂದೂ ವಿರೋ ಎಂದು ಹಣೆಪಟ್ಟಿ ಕಟ್ಟಲು ಬಿಜೆಪಿ ಮತ್ತು ಜೆಡಿಎಸ್ ಹರಸಾಹಸ ನಡೆಸುತ್ತಿವೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಹಿಂದಿನ ಬಾರಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರಿಂದ ರಾಜ್ಯಕ್ಕೆ ಯಾವುದೇ ಲಾಭವಾಗಿಲ್ಲ. ರಾಜ್ಯದ ಅಭಿವೃದ್ಧಿಗೆ ಕೇಂದ್ರದಿಂದ ನಿರಂತರ ತಾರತಮ್ಯವಾಗುತ್ತಿದೆ ಎಂಬ ಭಾವನೆ ದೃಢೀಕರಿಸಲು ಯತ್ನಿಸುತ್ತಿದೆ.

ಈ ಜಿದ್ದಾಜಿದ್ದಿ ನಡುವೆ ಬಜೆಟ್‍ನ ಲೋಪದೋಷಗಳ ಬಗ್ಗೆಯೂ ಸಾಕಷ್ಟು ವಿಮರ್ಶೆ ನಡೆಯುವ ಸಾಧ್ಯತೆಯಿದೆ. ಲೋಕಸಭೆ ಚುನಾವಣೆಯ ಪೂರ್ವ ತಾಲೀಮಾಗಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಿನ್ನೆ ದೆಹಲಿಯಲ್ಲಿ ನಡೆದಿದೆ.ದೇಶಾದ್ಯಂತ 3 ಸಾವಿರಕ್ಕೂ ಹೆಚ್ಚು ಜನಪ್ರತಿನಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು. ಹೈಕಮಾಂಡ್ ನಾಯಕರು ವಿಪಕ್ಷಗಳನ್ನು ಮಣಿಸಲು ಅನುಸರಿಸಿದ ಕಾರ್ಯತಂತ್ರಗಳ ಬಗ್ಗೆ ಕೇಸರಿ ಕಲಿಗಳಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.

ವರಿಷ್ಠರು ನೀಡುವ ಪಾಶುಪತಾಸ್ತ್ರಗಳೊಂದಿಗೆ ಆಗಮಿಸಿರುವ ಬಿಜೆಪಿಯ ಶಾಸಕರು, ಪ್ರಮುಖ ನಾಯಕರು ನಾಳೆ ವಿಧಾನಮಂಡಲದಲ್ಲಿ ರಣೋತ್ಸಾಹ ಪ್ರದರ್ಶಿಸುವ ಸಾಧ್ಯತೆಯಿದೆ. ಇತ್ತ ಕಾಂಗ್ರೆಸ್ ಕೂಡ ನಿನ್ನೆ ಮಂಗಳೂರಿನಲ್ಲಿ ರಾಜ್ಯಮಟ್ಟದ ಕಾರ್ಯಕರ್ತರ ಸಮಾವೇಶ ನಡೆಸಿ, ಲೋಕಸಭೆಯ ಪೂರ್ವ ತಯಾರಿಗೆ ರಣಕಹಳೆ ಊದಿದೆ. ಅದೇ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್‍ನ ನಾಯಕರು ಬಿಜೆಪಿಗೆ ಠಕ್ಕರ್ ನೀಡಲು ಸಜ್ಜುಗೊಂಡಿದ್ದಾರೆ. ಈಗಾಗಲೇ ಶಾಸಕಾಂಗ ಸಭೆ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿಯ ಟೀಕೆ, ವಾಗ್ದಾಳಿಗೆ ಪ್ರತ್ಯುತ್ತರಿಸಲು ಒಂದು ಪಡೆಯನ್ನೇ ಸಜ್ಜುಗೊಳಿಸಿದ್ದಾರೆ.

ಬೆಳಗಾವಿ ಅಧಿವೇಶನದಲ್ಲಿ ಪ್ರತಿ ಹಂತದಲ್ಲೂ ಶಾಸಕರ ಅನಗತ್ಯ ಚರ್ಚೆಗಳಿಗೆ ಬ್ರೇಕ್ ಹಾಕುತ್ತಿದ್ದ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಬೆಂಗಳೂರಿನ ಕಲಾಪದಲ್ಲಿ ಉದಾರಿಯಾದಂತೆ ಕಂಡುಬಂದಿದೆ. ಗುರುವಾರ ಮಂಗಳೂರಿನ ಸೆಂಟ್ ಥೆರೇಸಾ ಶಾಲೆಯ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ ಗದ್ದಲ ಎಬ್ಬಿಸುವ ಪ್ರಯತ್ನ ನಡೆಸಿತ್ತು. ಅದಕ್ಕೆ ಕಾಂಗ್ರೆಸ್ ಕೂಡ ಸಿದ್ಧವಾಗಿಯೇ ಪ್ರತಿ ವಾಗ್ದಾಳಿ ನಡೆಸಿದ್ದು ಕಂಡುಬಂದಿತ್ತು. ಆ ವಿಚಾರವನ್ನು ಬಿಜೆಪಿ ಕೈ ಬಿಟ್ಟಿದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಮೊನ್ನೆ ಬಜೆಟ್ ಅಧಿವೇಶನ ಇದ್ದಿದ್ದರಿಂದಾಗಿ ಬಿಜೆಪಿ ಸಭಾತ್ಯಾಗ ಮಾಡಿ, ಮಂಗಳೂರಿನ ವಿಚಾರವನ್ನು ಅರ್ಧಕ್ಕೆ ನಿಲ್ಲಿಸಿದಂತೆ ಕಂಡುಬರುತ್ತಿದೆ. ರಾಜ್ಯದ ಬರ, ಕುಡಿಯುವ ನೀರಿನ ಸಮಸ್ಯೆ, ಉದ್ಯೋಗ ಸೃಷ್ಟಿಯ ಲೋಪಗಳು, ಕೈಗಾರಿಕೆ ಹಿನ್ನಡೆ, ಶಿಕ್ಷಣ ವ್ಯವಸ್ಥೆಯಲ್ಲಿನ ಸುಧಾರಣೆ, ಬೆಲೆ ಏರಿಕೆ, ವಿದ್ಯುತ್ ಕೊರತೆ, ಕೃಷಿ ಉತ್ಪನ್ನಗಳ ಬೆಲೆ ಕುಸಿತ ಸೇರಿದಂತೆ ಹಲವಾರು ಮಹತ್ವದ ವಿಚಾರಗಳಿವೆ. ಆದರೆ ಚುನಾವಣೆಯ ಕಾರಣಕ್ಕಾಗಿ ಭಾವನಾತ್ಮಕ ವಿಚಾರಗಳಿಗೆ ಹೆಚ್ಚಿನ ಆದ್ಯತೆ ದೊರೆಯುವ ಸಾಧ್ಯತೆಯಿದ್ದು, ಮುಂದಿನ 5 ದಿನಗಳ ಕಾಲ ಕಲಾಪ ರಂಗೇರುವ ನಿರೀಕ್ಷೆಗಳಿವೆ.

RELATED ARTICLES

Latest News