ಮೈಸೂರು, ಅ.18- ರಾಜ್ಯ ಸರ್ಕಾರ ಆರ್‌ಎಸ್‌ಎಸ್ ಸಂಘಟನೆಯನ್ನು ಮಾತ್ರ ಗುರಿಯಾಗಿಟ್ಟುಕೊಂಡು ಯಾವ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಬದಲಾಗಿ ಯಾವುದೇ ಖಾಸಗಿ ಸಂಘ ಸಂಸ್ಥೆಗಳು ಅನುಮತಿ ಪಡೆಯದೇ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಚಟುವಟಿಕೆ ನಡೆಸಬಾರದು ಎಂದು ನಿರ್ಬಂಧಿಸಿರುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬಿಜೆಪಿಯ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಇಂತಹ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಆಗ ಏಕೆ ವಿರೋಧ ವ್ಯಕ್ತಪಡಿಸಲಿಲ್ಲ ಎಂದು ಪ್ರಶ್ನಿಸಿದರು.
ನಾವು ಸಂಘ ಪರಿವಾರದ ಚಟುವಟಿಕೆಗಳನ್ನು ಮಾತ್ರ ನಿರ್ಬಂಧಿಸಿದ್ದರೆ, ಆಗ ಪ್ರಶ್ನೆ ಮಾಡಬಹುದಿತ್ತು. ಯಾವುದೇ ಸಂಘಟನೆಗಳಾಗಿದ್ದರೂ ಅನುಮತಿ ಪಡೆಯದೇ ಅನಧಿಕೃತವಾಗಿ ಚಟುವಟಿಕೆ ನಡೆಸಬಾರದು ಎಂದು ನಿರ್ಣಯಿಸಲಾಗಿದೆ. ಇದರಲ್ಲಿ ವಿರೋಧ ಮಾಡುವಂಥಾದ್ದು ಏನಿದೆ? ಎಂದರು.
ಬಿಜೆಪಿಯವರಿಗೆ ಬಡವರ ಕೆಲಸ ಮಾಡಲು ಗೊತ್ತಿಲ್ಲ. ಸದಾಕಾಲ ರಾಜಕಾರಣವನ್ನೇ ಮಾಡುತ್ತಾರೆ. ಒಂದು ವೇಳೆ ರಾಜ್ಯದಲ್ಲಿ ಕಾನೂನು ಸುವ್ಯಸ್ಥೆಗೆ ಭಂಗ ತರುವ ಪ್ರಯತ್ನ ಮಾಡಿದರೆ, ಪೊಲೀಸರು ನೋಡಿಕೊಳ್ಳುತ್ತಾರೆ ಎಂದು ಎಚ್ಚರಿಸಿದರು.
ಮೈಸೂರಿನಲ್ಲಿ ಉದ್ಯೋಗ ಮೇಳ ನಡೆಸಿದಂತೆ ಇತರ ಜಿಲ್ಲೆಗಳಲ್ಲಿ ಕಾರ್ಯಕ್ರಮ ಆಯೋಜಿಸಿರುವುದಾಗಿ ಪ್ರಶ್ನೆಯೊಂದಕ್ಕೆ ಮುಖ್ಯಮಂತ್ರಿ ಉತ್ತರಿಸಿದರು. ಗುತ್ತಿಗೆದಾರರ ಸಂಘದಿಂದ ಮಾಡಲಾಗಿರುವ ಕಮಿಷನ್ ಆರೋಪಕ್ಕೆ ಸಂಬಂಧಪಟ್ಟ ಸಚಿವರೇ ಉತ್ತರ ನೀಡುತ್ತಾರೆ ಎಂದು ಹೇಳಿದರು.
ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ನ ಪಥ ಸಂಚಲನಕ್ಕೆ ಅನುಮತಿ ಕೇಳಿದ ವೇಳೆ ಗದ್ದಲವಾಗಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ. ಹೆಚ್ಚಿನ ವಿವರಣೆ ಪಡೆದು ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದರು.