ಬೆಂಗಳೂರು,ಆ.3- ವಲಯ ಅರಣ್ಯಾಧಿಕಾರಿ ಹುದ್ದೆಯಿಂದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದರ್ಜೆಗೆ ಬಡ್ತಿ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ತೋರಿಸುತ್ತಿರುವ ಆತುರ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದ್ದು, ನಿಯಮಗಳ ಉಲ್ಲಂಘನೆಯ ಆರೋಪಗಳು ಕೇಳಿ ಬಂದಿವೆ.
ಸರ್ಕಾರಿ ನೌಕರರಿಗೆ ಬಡ್ತಿ ನೀಡುವಾಗ ನೇರ ನೇಮಕಾತಿ ಆಗಿರುವವರು ಹಾಗೂ ಮುಂಬಡ್ತಿ ಪಡೆದ ಎರಡು ವೃಂದಗಳಿಂದಲೂ ಸರಾಸರಿ 50:50ರ ಅನುಪಾತವನ್ನು ಪರಿಗಣಿಸಬೇಕು ಎಂಬ ನಿಯಮ ಇದೆ. ಅರಣ್ಯ ಇಲಾಖೆಯ ಅಧಿಕಾರಿಗಳ ಸಂಘದ ಪ್ರಮುಖರು ಮುಂಬಡ್ತಿ ಮೂಲಕ ಉನ್ನತ ಹ್ದುೆಗೇರಿದವರಾಗಿದ್ದು, ಸಹಜವಾಗಿಯೇ ನೇರ ನೇಮಕಾತಿ ಆದವರನ್ನು ಕಡೆಗಣಿಸಿ, ಮುಂಬಡ್ತಿ ಪಡೆದವರ ಪರವಾಗಿ ಲಾಬಿ ನಡೆಸಿದ್ದಾರೆ ಎಂಬ ಟೀಕೆಗಳಿವೆ.
1976ರ ಆದೇಶವನ್ನು ಉಲ್ಲಂಘಿಸಿ ಅರಣ್ಯ ಇಲಾಖೆಯು ಬ್ಲಾಕ್ ಅವಧಿ 17ರಲ್ಲಿ 13 ಹುದ್ದೆಗಳನ್ನು ಹಾಗೂ 27 ಮತ್ತು 29ರಲ್ಲಿ ತಲಾ 3 ಹೆಚ್ಚುವರಿ ಹ್ದುೆಗಳನ್ನು ಹೆಚ್ಚುವರಿಯಾಗಿ ಕ್ಲೈಮ್ ಮಾಡಿದೆ. ಜೊತೆಗೆ 2018ರ ಡಿಸೆಂಬರ್ 27ರಂದು ನಿಗದಿ ಪಡಿಸಿದ ನಮೂನೆಗಳಲ್ಲಿ ರಿಕ್ತಸ್ಥಾನವಹಿ ಹಾಗೂ ರೋಸ್ಟರ್ ರಿಜಿಸ್ಟರ್ ಪ್ರಕಟಿಸಿಲ್ಲ. ದೋಷಪೂರಿತ ಜೇಷ್ಠತಾ ಪಟ್ಟಿಯು 2020ರ ನವೆಂಬರ್ 19ರಂದು ರದ್ದುಗೊಂಡಿದೆ. ಜೇಷ್ಠತಾ ಪಟ್ಟಿಯಲ್ಲಾದ ಲೋಪಗಳನ್ನು ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ವಿಚಾರಣೆ ನಡೆಸಿದ ಹೈಕೋರ್ಟ್ ಪ್ರಕರಣ ಇತ್ಯರ್ಥಗೊಳ್ಳುವವರೆಗೂ ಬಡ್ತಿ ನೀಡದಂತೆ ಆದೇಶಿಸಿದೆ. ಇದರ ನಡುವೆ ನ್ಯಾಯಾಲಯದ ಮೆಟ್ಟಿಲು ಏರಿದವರ ಹೆಸರನ್ನು ಜೇಷ್ಠತಾ ಪಟ್ಟಿಗೆ ಸೇರಿಸಿ ತೇಪೆ ಹಚ್ಚುವ ಕೆಲಸವನ್ನು ಅರಣ್ಯ ಇಲಾಖೆ ಮಾಡಿದೆ. ಪರಿಷ್ಕೃತ ಜೇಷ್ಠತಾ ಪಟ್ಟಿಯಲ್ಲಿ ಸಣ್ಣಪುಟ್ಟ ಬದಲಾವಣೆ ಹೊರತು ಪಡಿಸಿ ನ್ಯಾಯೋಚಿತವಾದ ಕ್ರಮಗಳಾಗಿಲ್ಲ ಎಂದು ಅವಕಾಶ ವಂಚಿತ ಅಧಿಕಾರಿಗಳು ಆರೋಪಿಸಿದ್ದಾರೆ.
ಹೈಕೋರ್ಟ್ ತೀರ್ಪಿನ ಹೊರತಾಗಿಯೂ ಸರ್ಕಾರ ಈಗ 72 ಮಂದಿಗೆ ವಲಯ ಅರಣ್ಯ ಅಧಿಕಾರಿಗಳ ಹುದ್ದೆಯಿಂದ ಸಹಾಯಕ ಅರಣ್ಯ ಅಧಿಕಾರಿ ಹ್ದುೆಗೆ ಬಡ್ತಿ ನೀಡಲು ಮುಂದಾಗಿದೆ. ದೋಷಪೂರಿತ ಜೇಷ್ಠತಾ ಪಟ್ಟಿ ಹಾಗೂ ಹೈಕೋರ್ಟ್ ತೀರ್ಪಿನ ಹೊರತಾಗಿಯೂ ಬಡ್ತಿ ನೀಡಲು ಮುಂದಾಗಿರುವ ಹಿನ್ನೆಲೆಯಲ್ಲಿ ಕೆಲ ಅಧಿಕಾರಿಗಳು ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದಾರೆ.
ಈ ನಡುವೆ ಅರಣ್ಯ ಇಲಾಖೆ ನೌಕರರಿಗೆ ಆತುರಾತುರವಾಗಿ ಮುಂಬಡ್ತಿ ನೀಡಲು ಸರ್ಕಾರ ಮುಂದಾಗಿದೆ. ಅದರಲ್ಲಿ ನೇರ ನೇಮಕಾತಿಯಾದವರನ್ನು ಕಡೆಗಣಿಸಲಾಗಿದೆ ಎಂಬ ದೂರುಗಳು ಇವೆ. ಕೆಲ ಪ್ರಭಾವಿಗಳು ಸರ್ಕಾರ ಮತ್ತು ಸಚಿವಾಲಯವನ್ನು ದಿಕ್ಕು ತಪ್ಪಿಸುವ ಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ. ಎಲ್ಲವೂ ಸರಿ ಇದೆ ಮತ್ತು ನಿಯಮಗಳ ಪಾಲನೆಯಾಗಿದೆ ಎಂದು ಸಚಿವಾಲಯವನ್ನು ನಂಬಿಸಿ ಜೇಷ್ಠತಾ ಪಟ್ಟಿಗೆ ಅಂಗೀಕಾರ ಪಡೆದು ಬಡ್ತಿ ನೀಡುವ ಪ್ರಯತ್ನ ನಡೆದಿದೆ.
ಬಡ್ತಿ ನೀಡುವ ಸಲುವಾಗಿ ನಡೆದಿರುವ ಡಿಪಿಸಿಯಲ್ಲೂ ಪಾರದರ್ಶಕತೆ ಕಾಯ್ದುಕೊಂಡಿಲ್ಲ ಎನ್ನಲಾಗಿದೆ. ಡಿಪಿಸಿ ಸಭೆಯ ಕಾರ್ಯಸೂಚಿ ಮಾಹಿತಿಯನ್ನು ರಹಸ್ಯವಾಗಿ ಇಡಲಾಗಿದೆ. ತೆರೆ ಮರೆಯಲ್ಲಿ ಎಲ್ಲವನ್ನೂ ಮುಗಿಸಿ, ಡಿಪಿಸಿ ಪ್ರಕಿಯೆಗೆ ಸದಸ್ಯರ ಸಹಿ ಪಡೆದುಕೊಳ್ಳಲಾಗಿದೆ.
ಸಭೆಯಲ್ಲಿ ಆಖೈರುಗೊಳಿಸಲಾದ ಪಟ್ಟಿಯನ್ನು ಸಚಿವಾಲಯದ ಅನುಮೋದನೆಗೆ ಕಳುಹಿಸಲಾಗಿದೆ. ಅನಪೇಕ್ಷಿತ ಪ್ರಭಾವಗಳಿಂದಾಗಿ ನೇರ ನೇಮಕಾತಿಯ ಮೇಲೆ ಸೇವೆಗೆ ಸೇರಿ, ಮುಂಬಡ್ತಿಯ ನಿರೀಕ್ಷೆಯಲ್ಲಿದ್ದ 150ಕ್ಕೂ ಹೆಚ್ಚು ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದ 371 ಜೆ ಅಡಿಯಲ್ಲಿ ಬರುವ ಅಧಿಕಾರಿಗಳಿಗೂ ದೋಷಪೂರಿತ ಜೇಷ್ಠತಾ ಪಟ್ಟಿಯಿಂದ ಅನ್ಯಾಯವಾಗುತ್ತಿದೆ ಎಂದು ಹೇಳಲಾಗಿದೆ.
ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆಯ ಪ್ರಕರಣ ಬಾಕಿ ಇದ್ದಾಗಲೂ ಕೂಡ ಡಿಪಿಸಿ ನಡೆಸಿ, ಮುಂಬಡ್ತಿ ನೀಡುವ ದುಸ್ಸಾಹಸ ಏಕೆ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಅವಕಾಶ ವಂಚಿತ ಅಧಿಕಾರಿಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ಆ.19ಕ್ಕೆ ದಿನಾಂಕ ನಿಗದಿಯಾಗಿದೆ. ಅದಕ್ಕೂ ಮೊದಲು ಬಡ್ತಿ ನೀಡುವ ತಯಾರಿ ಶುರುವಾಗಿದೆ.
ಸದ್ಯಕ್ಕೆ ಮುಂಬಡ್ತಿ ನೀಡಿ, ಸ್ಥಳ ನಿಯೋಜನೆ ಮಾಡುವುದು, ನಂತರ ಕಾನೂನು ಸಂಘಷರ್ದಲ್ಲಿ ಕಾಲಹರಣ ಮಾಡಿ, ಬಡ್ತಿ ಪಡೆದವರು ಹುದ್ದೆಯ ಮೋಜನ್ನು ಅನುಭವಿಸುವುದು ಎಂಬ ಹುನ್ನಾರ ಅಡಗಿದಂತಿದೆ.
ರಾಜ್ಯದಲ್ಲಿ ಪ್ರಭಾವಿ ಸಂಸದರೊಬ್ಬರು ಮುಂಬಡ್ತಿ ಪಟ್ಟಿಗೆ ಅನುಮೋದನೆ ಕೊಡಿಸುವುದಾಗಿ ವ್ಯವಹಾರ ಕುದುರಿಸಿದ್ದಾರೆ, ಇದಕ್ಕಾಗಿ ಪಟ್ಟಿಯಲ್ಲಿ ಇರುವ ಅಧಿಕಾರಿಗಳಿಂದ ಭಾರೀ ಪ್ರಮಾಣದ ಹಣ ವಸೂಲಿ ಮಾಡಲಾಗಿದೆ ಎಂಬ ಆರೋಪಗಳಿವೆ. ರಾಜ್ಯ ಸರ್ಕಾರ ಈಗಾಗಲೇ ಹಲವು ರೀತಿಯ ಆರೋಪಗಳಿಂದ ಮುಜುಗರಕ್ಕೀಡಾಗಿರುವ ಹಂತದಲ್ಲಿ ಹಣಕ್ಕಾಗಿ ಬಡ್ತಿ ಎಂಬ ಹೊಸ ಆರೋಪ ನುಂಗಲಾರದ ತುತ್ತಾಗಿದೆ.