Sunday, September 7, 2025
Homeರಾಜ್ಯಗಾಂಧಿ ಕುಟುಂಬವನ್ನು ಮೆಚ್ಚಿಸಿ ಕುರ್ಚಿ ಉಳಿಸಿಕೊಳ್ಳಲು ಬ್ಯಾಲಟ್‌ ಪೇಪರ್‌ ಬಳಕೆ ನಿರ್ಧಾರ : ಆರ್‌.ಅಶೋಕ್‌ ವಾಗ್ದಾಳಿ

ಗಾಂಧಿ ಕುಟುಂಬವನ್ನು ಮೆಚ್ಚಿಸಿ ಕುರ್ಚಿ ಉಳಿಸಿಕೊಳ್ಳಲು ಬ್ಯಾಲಟ್‌ ಪೇಪರ್‌ ಬಳಕೆ ನಿರ್ಧಾರ : ಆರ್‌.ಅಶೋಕ್‌ ವಾಗ್ದಾಳಿ

Decision to use ballot paper to please Gandhi family : R. Ashok attacks

ಬೆಂಗಳೂರು,ಸೆ.7- ಮುಂಬರುವ ಸ್ಥಳೀಯ ಚುನಾವಣೆಗಳಲ್ಲಿ (ಸ್ಥಳೀಯ ಸಂಸ್ಥೆಗಳು) ಇವಿಎಂ ಯಂತ್ರದ ಬದಲಾಗಿ ಮತ ಪತ್ರ (ಬ್ಯಾಲಟ್‌ ಪೇಪರ್‌ ) ಬಳಕೆಗೆ ನಿರ್ಧರಿಸಿರುವ ಕಾಂಗ್ರೆಸ್‌‍ ಸರ್ಕಾರದ ಸಚಿವಸಂಪುಟದ ತೀರ್ಮಾನ ತೀರಾ ಕೆಳ ಮಟ್ಟದಾಗಿದ್ದು, ಒಬ್ಬ ವ್ಯಕ್ತಿ, ಒಂದು ಕುಟುಂಬದ ರಕ್ಷಣೆಗಾಗಿ, ಸಮರ್ಥನೆಗಾಗಿ ಇಡೀ ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಪಾಪದ ಕೆಲಸಕ್ಕೆ ಸರ್ಕಾರ ಕೈಹಾಕಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅವರು, ಸ್ವಾಮಿ ಸಿಎಂ ಸಿದ್ದರಾಮಯ್ಯ ನವರೇ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರೇ, 2004 ರಲ್ಲಿ ಯುಪಿಎ-1 ಸರ್ಕಾರ ಬಂದಿದ್ದು ಇದೇ ಮತಯಂತ್ರಗಳಿಂದ. 2009 ರಲ್ಲಿ ಯುಪಿಎ-2 ಸರ್ಕಾರ ಬಂದಿದ್ದು ಇದೇ ಮತಯಂತ್ರಗಳಿಂದ. 2013 ರಲ್ಲಿ ತಾವು ಮೊದಲ ಬಾರಿ ಮುಖ್ಯಮಂತ್ರಿಗಳಾಗಿದ್ದು ಇದೇ ಮತಯಂತ್ರಗಳಿಂದ. 2023ರಲ್ಲಿ ತಾವು ಎರಡನೇ ಬಾರಿ ಮುಖ್ಯಮಂತ್ರಿಗಳಾಗಿರುವುದು ಇದೇ ಮತಯಂತ್ರಗಳಿಂದ.

ಈಗ ಅದೇ ಮತಯಂತ್ರಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮತ್ತೊಮೆ ಓಬೀರಾಯನ ಕಾಲದ ಮತಪೆಟ್ಟಿಗೆಗೆ ಮರಳುವ ನಿರ್ಧಾರ ಮಾಡಿದ್ದೀರಲ್ಲ ಸ್ವಾಮಿ. ಯಾರನ್ನು ಮೆಚ್ಚಿಸಲು ಈ ನಿರ್ಧಾರ ಮಾಡಿದ್ದೀರಿ? ಎಂದು ಸರ್ಕಾರವನ್ನು ತರಾಟೆ ತೆಗೆದುಕೊಂಡಿದ್ದಾರೆ.

ರಾಹುಲ್‌ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರನ್ನು ಮೆಚ್ಚಿಸಿ ಕುರ್ಚಿ ಉಳಿಸಿಕೊಳ್ಳಲು ಯಾವ ಮಟ್ಟಕ್ಕಾದರೂ ಇಳಿಯುತ್ತೇನೆ ಎನ್ನುವ ಸಂದೇಶ ನೀಡುವ ಮೂಲಕ ನಿಮ ಘನತೆ, ವ್ಯಕ್ತಿತ್ವವನ್ನು ತಾವೇ ಏಕೆ ಕಡಿಮೆ ಮಾಡಿಕೊಳ್ಳುತ್ತೀರಿ? ಕನ್ನಡಿಗರ ಮುಂದೆ ಏಕೆ ಸಣ್ಣವರಾಗುತ್ತೀರಿ? ಎಂದು ಪ್ರಶ್ನೆ ಮಾಡಿದ್ದಾರೆ.

ಗೆದ್ದಾಗ ಬೀಗುವುದು, ಸೋತಾಗ ವ್ಯವಸ್ಥೆಯನ್ನು ದೂಷಿಸುವುದು ಪ್ರಜಾಪ್ರಭುತ್ವಕ್ಕೆ, ಮತದಾರರಿಗೆ, ಜನಾದೇಶಕ್ಕೆ, ಇವೆಲ್ಲವನ್ನೂ ಕೊಟ್ಟ ಸಂವಿಧಾನಕ್ಕೆ ಮಾಡುವ ಅಪಮಾನ ಅಲ್ಲವೇ? ತಾವು ಸಂವಿಧಾನವಾದಿ, ಪ್ರಜಾಪ್ರಭುತ್ವವಾದಿ ಎಂದು ಇತಿಹಾಸದಲ್ಲಿ ಗುರುತಿಸಿಕೊಳ್ಳಲು ಬಯಸುತ್ತೀರೋ ಅಥವಾ ಹೈಕಮಾಂಡ್‌ ಗುಲಾಮಗಿರಿಗಾಗಿ, ಅಧಿಕಾರಕ್ಕಾಗಿ ಆತಸಾಕ್ಷಿಯನ್ನೇ ಮಾರಿಕೊಂಡ ಆತವಂಚಕ ಎಂಬ ಹಣೆಪಟ್ಟಿ ಗಳಿಸಲು ಬಯಸುತ್ತೀರೋ? ಎಂದು ಕಿಡಿಕಾರಿದ್ದಾರೆ.

ಬೇರೆ ವಿಷಯಗಳಲ್ಲಿ ರಾಜಕೀಯ ಕೆಸರೆರಚಾಟ ಏನೇ ಇರಲಿ, ನಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಆಧಾರ ಸ್ತಂಭವಾಗಿರುವ ಚುನಾವಣಾ ಪ್ರಕ್ರಿಯೆಯ ಬಗ್ಗೆಯೇ ಸಂದೇಹ ಮೂಡಿಸುವ ಪಾಪದ ಕೆಲಸ ಮಾಡಬೇಡಿ. ಇದು ನಿಮಗೆ ಖಂಡಿತ ಶೋಭೆ ತರುವುದಿಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಬ್ಯಾಲೆಟ್‌ ಪೇಪರ್‌ = ಬೋಗಸ್‌‍ ವೋಟಿಂಗ್‌, ಬ್ಯಾಲೆಟ್‌ ಪೇಪರ್‌, ಬೂತ್‌ ಕ್ಯಾಪ್ಚರಿಂಗ್‌ , ಹ್ಯಾಟ್ರಿಕ್‌ ಝೀರೋ ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ಸಂಪೂರ್ಣ ನೆಲಕಚ್ಚಿರುವ ಕಾಂಗ್ರೆಸ್‌‍ ಪಕ್ಷ, ರಾಹುಲ್‌ ಗಾಂಧಿ ಅವರನ್ನು ರಕ್ಷಿಸಲು, ಚುನಾವಣಾ ಆಯೋಗದ ಬಗ್ಗೆ, ಚುನಾವಣಾ ಪ್ರಕ್ರಿಯೆ ಬಗ್ಗೆ, ಮತಯಂತ್ರಗಳ ಬಗ್ಗೆ ಇಲ್ಲಸಲ್ಲದ ಅನುಮಾನ ಬಿತ್ತಿದ್ದು, ಊಹಾಪೋಹ ಸೃಷ್ಟಿ ಮಾಡುವ ಪ್ರಯತ್ನ ಮಾಡುತ್ತಲೇ ಬಂದಿದೆ. ಭಾರತದ ಪ್ರಜ್ಞಾವಂತ ಮತದಾರರು ಈ ಹತಾಶ ಪ್ರಯತ್ನವನ್ನು ತಿರಸ್ಕಾರ ಮಾಡುತ್ತಲೇ ಬಂದಿದ್ದಾರೆ ಎಂದು ಅಶೋಕ್‌ ಸರ್ಕಾರದ ವಿರುದ್ದ ಟೀಕಾ ಪ್ರಹಾರ ನಡೆಸಿದ್ದಾರೆ.

RELATED ARTICLES

Latest News