ಬೆಂಗಳೂರು, ಮೇ.1– ರಾಜ್ಯ ಸರ್ಕಾರದಿಂದ ನಡೆಸಲಾಗಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷಾ ವರದಿಯ ಕುರಿತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದುಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.
ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ 2015ರಲ್ಲೇ 192 ಕೋಟಿ ಖರ್ಚು ಮಾಡಿ ಸಮೀಕ್ಷೆ ನಡೆಸಿದೆ. ವರದಿ ಸಿದ್ದವಾಗಿದ್ದರೂ ಹಿಂದೆ ಐದು ವರ್ಷಗಳ ಕಾಲ ಆಗಿನ ಮುಖ್ಯಮಂತ್ರಿಗಳಾಗಿದ್ದ ಹೆಚ್.ಡಿ.ಕುಮಾರಸ್ವಾಮಿ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು ವರದಿ ಪಡೆದುಕೊಳ್ಳಲಿಲ್ಲ. ಯಡಿಯೂರಪ್ಪ ಆಯೋಗಕ್ಕೆ ಜಯಪ್ರಕಾಶ್ ಹೆಗ್ಡೆ ಅವರನ್ನು ಹೊಸ ಅಧ್ಯಕ್ಷರನ್ನಾಗಿ ನೇಮಿಸಿದರು. ಅವರಿಂದಲೇ ನಮ್ಮ ಸರ್ಕಾರ ವರದಿ ಪಡೆದುಕೊಂಡಿದೆ ಎಂದರು.
ಆ ವರದಿಯನ್ನು ಸಂಪುಟದಲ್ಲಿ ಮಂಡಿಸಿದ್ದೇವೆ. ಸಚಿವರ ಅಭಿಪ್ರಾಯ ಕೇಳಿದ್ದೇವೆ, ಸಚಿವರ ವರದಿಯನ್ನು ಆಧರಿಸಿ ಮೇ 9ರಂದು ನಡೆಯುವ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಆ ನಿರ್ಧಾರವನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು. ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ವರದಿಯನ್ನು ಜಾರಿ ಮಾಡುತ್ತೇವೆ ಎಂದರು.
ಕೇಂದ್ರ ಸರ್ಕಾರ ಜಾತಿ ಗಣತಿ ಮಾಡುವುದರಿಂದ ಕಾಂತರಾಜು ವರದಿ ಮೇಲಿನ ಪರಿಣಾಮದ ಬಗ್ಗೆ ಮುಂದಿನ ಸಂಪುಟದಲ್ಲಿ ಚರ್ಚೆ ಮಾಡಲಾಗುವುದು. ಎಲ್ಲಾ ಸಚಿವರಿಂದಲೂ ಲಿಖಿತ ಅಭಿಪ್ರಾಯ ಕೇಳಿದ್ದೇವೆ. ಅದನ್ನು ಪಡೆದ ಬಳಿಕ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಜಾತಿ ಜನಗಣತಿ ಮಾಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇಲ್ಲ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ನಿನ್ನೆ ಹೇಳಿದ್ದಾರೆ. ಬಿಹಾರದಲ್ಲಿ ಬಿಜೆಪಿಯ ಜೊತೆ ಸರ್ಕಾರ ರಚನೆಯಲ್ಲಿ ಮಿತ್ರ ಪಕ್ಷವಾಗಿರುವ ಜೆಡಿಯು ಜಾತಿ ಗಣತಿ ಮಾಡಿಲ್ಲವೇ ಎಂದು ಮರು ಪ್ರಶ್ನಿಸಿದರು. ರಾಜ್ಯ ಸರ್ಕಾರಗಳಿಗೆ ಅಧಿಕಾರ ಇಲ್ಲ ಎಂದು ಎಲ್ಲಿಯೂ ಉಲ್ಲೇಖಿಸಲಾಗಿಲ್ಲ, ಮೀಸಲಾತಿಯನ್ನು ಹೆಚ್ಚಿಸಬೇಕು
ನಾವು ಮಾಡಿರುವುದು ಜಾತಿ ಗಣತಿ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯೂ ಜಾತಿ ಗಣತಿಯಾಗಿದೆ. ಅದನ್ನು ಮುಂದಿಟ್ಟುಕೊಂಡು ಮೀಸಲಾತಿಯನ್ನು ಹೆಚ್ಚಿಸಲು ನಾವು ಸಿದ್ಧತಿದ್ದೇವೆ. ಕೇಂದ್ರ ಸರ್ಕಾರ ಸಾಮಾಜಿಕ, ಶೈಕ್ಷಣಿಕ ನಡೆಸಬೇಕು ಎಂದು ಆಗ್ರಹಿಸುತ್ತಿದ್ದೇವೆ. ಕೇಂದ್ರದ ಜಾತಿ ಗಣಿತಿಯಿಂದ ನಮ್ಮ ವರದಿಯ ಪಾವಿತ್ರ್ಯತೆ ಕಡಿಮೆಯಾಗುವುದಿಲ್ಲ.
6 ಕೋಟಿ ಜನರಿದ್ದರು, ಶೇ.95ರಷ್ಟು ಸಮೀಕ್ಷೆಯಾಗಿದೆ. ಯಾವುದೇ ಸಮೀಕ್ಷೆಶೇ.100ರಷ್ಟು ನಡೆಯಲು ಸಾಧ್ಯವಿಲ್ಲ ಎಂದರು.
ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸಲು ಇದೇ ತಿಂಗಳ 5ರಿಂದ ಆರಂಭವಾಗಲಿರುವ ಹೆಚ್.ಎನ್.ನಾಗಮೋಹನ್ ದಾಸ್ ಏಕಸದಸ್ಯ ಆಯೋಗದ ವರದಿ ಎಂದಿನಂತೆ ಮುಂದುವರೆಯಲಿದೆ ಎಂದು ತಿಳಿಸಿದರು.
ಎಸ್ ಸಿ, ಎಸ್ ಟಿ ಹಾಗೂ ಒಬಿಸಿಗೆ ಶೇ.50ರಷ್ಟು ಮೀಸಲಾತಿ ಮಿತಿ ಇದೆ. ಅದನ್ನು ಹೆಚ್ಚಿಸಬೇಕು. ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಮೀಸಲಾತಿಗೆ ಸದಾ ಕಾಲ ವಿರೋಧಿ ಮಾಡುತ್ತಲೇ ಬಂದಿದೆ. ಮಂಡಲ್ ಆಯೋಗ, ಹಾವನೂರು ಆಯೋಗ ಸೇರಿದಂತೆ ಎಲ್ಲವನ್ನೂ ಬಿಜೆಪಿ ವಿರೋಧ ಮಾಡಿದೆ. ಸಾಮಾಜಿಕ ನ್ಯಾಯಕ್ಕೆ ಸದಾ ಕಾಲ ಅವರು ವಿರುದ್ಧವಿದ್ದರು ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ಯಾವ ದಿನಾಂಕದಿಂದ ಜನಗಣತಿ ಮತ್ತು ಜಾತಿ ಗಣತಿ ಮಾಡುತ್ತೇವೆ ಎಂಬುದನ್ನು ಪ್ರಕಟಿಸಬೇಕು. ಮೀಸಲಾತಿ ಶೇ.50ರಷ್ಟರ ಮಿತಿಯಲ್ಲಿಲ್ಲ. ಶೇ.10ರಷ್ಟು ಇಡಬ್ಲ್ಯೂಎಸ್ ಜಾರಿಗೆ ತರಲಾಗಿದೆ. ತಮಿಳುನಾಡಿನಲ್ಲಿ ಶೇ.59ರಷ್ಟು, ಜಾರ್ಖಂಡ್ ನಲ್ಲಿ ಶೇ.77ರಷ್ಟಿದೆ. ಇಲ್ಲೆಲ್ಲಾ ಶೇ.50ರ ಮಿತಿ ದಾಟಿದೆ. ಅದಕ್ಕಾಗಿ ಕೇಂದ್ರ ಸರ್ಕಾರ ಜನಸಂಖ್ಯೆಗೆ ಅನುಗುಣವಾಗಿ ಬಡತನ, ಸಾಮಾಜಿಕ ಪರಿಸ್ಥಿತಿ ಆಧರಿಸಿ ಮೀಸಲಾತಿ ನೀಡಬೇಕು.
ಸಾಮಾಜಿಕ ಹಾಗೂ ಶೈಕ್ಷಣಿಕ ಹಿಂದುಳಿದಿರುವುದನ್ನು ಪರಿಗಣಿಸಿ ಮೀಸಲಾತಿ ನೀಡಬೇಕು ಎಂದು ಸಂವಿಧಾನದ ಆರ್ಟಿಕಲ್ 14, 15 ಮತ್ತು 16ರಲ್ಲಿ ಉಲ್ಲೇಖಿಲಸಾಗಿದೆ. ಇಡಬ್ಲ್ಯೂಎಸ್ ಅನ್ನು ಸುಪ್ರಿಂಕೋರ್ಟ್ ಎತ್ತಿ ಹಿಡಿದಿರುವುದರಿಂದ ನಾನು ವಿರೋಧ ಮಾಡಲು ಹೋಗುವುದಿಲ್ಲ ಎಂದರು.