ಬೆಂಗಳೂರು, ಆ.3- ಶಾಸಕರ ಭವನದ ವಾಹನಗಳನ್ನು ಉಪಯೋಗಿಸಿಕೊಂಡ ಶಾಸಕರು, ಮಾಜಿ ಶಾಸಕರು ಆ ವಾಹನದ ಬಾಡಿಗೆಯ ಮೊತ್ತವನ್ನು ನಗದು ರೂಪದಲ್ಲಿ ನೀಡದಂತೆ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಸೂಚಿಸಿದ್ದಾರೆ.
ಶಾಸಕರ ಭವನದ ವಾಹನಗಳನ್ನು ಶಾಸಕರು, ಮಾಜಿ ಶಾಸಕರಿಗೆ ಬಾಡಿಗೆ ನೀಡುವ ಪದ್ಧತಿ ಜಾರಿಯಲ್ಲಿದೆ. ಬಾಡಿಗೆ ಮೊತ್ತವನ್ನು ನಗದು ರೂಪದಲ್ಲಿ ನೀಡುವ ವ್ಯವಸ್ಥೆಯನ್ನು ಆಗಸ್ಟ್ ಒಂದರಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಿದ್ದು, ನಗದು ರಹಿತ ವ್ಯವಸ್ಥೆ ಜಾರಿಗೆ ತರಲು ಸಭಾಧ್ಯಕ್ಷರು ಸೂಚಿಸಿದ್ದಾರೆ ಎಂದು ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಾಸಕರ ಭವನದ ವಾಹನಗಳನ್ನು ಉಪಯೋಗ ಮಾಡಿಕೊಂಡ ಸಂದರ್ಭದಲ್ಲಿ ಶಾಸಕರು, ಮಾಜಿ ಶಾಸಕರು ಬಾಡಿಗೆ ಮೊತ್ತವನ್ನು ಇನ್ನು ಮುಂದೆ ನಗದು ರೂಪದಲ್ಲಿ ಪಾವತಿ ಮಾಡದೇ ವಾಹನದ ಟ್ರಿಪ್‌ಶೀಟ್‌ನಲ್ಲಿ ಮಾತ್ರ ಸಹಿ ಮಾಡಬೇಕು. ಶಾಸಕರು, ಮಾಜಿ ಶಾಸಕರು ಟ್ರಿಪ್‌ಶೀಟ್‌ನಲ್ಲಿ ಸಹಿ ಮಾಡಿದ ನಂತರ ಬಳಸಿದ ವಾಹನದ ಬಾಡಿಗೆ ಮೊತ್ತ, ನಿರೀಕ್ಷಣಾ ಶುಲ್ಕ, ಜಿಎಸ್‌ಟಿ ಮೊತ್ತ ಸೇರಿಸಿ ಒಟ್ಟಾರೆ ಮೊತ್ತವನ್ನು ವೇತನದಲ್ಲಿ ಕಡಿತ ಮಾಡುವುದಾಗಿ ಅವರು ಹೇಳಿದ್ದಾರೆ.
ಶಾಸಕರ ವೇತನದಲ್ಲಿ ಮತ್ತು ಮಾಜಿ ಶಾಸಕರ ನಿವೃತ್ತಿ ವೇತನ, ರೈಲ್ವೇ ಭತ್ಯೆ ಮೊತ್ತದಲ್ಲಿ ಬಾಡಿಗೆ ಮೊತ್ತ ಕಡಿತ ಮಾಡುವುದಾಗಿ ಅವರು ತಿಳಿಸಿದ್ದಾರೆ.