ನವದೆಹಲಿ,ಫೆ.8- ದೆಹಲಿ ವಿಧಾನಸಭೆ ಚುನಾವಣೆ ಕುರಿತಂತೆ ವಿವಿಧ ಖಾಸಗಿ ಸಂಸ್ಥೆಗಳು ನಡೆಸಿದ್ದ ಮತಗಟ್ಟೆ ಸಮೀಕ್ಷೆ ನಿಜವಾಗಿದೆ. ಈ ಹಿಂದೆ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಮತಗಟ್ಟೆ ಸಮೀಕ್ಷೆಗಳು ಬಹುತೇಕ ಸುಳ್ಳಾಗಿದ್ದವು. ಏಕೆಂದರೆ ಅಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಗಳು ಹೇಳಿತ್ತು.
ಆದರೆ ಫಲಿತಾಂಶ ಪ್ರಕಟಗೊಂಡಾಗ ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿ ಬಿಜೆಪಿ ಮೂರನೇ ಬಾರಿಗೆ ಅಧಿಕಾರ ಹಿಡಿದಿತ್ತು. ಅದು 2019ರಲ್ಲಿ ಪಡೆದ ಸ್ಥಾನಗಳಿಗಿಂತಲೂ ಹೆಚ್ಚಿನ ಸ್ಥಾನವನ್ನು ಪಡೆದು ಸ್ವಂತ ಬಲದ ಮೇಲೆ ಕಮಲ ಪಕ್ಷ ಅಧಿಕಾರವನ್ನು ಪಡೆಯುವಲ್ಲಿ ಯಶಸ್ವಿಯಾಗಿತ್ತು.ಕಳೆದ ಫೆ.5ರಂದು ದೆಹಲಿ ಮತದಾನ ಮುಗಿದ ನಂತರ ವಿವಿಧ ಸಂಸ್ಥೆಗಳು ನಡೆಸಿದ ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದವು.
ಒಟ್ಟು 13 ಸಂಸ್ಥೆಗಳು ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹತ್ತು ಸಂಸ್ಥೆಗಳು ಭವಿಷ್ಯ ಹೇಳಿದ್ದವು. ಆದರೆ ಮೂರು ಸಂಸ್ಥೆಗಳು ಮಾತ್ರ ಎಎಪಿ ಹ್ಯಾಟಿಕ್ ಗೆಲುವು ಸಾಧಿಸಲಿದೆ ಎಂದು ಹೇಳಿಕೊಂಡಿದ್ದವು. ಶನಿವಾರ ಪ್ರಕಟಗೊಂಡ ಫಲಿತಾಂಶದಲ್ಲಿ ಮತಗಟ್ಟೆ ಸಮೀಕ್ಷೆಗಳ ಭವಿಷ್ಯವು ನಿಜವಾಗಿದ್ದು, ಬಿಜೆಪಿ 27 ವರ್ಷಗಳ ನಂತರ ಸ್ವಂತ ಬಲದ ಮೇಲೆ ಅಧಿಕಾರ ಹಿಡಿದಿದೆ.