ಬೆಂಗಳೂರು, ನ.11– ದೆಹಲಿಯ ಕೆಂಪುಕೋಟೆ ಬಳಿ ಬಾಂಬ್ ಸ್ಫೋಟದ ಬೆನ್ನಲ್ಲೇ ರಾಜ್ಯದಲ್ಲೂ ಕಟ್ಟೆಚ್ಚರ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಜನನಿಬಿಡ ಸ್ಥಳಗಳಲ್ಲಿ ತಪಾಸಣೆ, ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ವಾಹನಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.
ಬೆಂಗಳೂರಿನ ಮೆಟ್ರೋ, ರೈಲು ಹಾಗೂ ಬಸ್ ನಿಲ್ದಾಣಗಳಲ್ಲಿ ಶ್ವಾನದಳ ಮತ್ತು ಬಾಂಬ್ ಪತ್ತೆ ದಳ ಪರಿಶೀಲನೆ ನಡೆಸಿದೆ. ಶ್ವಾನಗಳು ಪ್ರತಿಯೊಂದು ಮೂಲೆಯಲ್ಲೂ ಪರಿಶೀಲನೆ ನಡೆಸಿವೆ. ಶಸ್ತ್ರಸಜ್ಜಿತ ಸಿಬ್ಬಂದಿಗಳ ಗಸ್ತು ಹೆಚ್ಚಿಸಲಾಗಿದೆ. ಅನುಮಾನಾಸ್ಪದ ಲಗೇಜ್ ಗಳನ್ನು ತಪಾಸಣೆ ನಡೆಸಿದ್ದಾರೆ.
ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ, ಅನುಮಾನಾಸ್ಪದ ವಾಹನಗಳನ್ನು ಪರಿಶೀಲನೆ ನಡೆಸಲಾಗಿದೆ. ದೆಹಲಿಯ ಜನನಿಬಿಡ ಸ್ಥಳದ ಸಂಚಾರಿ ದೀಪದ ಬಳಿ ನಿಂತಿದ್ದ ಹುಂಡೈ ಐ-20 ಕಾರು ಸ್ಫೋಟಗೊಂಡಿದ್ದರಿಂದ ಹೊಸ ಮಾದರಿಯ ದುಷ್ಕೃತ್ಯಗಳ ಸಂಚು ಕಂಡು ಬಂದಿದೆ. ವಿದೇಶಗಳಲ್ಲಿ ಕಂಡು ಬರುತ್ತಿದ್ದಂತಹ ಈ ರೀತಿಯ ಸಂಚುಗಳು ಈಗ ಭಾರತದಲ್ಲೂ ಘಟಿಸಿರುವುದು ದೊಡ್ಡ ಸವಾಲನ್ನು ತಂದೊಡ್ಡಿವೆ.
ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ಸಂಚಾರ ದಟ್ಟಣೆಯ ನಡುವೆ ಈ ರೀತಿಯ ಅಪಾಯಕಾರಿ ವಾಹನಗಳನ್ನು ಪತ್ತೆ ಹಚ್ಚುವುದು ಕಷ್ಟ ಸಾಧ್ಯವಾಗಿದೆ. ಆದರೂ ಪೊಲೀಸರು ಸಿಸಿಟಿವಿಗಳ ಮೂಲಕ ಅನುಮಾನಾಸ್ಪದ ವಾಹನಗಳ ಮೇಲೆ ನಿಗಾವಹಿಸಿದ್ದಾರೆ. ರಾಜ್ಯದ ಇತರ ಪ್ರದೇಶಗಳಲ್ಲೂ ಕಟ್ಟುನಿಟ್ಟಿನ ತಪಾಸಣೆ ಆರಂಭಿಸಲಾಗಿದೆ.
ಪೊಲೀಸರು ನಿನ್ನೆ ರಾತ್ರಿಯಿಂದಲೇ ಗಸ್ತನ್ನು ಹೆಚ್ಚಿಸಿದ್ದಾರೆ. ರಜೆಯಲ್ಲಿದ್ದ ಸಿಬ್ಬಂದಿಗಳನ್ನು ವಾಪಸ್ ಕರೆಸಿಕೊಂಡು ಭದ್ರತೆಗೆ ನಿಯೋಜಿಸಲಾಗಿದೆ. ರ್ಯಾಪಿಡ್ ಆಕ್ಷನ್ ಫೋರ್ಸ್, ಸಿಎಆರ್ ಸೇರಿದಂತೆ ಇತರ ದಳಗಳನ್ನು ಸೂಕ್ಷ್ಮ ಪ್ರದೇಶಗಳಿಗೆ ನಿಯೋಜಿಸಲಾಗಿದೆ. ವಸತಿ ಗೃಹಗಳಲ್ಲಿ ತಂಗಿರುವ ಅನುಮಾನಾಸ್ಪದ ವ್ಯಕ್ತಿಗಳ ದಾಖಲೆಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಗುಪ್ತದಳದ ಸಿಬ್ಬಂದಿಗಳಿಗೆ ಸೂಕ್ಷ್ಮತೆಯಿಂದ ಕೆಲಸ ನಿರ್ವಹಿಸಲು ಆದೇಶಿಸಲಾಗಿದೆ.
ವಿಮಾನ ನಿಲ್ದಾಣದಲ್ಲಿ ಭದ್ರತೆಯ ಪದರಗಳನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ. ಅಪರಿಚಿತ ಹಾಗೂ ಅನುಮಾನಾಸ್ಪದ ವಸ್ತುಗಳತ್ತ ತಕ್ಷಣ ಗಮನ ಹರಿಸಲು ಸಿಬ್ಬಂದಿಗಳಿಗೆ ಸೂಚಿಸಲಾಗಿದೆ.ಚಿತ್ರಮಂದಿರಗಳು, ವಾಣಿಜ್ಯ ಸಂಕೀರ್ಣಗಳು, ಮಾರುಕಟ್ಟೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಚೇರಿಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
