ನವದೆಹಲಿ,ಜ.22- ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚುನಾವಣೆ ರಂಗು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮತದಾರರ ಸೆಳೆಯಲು ರಾಜಕೀಯ ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸಿವೆ. ಇಂದು ಬಿಜೆಪಿ ಮತ್ತೊಂದು ಚುನಾವಣಾ ಪ್ರಚಾರ ಗೀತೆಯನ್ನು ಬಿಡುಗಡೆ ಮಾಡಿದ್ದು, ಅಯೋಧ್ಯೆ ರಾಮ ಮಂದಿರದ ಮೂಲಕ ಮತದಾರರನ್ನು ಓಲೈಸಲು ಮುಂದಾಗಿದೆ.
ಜೋ ರಾಮ್ ಕೋ ಲೇಕರ್ ಆಯೆ, ಉಂಕ ರಾಜ್ ಹೋಗಾ ದೆಹಲಿ ಮೇ (ರಾಮನನ್ನು ಯಾರು ಕರೆತಂದರೊ ಅವರೇ ದೆಹಲಿಯ ಆಳುವರು) ಎಂಬ ಶೀರ್ಷಿಕೆ ಗೀತೆಯನ್ನು ಬಿಡುಗಡೆ ಮಾಡಲಾಗಿದೆ. ಹಾಡಿನಲ್ಲಿ ದೆಹಲಿ ನಿವಾಸಿಗಳು ಅನುಭವಿಸುತ್ತಿರುವ ಮಾಲಿನ್ಯ, ಕುಡಿಯುವ ನೀರು, ಕಸ ವಿಲೇವಾರಿ, ಒಳಚರಂಡಿ ಸಮಸ್ಯೆ ಸೇರಿದಂತೆ ಹಲವುಗಳನ್ನು ಉಲ್ಲೇಖಿಸಲಾಗಿದೆ.
ದೆಹಲಿಯ ಅಭಿವೃದ್ಧಿಗೆ ಡಬಲ್ ಇಂಜಿನ್ ಸರ್ಕಾರ ಅಗತ್ಯ ಎಂಬ ಕುರಿತು ಬಿಜೆಪಿ ಒತ್ತಿ ಹೇಳಿದ್ದು, ನಾವು ಗೆದ್ದರೆ, ಯಾವುದೇ ತಾರತಮ್ಯವಿಲ್ಲದೇ ಎಲ್ಲರಿಗೂ ಆರೋಗ್ಯ ವಿಮೆ ನೀಡುವುದಾಗಿ ತಿಳಿಸಿದ್ದಾರೆ.
ಹಾಡಿನಲ್ಲಿ ಆಮ್ ಆದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದು, ಅಪ್ದಾ(ಅಪ್ಪದಾ- ವಿಪತ್ತು) ಮತ್ತು ಕಳ್ಳರು ಎಂಬ ಶಬ್ದದ ಮೂಲಕ ಎಎಪಿ ಸರ್ಕಾರದ ವಿರುದ್ಧ ಟೀಕಿಸಲಾಗಿದೆ. ಈ ಬಾರಿ ಆಮ್ ಆದಿ ಪಕ್ಷವನ್ನು ಹೊರಗಟ್ಟಿ ಬಿಜೆಪಿ ದೆಹಲಿ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಲಾಗಿದೆ.
ಈ ಪ್ರಚಾರ ಗೀತೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಬಿಜೆಪಿ ದೆಹಲಿ ಘಟಕ, 2025ರಲ್ಲಿ ಕಳ್ಳರನ್ನು ಹೊರಗಟ್ಟಿ ಬಿಜೆಪಿಯನ್ನು ತರಬೇಕು ಎಂದು ಎಲ್ಲರೂ ನಿರ್ಧರಿಸಿದ್ದಾರೆ. ದೆಹಲಿಯಲ್ಲಿ ಮೋದಿಯ ಹುಲಿಯೊಂದು ಕಿರೀಟ ಧರಿಸಲಿದೆ. ರಾಮನನ್ನು ಯಾರು ತಂದರೋ ಅವರೇ ದೆಹಲಿ ಆಳುವರು ಎಂದು ಪೋಸ್ಟ್ ಮಾಡಿದೆ.
ಇದು ಬಿಜೆಪಿಯ ಮೊದಲ ಚುನಾವಣಾ ಪ್ರಚಾರ ಗೀತೆಯಲ್ಲ. ಇದಕ್ಕಿಂತ ಮೊದಲು ಪಕ್ಷ ಚುನಾವಣಾ ಹಾಡು ಬಿಡುಗಡೆ ಮಾಡಿತ್ತು. ದೆಹಲಿಗೆ ಕಾರಣವಲ್ಲ. ಬದಲಾವಣೆ ಬೇಕು. ಇದಕ್ಕೆ ಬಿಜೆಪಿ ಸರ್ಕಾರ ಬೇಕು ಎಂಬ ಹಾಡು ಬಿಡುಗಡೆಯಾಗಿತ್ತು. ಇದರಲ್ಲಿ ಬಿಜೆಪಿ ಸಂಸದ ಮನೋಜ್ ತಿವಾರಿ ಕಾಣಿಸಿಕೊಂಡಿದ್ದರು.
ಈ ಹಾಡನ್ನು ಕಳೆದ ವಾರ ರೋಹಿನಿಯಲ್ಲಿ ನಡೆದ ಪರಿವರ್ತನಾ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿದ್ದರು.70 ವಿಧಾನಸಭಾ ಕ್ಷೇತ್ರಗಳಿರುವ ದೆಹಲಿ ವಿಧಾನಸಭಾ ಚುನಾವಣೆ ಫೆ.5ಕ್ಕೆ ನಿಗದಿಯಾಗಿದ್ದು, ಫೆ. 8ಕ್ಕೆ ಫಲಿತಾಂಶ ಹೊರಬೀಳಲಿದೆ.