Saturday, February 8, 2025
Homeರಾಷ್ಟ್ರೀಯ | Nationalದೆಹಲಿ ಚುನಾವಣಾ ಫಲಿತಾಂಶ : ಕಾಂಗ್ರೆಸ್ ಶೂನ್ಯ ಸಾಧನೆ..!

ದೆಹಲಿ ಚುನಾವಣಾ ಫಲಿತಾಂಶ : ಕಾಂಗ್ರೆಸ್ ಶೂನ್ಯ ಸಾಧನೆ..!

Delhi Election Results: Congress Zero Achievement..!

ನವದೆಹಲಿ,ಫೆ.8- ಭಾರೀ ಹಣಾಹಣಿಯಿಂದ ಕೂಡಿದ್ದ ರಾಷ್ಟ್ರ ರಾಜಧಾನಿ ನವದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌‍ ಈ ಬಾರಿಯೂ ಶೂನ್ಯ ಸಂಪಾದಿಸಿದೆ. ಒಂದು ಕಾಲದಲ್ಲಿ ಸತತ ಮೂರು ಬಾರಿ ಅಧಿಕಾರ ಗದ್ದುಗೆ ಹಿಡಿದಿದ್ದ ಕಾಂಗ್ರೆಸ್‌‍ ಈ ಬಾರಿಯಾದರೂ ಒಂದಿಷ್ಟು ಕ್ಷೇತ್ರಗಳನ್ನು ಗೆಲ್ಲಬಹುದೆಂಬ ಮಾತುಗಳು ಕೇಳಿಬಂದಿದ್ದವು.

ಹೀಗಾಗಿಯೇ ಚುನಾವಣೆ ದಿನಾಂಕ ಘೋಷಣೆಯಾದ ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌‍ ನಾಯಕರಾದ ರಾಹುಲ್‌ ಗಾಂಧಿ, ಪ್ರಿಯಾಂಕ ಗಾಂಧಿ, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿದಂತೆ ಅನೇಕ ದಿಗ್ಗಜರು ಭರ್ಜರಿ ಪ್ರಚಾರ ನಡೆಸಿದ್ದರು.

ಆದರೆ ಶನಿವಾರ ಪ್ರಕಟಗೊಂಡ ಫಲಿತಾಂಶದಲ್ಲಿ ಕಾಂಗ್ರೆಸ್‌‍ ಪ್ರಾರಂಭದಲ್ಲಿ ಒಂದು ವಿಧಾಸಭಾ ಕ್ಷೇತ್ರದಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿತು. 10 ಗಂಟೆ ನಂತರ ಆ ಕ್ಷೇತ್ರವೂ ಬಿಜೆಪಿ ಪಾಲಾಯಿತು. ಒಟ್ಟು 70 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌‍ ಹೀನಾಯ ಸೋಲು ಕಂಡಿದ್ದು, ಒಂದೂ ಕ್ಷೇತ್ರವನ್ನೂ ಕೂಡ ಗೆಲ್ಲುವಲ್ಲಿ ವಿಫಲವಾಗಿದೆ.

ಈ ಹಿಂದೆ 2015 ಮತ್ತು 2020ರ ವಿಧಾನಸಭಾ ಚುನಾವಣೆಯಲ್ಲಿ ಇದೇ ರೀತಿ ಒಂದು ಸ್ಥಾನವನ್ನು ಗೆಲ್ಲದೇ ಸೋಲು ಕಂಡಿತ್ತು. ಈ ಬಾರಿಯಾದರೂ ಒಂದಿಷ್ಟು ಕ್ಷೇತ್ರಗಳನ್ನು ಗೆಲ್ಲುವುದಕ್ಕಾಗಿಯೇ ದಿಲ್ಲಿ ಮತದಾರರಿಗೆ ಕರ್ನಾಟಕದ ಗ್ಯಾರಂಟಿಗಳನ್ನು ಪರಿಚಯಿಸಿತ್ತು.

ವಿದ್ಯಾವಂತ ನಿರುದ್ಯೋಗಿಗಳಿಗೆ ವಾರ್ಷಿಕ ಎಂಟೂವರೆ ಸಾವಿರ, ದೆಹಲಿಯಾದ್ಯಂತ ಇಂದಿರಾ ಕ್ಯಾಂಟೀನ್‌ ಮೂಲಕ 5 ರೂ. ದರದಲ್ಲಿ ರುಚಿಭರಿತ ಊಟ, ಮಹಿಳೆಯರಿಗೆ ಪ್ರತಿ ತಿಂಗಳು ಎರಡೂವರೆ ಸಾವಿರ ಜಾತಿ ಜನಗಣತಿ ಹೀಗೆ ಹಲವಾರು ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು.
ಆದರೆ ದೆಹಲಿ ಮತದಾರರು ಇದಕ್ಕೆ ಸೊಪ್ಪು ಹಾಕದೆ 70 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಎಎಪಿ ಅಬ್ಬರದ ನಡುವೆ ಕಾಂಗ್ರೆಸ್‌‍ ಧೂಳಿಪಟವಾಗಿದೆ. ಕಡೇ ಪಕ್ಷ ಐದು ಸ್ಥಾನವನ್ನಾದರೂ ಗೆದ್ದೇ ಗೆಲ್ಲುತ್ತೇವೆ ಎಂಬ ನಿರೀಕ್ಷೆ ಕೂಡ ಹುಸಿಯಾಗಿದೆ.

RELATED ARTICLES

Latest News