ನವದೆಹಲಿ,ನ.11- ರಾಜಧಾನಿ ದೆಹಲಿಯ ಐತಿಹಾಸಿಕ ಕೆಂಪುಕೋಟೆ ಬಳಿ ಸಂಭವಿಸಿದ ಕಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾದ ಪಿತೂರಿಗಾರರಿಗೆ ತಕ್ಕಪಾಠ ಕಲಿಸದೆ ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರಮೋದಿ ಎಚ್ಚರಿಸಿದ್ದಾರೆ. ಭೂತಾನ್ ಪ್ರವಾಸದಲ್ಲಿರುವ ಪ್ರಧಾನಿಗಳು, ಮೊದಲು ಘಟನೆಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಸಂತಾಪ ಸೂಚಿಸಿ ಗಾಯಗೊಂಡವರು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.
ಘಟನೆಯಿಂದ ಇಡೀ ದೇಶದ ಜನತೆ ದಿಗ್ಬ್ರಾಂತಗೊಂಡಿದೆ ಎಂಬುದನ್ನು ನಾನು ಬಲ್ಲೆ. ಯಾವುದೇ ಕಾರಣಕ್ಕೂ ದೇಶದ ಜನತೆ ಆತಂಕಕ್ಕೆ ಒಳಗಾಗಬಾರದು. ನಿಮ ಹಿತಕಾಪಾಡಲು ನಾವು ಬದ್ದರಾಗಿದ್ದೇವೆ. ವದಂತಿಗಳಿಗೆ ಕಿವಿಗೊಡಬಾರದೆಂದು ಮನವಿ ಮಾಡಿದರು.
ಘಟನೆ ನಡೆದ ಮರುಕ್ಷಣವೇ ನಾನು ತನಿಖಾ ಸಂಸ್ಥೆಗಳು, ಭದ್ರತಾ ಮುಖ್ಯಸ್ಥರು ಸೇರಿದಂತೆ ಮತ್ತಿತರ ಜೊತೆ ಮಾತನಾಡಿದ್ದೇನೆ. ಪ್ರತಿಯೊಂದು ವಿವರವನ್ನು ಪಡೆದುಕೊಂಡಿದ್ದೇನೆ. ನಮ ಸೇನಾಪಡೆ ಮತ್ತು ತನಿಖಾ ಸಂಸ್ಥೆಗಳು ಪ್ರಕರಣದ ಬಗ್ಗೆ ಆಳವಾದ ತನಿಖೆಯನ್ನು ನಡೆಸುತ್ತೇವೆ ಎಂದು ಹೇಳಿದರು.
ನಮ ತನಿಖಾ ಸಂಸ್ಥೆಗಳು ಈ ಪಿತೂರಿಯ ಆಳವನ್ನು ಭೇದಿಸುತ್ತವೆ. ಇದರ ಹಿಂದಿನ ಪಿತೂರಿಗಾರರನ್ನು ಬಿಡುವುದಿಲ್ಲ. ಎಲ್ಲ ಹೊಣೆಗಾರರನ್ನು ನ್ಯಾಯದ ಕಟಕಟೆಗೆ ನಿಲ್ಲುಸುತ್ತೇವೆ. ಇಂದು ನಾನು ಭಾರವಾದ ಹೃದಯದಿಂದ ಇಲ್ಲಿಗೆ ಬಂದಿದ್ದೇನೆ.
ನಿನ್ನೆ ಸಂಜೆ ದೆಹಲಿಯಲ್ಲಿ ನಡೆದ ಭೀಕರ ಘಟನೆ ಎಲ್ಲರನ್ನೂ ದುಃಖಿಸಿದೆ. ಸಂತ್ರಸ್ತ ಕುಟುಂಬಗಳ ದುಃಖ ನನಗೆ ಅರ್ಥವಾಗಿದೆ. ಇಂದು ಇಡೀ ರಾಷ್ಟ್ರವು ಅವರೊಂದಿಗೆ ನಿಂತಿದೆ ಎಂದು ಭಾವುಕರಾಗಿ ನುಡಿದರು. ಘಟನೆಯ ತನಿಖೆ ನಡೆಸುತ್ತಿರುವ ಎಲ್ಲಾ ಮುಖ್ಯಸ್ಥರ ಜೊತೆ ರಾತ್ರಿ ಇಡೀ ಸಂಪರ್ಕದಲ್ಲಿದ್ದೇನೆ ಎಂದು ಹೇಳಿದರು.
