ನವದೆಹಲಿ, ಮೇ 18- ಪಾಕಿಸ್ತಾನವನ್ನು ಬೆಂಬಲಿಸಿದ್ದ ಟರ್ಕಿ ದೇಶಕ್ಕೆ ಪಾಠ ಕಲಿಸಲು ಭಾರತದ ಬಿಸಿಎಎಸ್ ಸಂಸ್ಥೆ ಟರ್ಕಿಸ್ ಮೂಲದ ಸೆಲೆಬಿ ಏರ್ ಲೈನ್ಸ್ ನ ಪರವಾನಗಿಯನ್ನು ರದ್ದು ಪಡಿಸಿದ್ದು, ಅದನ್ನು ಪ್ರಶ್ನಿಸಿರುವ ಅರ್ಜಿಗಳು ನಾಳೆ ದೆಹಲಿ ಹೈಕೋರ್ಟ್‌ನಲ್ಲಿ ನಡೆಯಲಿವೆ.
ಪಾಕಿಸ್ತಾನವನ್ನು ಬೆಂಬಲಿಸಿದ್ದಲ್ಲದೆ, ಭಯೋತ್ಪಾದಕ ಶಿಬಿರಗಳ ಮೇಲೆ ಭಾರತದ ಸೈನಿಕರು ದಾಳಿ ನಡೆಸಿದ್ದನ್ನು ಟರ್ಕಿ ಖಂಡಿಸಿತ್ತು. ಇದಕ್ಕೆ ಪ್ರತಿಯಾಗಿ ಭಾರತ ಸರ್ಕಾರ ಟರ್ಕಿಯ ಸೆಲೆಬಿ ಏರ್‌ಪೋಟ್ ೯ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಸೆಲೆಬಿ ದೆಹಲಿ ಕಾರ್ಗೋ ಟರ್ಮಿನಲ್ ಮ್ಯಾನೇಜ್‌ಮೆಂಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳ ಭದ್ರತಾ ಅನುಮತಿಯನ್ನು ರದ್ದುಪಡಿಸಿತ್ತು. ಈ ಕುರಿತಂತೆ ಟರ್ಕಿ ಏರ್ ಲೈನ್ಸ್ ಕಂಪೆನಿಗಳು ಶುಕ್ರವಾರ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ. ಇವುಗಳನ್ನು ನ್ಯಾಯಮೂರ್ತಿ ಸಚಿನ್ ದತ್ತ ಅವರ ಪೀಠದ ಮುಂದೆ ಮೇ 19 ರಂದು ವಿಚಾರಣೆಗೆ ಪಟ್ಟಿ ಮಾಡಲಾಗಿದೆ.
ಸೆಲೆಬಿ ಏರ್ ಪೋರ್ಟ್ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಸೆಲೆಬಿ ದೆಹಲಿ ಕಾರ್ಗೋ ಟರ್ಮಿನಲ್ ಮ್ಯಾನೇಜ್‌ಮೆಂಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳು ಅರ್ಜಿಗಳನ್ನು ಸಲ್ಲಿಸಿವೆ. 15 ವರ್ಷಗಳಿಗೂ ಹೆಚ್ಚು ಕಾಲ ಭಾರತೀಯ ವಾಯುಯಾನ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತು 10 ಸಾವಿರಕ್ಕೂ ಹೆಚ್ಚು ಜನರನ್ನು ನೇಮಿಸಿಕೊಂಡಿರುವ ಸೆಲೆಬಿ, ಒಂಬತ್ತು ವಿಮಾನ ನಿಲ್ದಾಣಗಳಲ್ಲಿ ತನ್ನ ಸೇವೆಗಳನ್ನು ನೀಡುತ್ತಿದೆ.
ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ (ಬಿಸಿಎಎಸ್) ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ, ಸೆಲೆಬಿ ಏರ್‌ಪೋರ್ಟ್ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನಲ್ಲಿನ ಭದ್ರತಾ ಅನುಮತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿದೆ.
ಟರ್ಕಿಯ ಸೆಲೆಬಿಯ ಭಾಗವಾಗಿರುವ ಕಂಪನಿಗೆ ಭದ್ರತಾ ಅನುಮತಿಯನ್ನು ನವೆಂಬರ್ 2022 ರಲ್ಲಿ ನೀಡಲಾಯಿತು. ಸೆಲೆಬಿ ಭಾರತದಲ್ಲಿ ವಾರ್ಷಿಕವಾಗಿ ಸುಮಾರು 58 ಸಾವಿರ ವಿಮಾನಗಳು ಮತ್ತು 54 ಸಾವಿರ ಟನ್‌ಗೂ ಹೆಚ್ಚಿನ ಸರಕುಗಳನ್ನು ನಿರ್ವಹಿಸುತ್ತದೆ ಎಂದು ಅದರ ವೆಬ್‌ಸೈಟ್ ತಿಳಿಸಿದೆ.
ಮುಂಬೈ, ದೆಹಲಿ, ಕೊಚ್ಚಿನ್, ಕಣ್ಣೂರು, ಬೆಂಗಳೂರು, ಗೋವಾ, ಹೈದರಾಬಾದ್ ಅಹಮದಾಬಾದ್ ಮತ್ತು ಚೆನ್ನೈ ವಿಮಾನ ನಿಲ್ದಾಣಗಳಿಂದ ಈ ಏರ್ ಲೈನ್ಸ್‌ಗಳು ಕಾರ್ಯಚರಣೆ ನಡೆಸುತ್ತಿವೆ.
ಭಾರತದ ವಿರುದ್ಧ ಪಾಕಿಸ್ತಾನ ಮಿಲಿಟರಿ ಸಂಘರ್ಷದಲ್ಲಿ ಟರ್ಕಿಸ್ ಡೋನ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಸಿದೆ. ಈ ಹಿಂದೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಸೆಲೆಬಿ ಏವಿಯೇಷನ್ ಇಂಡಿಯಾವು ಭಾರತೀಯ ವಾಯುಯಾನ, ರಾಷ್ಟ್ರೀಯ ಭದ್ರತೆ ಮತ್ತು ತೆರಿಗೆ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸುತ್ತಿದೆ ಮತ್ತು ಸಂಪೂರ್ಣ ಪಾರದರ್ಶಕತೆಯೊಂದಿಗೆ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗಿತ್ತು.
ಭಾರತದಲ್ಲಿ ಕಂಪನಿಯ ಮಾಲೀಕತ್ವ ಮತ್ತು ಕಾರ್ಯಾಚರಣೆಗಳ ಕುರಿತಾದ ಎಲ್ಲಾ ಆರೋಪಗಳನ್ನು ಟರ್ಕಿ ಏರ್ ಲೈನ್ಸ್ ಸಂಸ್ಥೆಗಳು ನಿರಾಕರಿಸಿದ್ದವು. ದೇಶದ ವಾಯುಯಾನ ವಲಯಕ್ಕೆ ತನ್ನ ದೀರ್ಘಕಾಲದ ಬದ್ಧತೆಯನ್ನು ಪುನರುಚ್ಚರಿಸಿದ್ದವು.
ದೆಹಲಿ ವಿಮಾನ ನಿಲ್ದಾಣದ ನಿರ್ವಾಹಕರು, ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೆಲದ ನಿರ್ವಹಣೆ ಮತ್ತು ಸರಕು ಕಾರ್ಯಾಚರಣೆಗಳಿಗೆ ಜವಾಬ್ದಾರರಾಗಿರುವ ಸೆಲೆಬ ಸಂಸ್ಥೆಗಳೊಂದಿಗಿನ ತನ್ನ ಸಂಬಂಧವನ್ನು ಔಪಚಾರಿಕವಾಗಿ ಕೊನೆಗೊಳಿಸಿದೆ ಎಂದು ಹೇಳಿದೆ.
ಸೆಲೆಬಿ ಏರ್‌ಪೋರ್ಟ್ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಸೆಲೆಬಿ ದೆಹಲಿ ಕಾರ್ಗೋ ಟರ್ಮಿನಲ್ ಮ್ಯಾನೇಜ್‌ಮೆಂಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕ್ರಮವಾಗಿ ನೆಲದ ನಿರ್ವಹಣೆ ಮತ್ತು ಸರಕು ಟರ್ಮಿನಲ್ ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದವು.