ನವದೆಹಲಿ,ಅ.3-ಚೀನಾದಿಂದ ಹಣ ಹೂಡಿಕೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂಸ್ ಕ್ಲಿಕ್ ಡಿಜಿಟಲ್ ಮಾಧ್ಯಮ ಸಂಸ್ಥೆ ಪತ್ರಕರ್ತರ ಮೇಲೆ ದೆಹಲಿ ಪೊಲೀಸರು ದಾಳಿ ನಡೆಸಿದ್ದಾರೆ. ಚೀನಾದಿಂದ ನ್ಯೂಸ್ ಪೋರ್ಟಲ್ ದೇಣಿಗೆ ಪಡೆದುಕೊಂಡಿದೆ ಎಂಬ ಆರೋಪದ ನಡುವೆ ಈ ದಾಳಿ ನಡೆದಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿಗಳಲ್ಲಿ ಒಬ್ಬರಾದ ಸಿಪಿಎಂ ನಾಯಕ ಸೀತಾರಾಮ್ ಯೆಚೂರಿ ಕಚೇರಿಯಲ್ಲಿ ಅಧಿಕೃತ ನಿವಾಸದ ಆವರಣದಲ್ಲಿ ವಾಸಿಸುತ್ತಿದ್ದಾರೆಂದು ವರದಿಯಾದ ನಂತರ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ. ನ್ಯೂಸ್ ಕ್ಲಿಕ್ ವೆಬ್‍ಸೈಟ್‍ಗೆ ಸಂಬಂಧಿಸಿದ ಘಟಕಗಳ ಮೇಲೆ ನಡೆಯುತ್ತಿರುವ ಕ್ರಮದ ಭಾಗವಾಗಿ ಮಂಗಳವಾರ ಬೆಳಗ್ಗೆ ಸಿಪಿಐ-ಎಂ ನಾಯಕ ಸೀತಾರಾಮ್ ಯೆಚೂರಿ ಅವರ ಅಧಿಕೃತ ನಿವಾಸದ ಮೇಲೆ ದೆಹಲಿ ಪೊಲೀಸ್ ವಿಶೇಷ ದಳ ದಾಳಿ ನಡೆಸಿದೆ.
ನವದೆಹಲಿ ನೋಯ್ಡಾ ಹಾಗೂ ಗಾಜಿಯಾಬಾದ್‍ನ 30ಕ್ಕೂ ಹೆಚ್ಚು ಕಡೆಗಳಲ್ಲಿ ದೆಹಲಿ ಪೊಲೀಸರು ಬೃಹತ್ ಪ್ರಮಾಣದ ದಾಳಿ ನಡೆಸಿದ್ದಾರೆ. ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿ ವಿಶೇಷ ಘಟಕವು ಪ್ರಕರಣ ದಾಖಲಿಸಿಕೊಂಡಿದೆ. ಚೀನಾದಿಂದ ಹಣ ಹೂಡಿಕೆಗೆ ಸಂಬಂಧಿಸಿದಂತೆ ಈಗಾಗಲೇ ಜಾರಿ ನಿರ್ದೇಶನಾಲಯವು ನ್ಯೂಸ್‍ಕ್ಲಿಕ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದೆ.
ಹಾವು-ಮುಂಗುಸಿಗಳ ಒಗ್ಗೂಡುವಿಕೆಯೇ ಇಂಡಿಯಾ ಮೈತ್ರಿಕೂಟ ; ತೇಜಸ್ವಿ ಸೂರ್ಯ
ಇದರ ಬೆನ್ನಲ್ಲೇ, ನ್ಯೂಸ್‍ಕ್ಲಿಕ್‍ನ ಹಲವು ಪತ್ರಕರ್ತರ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಖಲೆ ಪರಿಶೀಲನೆಯಷ್ಟೇ ಮಾಡಲಾಗಿದ್ದು, ಯಾರನ್ನೂ ಬಂಧಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಆದರೆ, ವಿಚಾರಣೆಗಾಗಿ ಕೆಲವು ಪತ್ರಕರ್ತರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ಕೂಡ ತಿಳಿದುಬಂದಿದೆ.
ಇದಕ್ಕೂ ಮುನ್ನ ನ್ಯೂಸ್ ಪೋರ್ಟಲ್‍ನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯ (ಇ.ಡಿ), ಅದರ ಫಂಡಿಂಗ್ ಕುರಿತು ತನಿಖೆ ಆರಂಭಿಸಿತ್ತು. ನ್ಯೂಸ್ ಪೋರ್ಟಲ್‍ಗೆ ಸಂಬಂಧಿಸಿದ ಕೆಲವು ಆಸ್ತಿಗಳನ್ನು ಕೂಡ ಕೇಂದ್ರ ಸಂಸ್ಥೆ ಮುಟ್ಟುಗೋಲು ಹಾಕಿಕೊಂಡಿತ್ತು. ದಾಳಿ ವೇಳೆ ಪೊಲೀಸರು ಲ್ಯಾಪ್‍ಟಾಪ್, ಮೊಬೈಲ್ ಪೊನ್‍ಗಳು ಸೇರಿದಂತೆ ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಜಪ್ತಿ ಮಾಡಿದ್ದು, ಹಾರ್ಡ್‍ಡಿಸ್ಕ್‍ಗಳಲ್ಲಿನ ಡೇಟಾಗಳನ್ನು ಪಡೆದುಕೊಳ್ಳುತ್ತಿದ್ದಾರೆ.
ನ್ಯೂಸ್‍ಕ್ಲಿಕ್‍ನಲ್ಲಿ ಚೀನಾ ಹೂಡಿಕೆ ಕುರಿತು ಕಳೆದ ಆಗಸ್ಟ್‍ನಲ್ಲಿ ಅಮೆರಿಕದ ನ್ಯೂಯಾರ್ಕ್ ಟೈಮ್ಸ ವರದಿ ಮಾಡಿತ್ತು. ಚೀನಾದ ಪರವಾಗಿ ನಿಲುವು ಹೊಂದಿರುವ, ಚೀನಾ ನಿರ್ಧಾರಗಳನ್ನು ಬೆಂಬಲಿಸುವ ಅಮೆರಿಕದ ಉದ್ಯಮಿ ನೆವಿಲ್ಲೆ ರಾಯ್ ಸಿಂಘಂ ಎಂಬುವರು ಹಲವು ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದ್ದು, ಇವುಗಳಲ್ಲಿ ನ್ಯೂಸ್‍ಕ್ಲಿಕ್ ಕೂಡ ಇದೆ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಿತ್ತು.
ಶಂಕಿತರಿಂದ ಅಕ್ರಮ ಚಟುವಟಿಕೆಗಳು ನಡೆದಿವೆ ಎಂಬ ಜಾರಿ ನಿರ್ದೇಶನಾಲಯ ಹಂಚಿಕೊಂಡ ಮಾಹಿತಿಗಳ ಆಧಾರದಲ್ಲಿ ದಿಲ್ಲಿ ಪೊಲೀಸರು ತಪಾಸಣೆ ನಡೆಸಿದ್ದಾರೆ. ದಾಳಿ ಕುರಿತು ಹೆಚ್ಚಿನ ವಿವರಗಳನ್ನು ಆನಂತರ ಹಂಚಿಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
38.05 ಕೋಟಿ ರೂ ದೇಣಿಗೆ :
ಕೇವಲ ಮೂರು ವರ್ಷಗಳ ಕಿರು ಅವಧಿಯಲ್ಲಿಯೇ 38.05 ಕೋಟಿ ರೂಪಾಯಿಯಷ್ಟು ವಿದೇಶಿ ದೇಣಿಗೆಯನ್ನು ಅಕ್ರಮವಾಗಿ ಪಡೆದುಕೊಂಡಿರುವುದು ಇಡಿ ನಡೆಸಿದ್ದ ತನಿಖೆಯಿಂದ ಬೆಳಕಿಗೆ ಬಂದಿತ್ತು. ವಿದೇಶಿ ನೇರ ಹೂಡಿಗೆ (ಎಫ್‍ಡಿಐ) ಮೂಲಕ 9.59 ಕೋಟಿ ರೂ. ಮತ್ತು ಸೇವೆಗಳ ರಫ್ತು ಹೆಸರಿನಲ್ಲಿ 28.46 ಕೋಟಿ ರೂಪಾಯಿ ಹಣವನ್ನು ವಿದೇಶದಿಂದ ರವಾನೆ ಮಾಡಿರುವ ಅಕ್ರಮ ಚಟುವಟಿಕೆಯ ಕುರಿತಾದ ಪುರಾವೆಗಳನ್ನು ಇಡಿ ಪಡೆದುಕೊಂಡಿತ್ತು.
ಗೌತಮ್ ನವ್ಲಖಾ ಮತ್ತು ತೀಸ್ತಾ ಸೆಟಲ್ವಾಡ್ ಅವರ ಸಹವರ್ತಿಗಳಂತಹ ಅನೇಕ ವಿವಾದಾತ್ಮಕ ಪತ್ರಕರ್ತರಿಗೆ, ಹೀಗೆ ಸ್ವೀಕರಿಸಿದ ಹಣವನ್ನು ಹಂಚಿಕೆ ಮಾಡಲಾಗಿತ್ತು. ಚೀನಾ ನಂಟಿಗೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸರಿಗೆ ಇಡಿ ವಿವರಗಳನ್ನು ನೀಡಿತ್ತು. ವಿದೇಶಿ ಕಾಣಿಕೆ ನಿಯಂತ್ರಣ ಕಾಯ್ದೆ (ಎಫ್‍ಸಿಆರ್‍ಎ) ಉಲ್ಲಂಘನೆ ಆರೋಪದಡಿ ನ್ಯೂಸ್‍ಕ್ಲಿಕ್ ವಿರುದ್ಧ ಇ.ಡಿ ಪ್ರಕರಣ ದಾಖಲಿಸಿತ್ತು. ಚೀನಾದಿಂದ ಸ್ವೀಕರಿಸಿದ ಹಣವನ್ನು ದೇಶ ವಿರೋಧಿ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿತ್ತು ಎಂದು ಸಂಸ್ಥೆ ಆರೋಪಿಸಿದೆ.
ಇಂಡಿಯಾ ಮೈತ್ರಿಕೂಟದಿಂದ ಹೊರಬರುವುದೇ ಎಎಪಿ..?
ನ್ಯೂಸ್‍ಕ್ಲಿಕ್ ಪೋರ್ಟಲ್ ಒಂದು ಜಾಗತಿಕ ಜಾಲವಾಗಿದ್ದು, ಚೀನಾ ಪರ ಪ್ರಚಾರಗಳನ್ನು ಹರಡಿಸಲು ಆಸ್ಟ್ರೇಲಿಯಾದ ಕೋಟ್ಯಪತಿ ನೆವಿಲ್ಲೆ ರಾಯ್ ಸಿಂಘಂನಿಂದ ದೇಣಿಗೆ ಪಡೆಯುತ್ತಿದೆ ಎಂದು ನ್ಯೂಯಾರ್ಕ್ ಟೈಮ್ಸ ವರದಿ ತಿಳಿಸಿದೆ. ನ್ಯೂಸ್‍ಕ್ಲಿಕ್ ನಿರ್ದೇಶಕ ಪ್ರಬೀರ್ ಪುರ್ಕಾಯಸ್ಥ ಹಾಗೂ ಮಿಲಿಯನೇರ್ ನೆವಿಲ್ಲೆ ರಾಯ್ ಸಿಂಘಂ, ಸಿಪಿಎಂ ನಾಯಕರಾದ ಪ್ರಕಾಶ್ ಕಾರಟ್ ಮತ್ತು ವಿವಿಧ ಪತ್ರಕರ್ತರ ನಡುವೆ ನಡೆದ ಸರಣಿ ಇಮೇಲ್ ವ್ಯವಹಾರಗಳನ್ನು ಇ.ಡಿ ಪತ್ತೆ ಮಾಡಿದೆ. ಚೀನಾದಲ್ಲಿ ನೆಲೆಸಿರುವ ನೆವಿಲ್ಲೆ ರಾಯ್ ಸಿಂಘಂ, ಭಾರತದಲ್ಲಿ ಚೀನಾ ಪರ ಪ್ರಚಾರ ಹರಡಲು ನ್ಯೂಸ್‍ಕ್ಲಿಕ್‍ಗೆ ಅಕ್ರಮವಾಗಿ 38 ಕೋಟಿ ರೂ ರವಾನಿಸಿದ್ದ ಎಂದು ಇಡಿ ಹೇಳಿದೆ.
ಖಂಡನೆ :
ನ್ಯೂಸ್‍ಕ್ಲಿಕ್‍ಗೆ ಸಂಬಂಧಿಸಿದ ಪತ್ರಕರ್ತರು ಮತ್ತು ಬರಹಗಾರರ ಮನೆಗಳ ಮೇಲೆ ನಡೆಸಿದ ಬಹು ದಾಳಿಗಳ ಬಗ್ಗೆ ಪ್ರೆಸ್ ಕ್ಲಬ್ ಆಫ್ ಇಂಡಿಯಾ ತೀವ್ರ ಕಳವಳ ವ್ಯಕ್ತಪಡಿಸಿದೆ. ದೆಹಲಿ ಪೊಲೀಸರ ಕ್ರಮಗಳ ಕುರಿತು ಶೀಘ್ರದಲ್ಲೇ ವಿವರವಾದ ಹೇಳಿಕೆಯನ್ನು ಬಿಡುಗಡೆ ಮಾಡುವುದಾಗಿ ಮತ್ತು ಹೆಚ್ಚಿನ ಮಾಹಿತಿ ನೀಡುವಂತೆ ಸರ್ಕಾರವನ್ನು ಒತ್ತಾಯಿಸುವಾಗ ಪತ್ರಕರ್ತರೊಂದಿಗೆ ತನ್ನ ಒಗ್ಗಟ್ಟನ್ನು ಒತ್ತಿ ಹೇಳುತ್ತದೆ ಎಂದು ಅದು ಗಮನಿಸಿದೆ. ನಾವು ಬೆಳವಣಿಗೆಗಳನ್ನು ಗಮನಿಸುತ್ತಿದ್ದೇವೆ ಮತ್ತು ವಿವರವಾದ ಹೇಳಿಕೆಯನ್ನು ಬಿಡುಗಡೆ ಮಾಡುತ್ತೇವೆ. ಪಿಸಿಐ ಪತ್ರಕರ್ತರೊಂದಿಗೆ ಒಗ್ಗಟ್ಟಿನಿಂದ ನಿಂತಿದೆ ಮತ್ತು ವಿವರಗಳೊಂದಿಗೆ ಹೊರಬರಲು ಸರ್ಕಾರವನ್ನು ಒತ್ತಾಯಿಸುತ್ತದೆ ಎಂದು ಪ್ರೆಸ್ ಕ್ಲಬ್ ಟ್ವೀಟ್ ಮಾಡಿದೆ.