ಬೆಂಗಳೂರು,ಫೆ.8- ಪ್ರತಿಷ್ಠಿತ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವು ಅಭೂತಪೂರ್ವ ಗೆಲುವು ಸಾಧಿಸಿದ್ದರ ಹಿನ್ನಲೆಯಲ್ಲಿ ಬಿಜೆಪಿ ನಾಯಕರು ಪಕ್ಷದ ಕಚೇರಿ ಮುಂದೆ ಪೊರಕೆ ಕೈಯಲ್ಲಿ ಹಿಡಿದು ಕಸ ಗುಡಿಸುವ ಮೂಲಕ ವಿನೂತನವಾಗಿ ಸಂಭ್ರಮಾಚರಣೆ ಮಾಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ವಿಧಾನಪರಿಷತ್ನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಶಾಸಕರಾದ ಮುನಿರತ್ನ, ಎಸ್.ಆರ್.ವಿಶ್ವನಾಥ್, ಸಿ.ಕೆ.ರಾಮಮೂರ್ತಿ, ಗೋಪಾಲಯ್ಯ, ಭೈರತಿ ಬಸವರಾಜ್ ಸೇರಿದಂತೆ ಮತ್ತಿತರರು ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಮುಂದೆ ಕೈಯಲ್ಲಿ ಪೊರಕೆ ಹಿಡಿದು ಕಸ ಗುಡಿಸಿ ಪರೋಕ್ಷವಾಗಿ ಆಮ್ ಆದಿಗೆ ತಿರುಗೇಟು ನೀಡಿದರು.
ಬಳಿಕ ಪಕ್ಷದ ಕಚೇರಿ ಮುಂದೆ ನಡೆದ ಸಂಭ್ರಮಾಚರಣೆಯಲ್ಲಿ ಡೊಳ್ಳು ಬಾರಿಸಿ, ಕೈಯಲ್ಲಿ ಕೇಸರಿ ಬಾವುಟ ಹಿಡಿದು ಜೈಕಾರದ ಘೋಷಣೆಗಳನ್ನು ಕೂಗಿದರು. ಈ ವೇಳೆ ಕಾರ್ಯಕರ್ತರ ಸಂಭ್ರಮಕ್ಕೆ ಪರಿವೇ ಇರಲಿಲ್ಲ. ಕಾರ್ಯಕರ್ತರೆಲ್ಲರೂ ಪ್ರಧಾನಿ ನರೇಂದ್ರಮೋದಿಗೆ ಜೈ ಹಾಕಿ ಸಿಹಿ ಹಂಚಿ ಸಂಭ್ರಮಿಸಿದರು.