ಬೆಂಗಳೂರು, ಡಿ.5– ನಗರದಲ್ಲಿ ಸಿದ್ದಗಂಗಾ ಮಠದ ಡಾ. ಶಿವಕುಮಾರಸ್ವಾಮಿ ಪುತ್ಥಳಿ ವಿರೂಪಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಿರಿನಗರ ಠಾಣೆ ಪೊಲೀಸರು ಕಂಪನಿಯೊಂದರ ಡೆಲಿವರಿ ಬಾಯ್ನನ್ನು ಬಂಧಿಸಿದ್ದಾರೆ.ಬ್ಯಾಡರಹಳ್ಳಿಯ ಭರತ್ ನಗರ ನಿವಾಸಿ ಶಿವಕೃಷ್ಣ(34) ಬಂಧಿತ ಡೆಲಿವರಿ ಬಾಯ್.
ಕ್ರಿಶ್ಚಿಯಾನಿಟಿಗೆ ಪ್ರಭಾವಿತನಾಗಿದ್ದ ಶಿವಕೃಷ್ಣ ಧರ್ಮ ಪ್ರಚಾರ ಮಾಡುತ್ತಿದ್ದನು.ಈ ನಡುವೆ ಗಿರಿನಗರದ ವೀರಭದ್ರ ವೃತ್ತದಲ್ಲಿ ಶಿವಕುಮಾರ ಸ್ವಾಮಿ ಪುತ್ಥಳಿ ವಿರೂಪಗೊಂಡಿದ್ದನ್ನು ಡಿ. 1ರಂದು ಮುಂಜಾನೆ ಸ್ಥಳೀಯರು ಗಮನಿಸಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಯೂ ಸಹ ನಡೆಸಿ ಪೊಲೀಸರಿಗೆ ದೂರು ನೀಡಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪುತ್ಥಳಿ ಸುತ್ತ ಮುತ್ತಲಿನ ರಸ್ತೆಗಳಿದ್ದಂತಹ ಸಿಸಿ ಕ್ಯಾಮೆರಾ ಪರಿಶೀಲಿಸಿ ಆರೋಪಿಯನ್ನು ಬಂಧಿಸಿ ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದಾರೆ.ನನಗೆ ಶಿವಕುಮಾರ ಸ್ವಾಮೀಜಿ ಪುತ್ಥಳಿಯನ್ನು ವಿರೋಪಗೊಳಿಸುವಂತೆ ಕನಸು ಬಿತ್ತು. ಹಾಗಾಗಿ ಕಳೆದ ಶನಿವಾರ ರಾತ್ರಿ ಸುತ್ತಿಗೆ ತಂದು ಸ್ವಾಮೀಜಿ ಪುತ್ಥಳಿ ಹಾನಿ ಮಾಡಿದೆ ಎಂದು ವಿಚಾರಣೆ ವೇಳೆ ಆರೋಪಿ ತಿಳಿಸಿದ್ದಾನೆ.
ವೀರಶೈವ ಮಹಾಸಭಾ ಪ್ರತಿಭಟನೆ :
ಬೆಂಗಳೂರು, ಡಿ.5- ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪ್ರತಿಮೆಯನ್ನು ಕಿಡಿಗೇಡಿಗಳು ವಿರೂಪಗೊಳಿಸಿರುವುದನ್ನು ಖಂಡಿಸಿ ಅಖಿಲ ಭಾರತ ವೀರಶೈವ ಮಹಾಸಭಾ ಬೆಂಗಳೂರು ನಗರ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.
ಗಿರಿನಗರ, ವೀರಭದ್ರನಗರ ವೃತ್ತದಲ್ಲಿ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪ್ರತಿಮೆಯನ್ನು ಕಿಡಿಗೇಡಿಗಳು, ವಿಕೃತ ಮನಸ್ಸಿನವರು ಧ್ವಂಸ ಮಾಡಿ ವಿರೂಪಗೊಳಿಸಿದ್ದಾರೆ. ಇಂತಹ ಕೃತ್ಯ ಖಂಡಿಸಿ ಕೃತ್ಯ ನಡೆದ ಸ್ಥಳದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ತುಮಕೂರು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಜಾತಿ, ಮತ ಮತ್ತು ಪಂಥ ಭೇದವಿಲ್ಲದೆ ಎಲ್ಲರಿಗೂ ಅನ್ನ, ಅಕ್ಷರ, ಆಶ್ರಯ ನೀಡಿದರು. ಅವರ ನಿಸ್ವಾರ್ಥ ಸೇವೆ ನೋಡಿದ ಭಕ್ತರೇ ಅವರಿಗೆ ನಡೆದಾಡುವ ದೇವರು ಎಂಬ ಬಿರುದು ನೀಡಿದರು.
ಸಮಾಜದಲ್ಲಿ ಅಶಾಂತಿ ಮೂಡಬೇಕು ಎಂದು ಕೆಲವು ಕಿಡಿಗೇಡಿಗಳು ಇಂತಹ ಕೃತ್ಯ ಮಾಡುತ್ತಿದ್ದಾರೆ. ಇಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆ ನಡೆಯದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ಮಾಜಿ ಉಪ ಮಹಾಪೌರ ಬಿ.ಎಸ್. ಪುಟ್ಟರಾಜು, ವೀರಶೈವ ಸಮುದಾಯದ ಮುಖಂಡ ಮಲ್ಲಿಕಾರ್ಜುನ್, ಬಿಜೆಪಿ ಮುಖಂಡ ಹೆಚ್.ಆರ್.ಮಲ್ಲಿಕಾರ್ಜುನ್ ,ಅಖಿಲ ಭಾರತ ವೀರಶೈವ ಮಹಸಭಾ ಬೆಂಗಳೂರು ಘಟಕದ ಅಧ್ಯಕ್ಷ ಬಿ.ಆರ್. ನವೀನ್ ಕುಮಾರ್, ಉಪಾಧ್ಯಕ್ಷ ಗುರುಮೂರ್ತಿ, ವಿಜಯ್ ಕುಮಾರ್, ಪಿ.ಸ್ವರ್ಣ ಗೌರಿ,ಪ್ರಧಾನ ಕಾರ್ಯದರ್ಶಿ
ಶಿವಕುಮಾರ್, ಕೋಶಾಧ್ಯಕ್ಷ ವಿಜಯ್ಕುಮಾರ್ ಎಂ. ಗುಡದಿನ್ನಿ, ಕಾರ್ಯದರ್ಶಿ ಮಂಜುನಾಥ್, ಅಶೋಕ್, ಕುಶಾಲ್ ಹಾಗೂ ವೀರಶೈವ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.