ಬೆಂಗಳೂರು, ಮೇ19– ರಾಜಧಾನಿ ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ ಕಳೆದ ಎರಡು ವರ್ಷದಲ್ಲಿ ವಿನಿಯೋಗಿಸಿದ ಹಣ ಎಷ್ಟು ? ಈ ಬಗ್ಗೆ ಮೊದಲು ಶ್ವೇತಪತ್ರ ಪ್ರಕಟಿಸಿ ಎಂದು ಶಾಸಕ ಹಾಗೂ ಮಾಜಿ ಸಚಿವ ಸುನಿಲ್ ಕುಮಾರ್ ಅವರು ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.
ಈ ಕುರಿತು ತಮ್ಮ ಅಧಿಕೃತ ಸಾಮಾಜಿಕ ಜಾಲ ತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ರೋಮ್ ಗೆ ಬೆಂಕಿ ಬಿದ್ದಾಗ ಅಲ್ಲೊಬ್ಬ ಪಿಟೀಲು ಬಾರಿಸುತ್ತಿದ್ದನಂತೆ, ರಾಜಧಾನಿ ಬೆಂಗಳೂರು ಮಳೆಯಿಂದ ಮುಳುಗಿದಾಗ ಇಲ್ಲಿನ ಸರ್ಕಾರ ಸಾಧನಾ ಸಮಾವೇಶ ನಡೆಸುತ್ತಿದೆ. ಎಂದು ವಾಗ್ದಳಿ ನಡೆಸಿದ್ದಾರೆ.
ಗ್ರೇಟರ್ ಬೆಂಗಳೂರು ವಾಟರ್ ನಲ್ಲಿ ಮುಳುಗಿರುವಾಗ ನಾಗರಿಕ ಸಂಕಷ್ಟಕ್ಕೆ ನೆರವಾಗಬೇಕಿದ್ದ ಕಾಂಗ್ರೆಸ್ ಶಾಸಕರು, ಸಚಿವರು ಹೊಸಪೇಟೆಗೆ ದೌಡಾಯಿಸುತ್ತಿದ್ದಾರೆ. ಬೆಂಗಳೂರಿನ ಜನರು ಕಷ್ಟದಲ್ಲಿರುವಾಗ ಈ ಸಂಭ್ರಮ ಬೇಕೇ? ಈ ದುರಾಡಳಿತವನ್ನು ನಿಮ್ಮ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಬೆಂಬಲಿಸುತ್ತಾರೆಯೇ? ಎಂದು ಸುನಿಲ್ ಕುಮಾರ್ ಪ್ರಶ್ನೆ ಮಾಡಿದ್ದಾರೆ.