ಬೆಂಗಳೂರು, ಏ.4-ರಾಜ್ಯ ಸರ್ಕಾರಿ ನಿವೃತ್ತ ನೌಕರರು ಹಾಗೂ ಕುಟುಂಬ ಪಿಂಚಣಿದಾರರಿಗೆ ಉಚಿತ ಆರೋಗ್ಯ ಸೌಲಭ್ಯ ನೀಡುವಂತೆ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಾ. ಎಲ್.ಭೈರಪ್ಪ ಸರ್ಕಾರವನ್ನು ಒತ್ತಾಯಿಸಿದರು.
ರಾಜ್ಯ ಸರ್ಕಾರಿ ನಿವೃತ್ತ ನೌಕರ ಸಂಘದ ವತಿಯಿಂದ ಅರಮನೆ ಮೈದಾನದಲ್ಲಿಂದು ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕಾರ್ಯಾಗಾರ ಹಾಗೂ ಬೃಹತ್ ಸಮಾವೇಶದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ನಾಲ್ಕೂವರೆ ಲಕ್ಷ ಪಿಂಚಣಿದಾರರು ಇದ್ದು, ಜೀವನದ ಸಂಧ್ಯಾ ಕಾಲದಲ್ಲಿರುವ ಇವರು ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದರು.
ರಾಜ್ಯ 7ನೇ ವೇತನ ಆಯೋಗದ ಶಿಫಾರಸಿನಂತೆ ರಾಜ್ಯ ಸರ್ಕಾರಿ ನಿವೃತ್ತ ನೌಕರರು ಮತ್ತು ಕುಟುಂಬ ಪಿಂಚಣಿದಾರರಿಗೆ ಸಂಧ್ಯಾ ಕಿರಣ ಯೋಜನೆಯನ್ನು ಶೀಘ್ರವಾಗಿ ಜಾರಿಗೊಳಿಸಬೇಕು. 70 ವರ್ಷ ಮೇಲ್ಪಟ್ಟ 80 ವರ್ಷದೊಳಗಿನ ನಿವೃತ್ತ ನೌಕರರು ಹಾಗೂ ಕುಟುಂಬ ಪಿಂಚಣಿದಾರರಿಗೆ ಮೂಲ ಪಿಂಚಣಿಯಲ್ಲಿ ಶೇ.10ರಷ್ಟು ಹೆಚ್ಚಳ ಮಾಡಿ ಆರ್ಥಿಕ ಸೌಲಭ್ಯ ನೀಡಬೇಕು ಎಂದು ಅವರು ಕೋರಿದರು.
ನಿವೃತ್ತ ನೌಕರರು ಮತ್ತು ಕುಟುಂಬ ಪಿಂಚಣಿದಾರರು ಮೃತಪಟ್ಟಾಗ ಶವಸಂಸ್ಕಾರಕ್ಕೆ 10 ಸಾವಿರ ರೂ.ಗಳ ಶವ ಸಂಸ್ಕಾರ ಭತ್ಯೆ ನೀಡಬೇಕು. 2022ರ ಜುಲೈ ಒಂದರಿಂದ 2024ರ ಜುಲೈ 31ರ ಅವಧಿಯಲ್ಲಿ ನಿವೃತ್ತಿಯಾಗಿರುವ ನೌಕರರ ಆರ್ಥಿಕ ಪರಿಸ್ಥಿತಿಯನ್ನು ಸಹಾನುಭೂತಿಯಿಂದ ಪರಿಗಣಿಸಿ 2022ರ ಜುಲೈ ಒಂದರಿಂದ ಅನ್ವಯವಾಗುವಂತೆ ಡಿಸಿಆರ್‌ಜಿ ರಜೆ ನಗದೀಕರಣ, ಕಮ್ಯೂಟೇಷನ್‌ಗೆ ಸಂಬಂಧಪಟ್ಟ ಆರ್ಥಿಕ ಸೌಲಭ್ಯ ನೀಡಲು ಮನವಿ ಮಾಡಿದರು.
ಕೆಎಸ್‌ಆರ್‌ಟಿಸಿ ಹಾಗೂ ನಗರ ಸಾರಿಗೆ ಬಸ್ಸುಗಳಲ್ಲಿ ನಿವೃತ್ತ ನೌಕರರು ಮತ್ತು ಕುಟುಂಬ ಪಿಂಚಣಿದಾರರಿಗೂ ಉಚಿತ ಪ್ರಯಾಣ ಸೌಲಭ್ಯ ನೀಡಬೇಕು ಇಲ್ಲವೇ, ಶೇ. 50ರಷ್ಟು ರಿಯಾಯಿತಿ ನೀಡಬೇಕು. ನಿವೃತ್ತ ನೌಕರರಿಗೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡಲು ಭಾರತ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ರಾಜ್ಯ ಸರ್ಕಾರವನ್ನು ಕೋರಿದರು.
ರಾಜ್ಯ ಸರ್ಕಾರಿ ನಿವೃತ್ತ ನೌಕರರ ಕೇಂದ್ರ ಸಂಘಕ್ಕೆ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಶಾಖೆಗಳಿಗೆ ಸರ್ಕಾರದಿಂದ ಉಚಿತವಾಗಿ ಅಥವಾ ರಿಯಾಯಿತಿ ದರದಲ್ಲಿ ನಿವೇಶನ ಮಂಜೂರು ಮಾಡುವಂತೆ ಅವರು ಮನವಿ ಮಾಡಿದರು.ಸಮಾವೇಶದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧುಬಂಗಾರಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಾ.ಟಿ.ಹೆಚ್. ಆಂಜನಪ್ಪ, ಪುಣ್ಯ ಆಸ್ಪತ್ರೆಯ ಲ್ಯಾಪ್ರೋಸ್ಕೋಪಿ ತಜ್ಞರಾದ ಡಾ.ಪುಣ್ಯವತಿ ಸಿ.ನಾಗರಾಜ್, ಸರ್ಕಾರಿ ನಿವೃತ್ತ ನೌಕರರ ಸಂಘದ ಗೌರವಾಧ್ಯಕ್ಷ ಎಂ.ವಿ.ರಾಜಶೇಖರಯ್ಯ, ಪ್ರಧಾನ ಕಾರ್ಯದರ್ಶಿ ರಂಗೇಗೌಡ, ಖಜಾಂಚಿ ಆನಂದಪ್ಪ ಸೇರಿದಂತೆ ಸಂಘದ ಜಿಲ್ಲಾ, ತಾಲ್ಲೂಕು ಶಾಖೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.