Friday, October 17, 2025
Homeಬೆಂಗಳೂರುಭ್ರಷ್ಟ ಅಧಿಕಾರಿಗಳಿಂದ ಭೂಗಳ್ಳರ ಪಾಲಾಗಿರುವ 200 ಕೋಟಿ ರೂ. ಮೌಲ್ಯದ ಭೂಮಿ ವಶಕ್ಕೆ ಆಗ್ರಹ

ಭ್ರಷ್ಟ ಅಧಿಕಾರಿಗಳಿಂದ ಭೂಗಳ್ಳರ ಪಾಲಾಗಿರುವ 200 ಕೋಟಿ ರೂ. ಮೌಲ್ಯದ ಭೂಮಿ ವಶಕ್ಕೆ ಆಗ್ರಹ

NR Ramesh

ಬೆಂಗಳೂರು, ಅ.16- ಸರ್ಕಾರದ ಉನ್ನತ ಹುದ್ದೆಯಲ್ಲಿರುವ ಕೆಲ ಭ್ರಷ್ಟ ಅಧಿಕಾರಿಗಳು ಕಾನೂನು ನಿಯಮ ಉಲ್ಲಂಘಿಸಿ 200 ಕೋಟಿ ರೂ. ಮೌಲ್ಯದ ಅತ್ಯಮೂಲ್ಯ ಸರ್ಕಾರಿ ಸ್ವತ್ತನ್ನು ಕಬಳಿಸಿರುವ ಬೃಹತ್‌ ಭೂ ಹಗರಣವನ್ನು ಬಯಲು ಮಾಡಿರುವ ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್‌ ಅವರು ಈ ಹಗರಣ ಕುರಿತಂತೆ ನ್ಯಾಯಾಂಗ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಸಮರ್ಪಕ ದಾಖಲೆಗಳಿದ್ದರೂ ಸಹ, 200 ಕೋಟಿಗೂ ಹೆಚ್ಚು ಮೌಲ್ಯದ ಸರ್ಕಾರೀ ಸ್ವತ್ತನ್ನು ನೆಲಗಳ್ಳರ ಪಾಲಾಗುವಂತೆ ಮಾಡಿರುವ ಪರಮ ಭ್ರಷ್ಟ ಅಧಿಕಾರಿಗಳಾದ ಬೆಂಗಳೂರು ದಕ್ಷಿಣ ತಾಲ್ಲೂಕಿನ ಎಡಿಎಲ್‌ಆರ್‌ ಸಚಿನ್‌, ಜೆಡಿಎಲ್‌ಆರ್‌ ನಿಸ್ಸಾರ್‌ ಅಹಮದ್‌‍, ತಹಸೀಲ್ದಾರ್‌ ಶ್ರೀನಿವಾಸ್‌‍, ವಿಶೇಷ ತಹಸೀಲ್ದಾರ್‌ ನಾಗರಾಜ್‌‍, ಎಸಿ ರಜನೀಕಾಂತ್‌‍, ಆರ್‌ಐ ನವೀನ್‌ ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯ ಸಹಾಯಕ ಪ್ರಶಾಂತ್‌ ಗೌಡ ಪಾಟೀಲ್‌ ಅವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.

ಸರ್ಕಾರಿ ಸ್ವತ್ತನ್ನು ಅಕ್ರಮವಾಗಿ ತಮದಾಗಿಸಿಕೊಂಡಿರುವ ಎಂ. ಮಂಜುನಾಥ್‌, ಆರ್‌. ಶೋಭ ಮಂಜುನಾಥ್‌, ಉಮೇಶ್‌ ಬಾಬು ಎಸ್‌‍. ಬಿ., ಜಲಜದಾಸ್‌‍ ಮತ್ತು ಬಿ. ಕೆ. ರಾಘವೇಂದ್ರ, ಅವರ ವಿರುದ್ಧವೂ ಸಹ ದೂರು ನೀಡಲಾಗಿದೆ.

ಬೆಂಗಳೂರು ದಕ್ಷಿಣ ತಾಲ್ಲೂಕಿನ ಉತ್ತರಹಳ್ಳಿ ಹೋಬಳಿ ಮಾನವರ್ತೆ ಕಾವಲ್‌‍ ಗ್ರಾಮದ ಸರ್ವೆ ನಂ: 18 ರಲ್ಲಿರುವ ಒಟ್ಟು 353 ಎಕರೆ 27 ಗುಂಟೆ ಜಮೀನನ್ನು ವಾಜರಹಳ್ಳಿ ಮತ್ತು ತಲಘಟ್ಟಪುರ ಗ್ರಾಮಸ್ಥರು ಹಲವಾರು ವರ್ಷಗಳ ಹಿಂದೆಯೇ ಹಂಚಿಕೊಂಡಿರುತ್ತಾರೆ.ಇದರಲ್ಲಿ ಒಟ್ಟು 35 ಎಕರೆ 11 ಗುಂಟೆ ಜಮೀನು ಸಂಪೂರ್ಣವಾಗಿ ಸರ್ಕಾರಿ ಎ ಮತ್ತು ಬಿ ಖರಾಬು ಜಮೀನಾಗಿರುತ್ತದೆ.

ಈ ಜಮೀನಿನ ಮಧ್ಯಭಾಗದಲ್ಲಿ ಒಟ್ಟು 8 ಎಕರೆ ವಿಸ್ತೀರ್ಣದ ಸರ್ಕಾರೀ ಬಂಡೆ ಪ್ರದೇಶ ಇದ್ದು, ಅಲ್ಲಿ ಇದುವರೆಗೂ ನಿಯಮಾನುಸಾರ ಗಣಿಗಾರಿಕೆ ನಡೆಸಲಾಗುತ್ತಿತ್ತು. ಈಗ ಗಣಿಗಾರಿಕೆ ಪೂರ್ಣಗೊಂಡಿದ್ದು ಆ ಜಾಗ 200ಕೋಟಿ ರೂಪಾಯಿಗಳಿಗೂ ಹೆಚ್ಚು ಮಾರುಕಟ್ಟೆ ಮೌಲ್ಯವನ್ನು ಹೊಂದಿರುತ್ತದೆ.

ಈ ಜಾಗ ಸರ್ಕಾರಿ ಆಸ್ತಿ ಎನ್ನುವುದಕ್ಕೆ ಸಕಲ ದಾಖಲೆಗಳಿದ್ದರೂ ಇದನ್ನು ಕಬಳಿಸಲು ಎಂ. ಮಂಜುನಾಥ್‌ ಮತ್ತಿತರರು ನಕಲಿ ದಾಖಲೆಗಳ ಮೂಲಕ ನೋಂದಣಿ ಮಾಡಿಸಿಕೊಂಡಿರುತ್ತಾರೆ. ಆದರೆ ದಾಖಲೆಗಳ್ಯಾವುದನ್ನು ಪರಿಗಣಿಸದೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ಪರಮ ಭ್ರಷ್ಟ ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಹೊಸದಾದ ಸರ್ವೆ ನಂಬರ್‌ (ಸರ್ವೆ ನಂ: 18/36, 18/37, 18/38, 18/39) ಗಳನ್ನು ಸೃಷ್ಟಿಸಿ, ಪೋಡಿ ದುರಸ್ತ್‌ ಮಾಡಿ ಪಹಣಿಗಳನ್ನು ಕೂರಿಸಿಕೊಡುವ ಮೂಲಕ ಗುರುತರವಾದ ಅಕ್ಷಮ್ಯ ಅಪರಾಧವನ್ನೇಸಗಿರುತ್ತಾರೆ.ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಭೂ ಪರಿವರ್ತನೆಯನ್ನು ಮಾಡಿಸಿಕೊಂಡಿದ್ದಾರೆ.

ಈ ಕಾನೂನು ಬಾಹಿರ ಕಾರ್ಯದಲ್ಲಿ ಕೋಟ್ಯಾಂತರ ರೂಪಾಯಿಗಳಷ್ಟು ಅಕ್ರಮ ನಡೆದಿರುತ್ತದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.ಮತ್ತೊಂದು ಗಂಭೀರವಾದ ವಿಷಯವೆಂದರೆ, ಸರ್ವೆ ನಂ: 18/38 ರಲ್ಲಿ ಒಟ್ಟು 2.00 ಎಕರೆ ವಿಸ್ತೀರ್ಣದ ಸ್ವತ್ತಿಗೆ 29/07/2024 ರಂದು ಜಯಮ್ಮ ಮತ್ತು ಶ್ರೀರಾಮುಲು ಎಂಬುವವರ ಹೆಸರಿಗೆ ಪೌತಿ ಖಾತೆ ಮಾಡಿ ಕೊಡಲಾಗಿದೆ.

ಅಸಲಿ ಸಂಗತಿ ಏನೆಂದರೆ, ತಲಘಟ್ಟಪುರ ಗ್ರಾಮದ ಸರ್ವೆ ನಂ: 18 ರ ಸ್ವತ್ತು ಸುಮಾರು 60 ಎಕರೆಗಳಷ್ಟು ವಿಸ್ತೀರ್ಣವಿದ್ದು, 1955-56 ರಲ್ಲಿ ದಾನಪತ್ರಗಳ ಮೂಲಕ ಹಲವರಿಗೆ ಹಂಚಲಾಗಿದೆ.
ವಜ್ರ ಮುನೇಶ್ವರ ದೇವಸ್ಥಾನದ ರಸ್ತೆಗೆ ಹೊಂದಿಕೊಂಡಂತಿರುವ ಈ ಸ್ವತ್ತುಗಳಲ್ಲಿ ಈಗಾಗಲೇ ಸುವಿಧ ನಿವೃತ್ತರ ಗ್ರಾಮದ ಹೆಸರಿನಲ್ಲಿ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿರುವ ಬಡಾವಣೆ ನಿರ್ಮಿಸಲಾಗಿದೆ ಆದರೂ ಕೋಟ್ಯಂತರ ಮೌಲ್ಯದ ಜಮೀನು ಕಬಳಿಸಿರುವವರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವರು, ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ರಮೇಶ್‌ ಮನವಿ ಮಾಡಿಕೊಂಡಿದ್ದಾರೆ.

ಅದೇ ರೀತಿ ಆ ಜಾಗದ ಭೂ ಪರಿವರ್ತನೆಯನ್ನು ರದ್ದುಗೊಳಿಸಿ ಅದನ್ನು ಸರ್ಕಾರಿ ವಶಕ್ಕೆ ಪಡೆದುಕೊಳ್ಳಬೇಕು ಹಾಗೂ ಇದೇ ಪ್ರದೇಶದ ಸರ್ವೆ ನಂ. 18 ರಲ್ಲಿರುವ ಸುಮಾರು 800 ಕೋಟಿಗೂ ಹೆಚ್ಚು ಮೌಲ್ಯವಿರುವ 35.11 ಎಕರೆ ವಿಸ್ತೀರ್ಣದ ಸರ್ಕಾರಿ ಎ ಮತ್ತು ಬಿ ಕರಾಬು ಸ್ವತ್ತುಗಳನ್ನು ಕೂಡಲೇ ಪತ್ತೆಹಚ್ಚಿ ಸರ್ಕಾರದ ವಶಕ್ಕೆ ತೆಗೆದುಕೊಳ್ಳಬೇಕೆಂದೂ ಅವರು ಕೇಳಿಕೊಂಡಿದ್ದಾರೆ.

RELATED ARTICLES

Latest News