ಬೆಂಗಳೂರು,ಆ.12– ಯುವ ಸಮುದಾಯವನ್ನು ಪಿಡುಗಾಗಿ ಕಾಡುತ್ತಿರುವ ಆನ್‌ಲೈನ್ ಗೇಮ್‌ಗಳನ್ನು ರಾಜ್ಯದಲ್ಲಿ ನಿರ್ಬಂಧಿಸಲು ಪಕ್ಷಬೇಧ ಮರೆತು ವಿಧಾನಸಭೆಯಲ್ಲಿಂದು ಆಗ್ರಹಿಸಲಾಯಿತು. ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಹಿರಿಯ ಶಾಸಕ ಸುರೇಶ್ ಕುಮಾರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹಸಚಿವ ಡಾ.ಜಿ.ಪರಮೇಶ್ವರ್, ಯುವಕರ ಭವಿಷ್ಯ ಹಾಳು ಮಾಡುವ ವಿಚಾರದಲ್ಲಿ ಮಾದಕವಸ್ತುಗಳ ವ್ಯಸನಕ್ಕಿಂತ ಹೆಚ್ಚು ಹಾನಿಯನ್ನು ಆನ್‌ಲೈನ್ ಗೇಮ್‌ಗಳು ಮಾಡುತ್ತಿವೆ.
ಇದರ ನಿಯಂತ್ರಣಕ್ಕಾಗಿ 2021ರಲ್ಲಿ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ತಿದ್ದುಪಡಿ ಕಾಯ್ದೆಯನ್ನು ಅಖಿಲ ಭಾರತ ಗೇಮಿಂಗ್ ಒಕ್ಕೂಟ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದಾರೆ. 2022ರಲ್ಲಿ ಈ ತಿದ್ದುಪಡಿ ಕಾಯ್ದೆ ರದ್ದಾಗಿದೆ. ಅದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ರಾಜ್ಯ ಸರ್ಕಾರ ಮೇಲನವಿ ಸಲ್ಲಿಸಿದೆ ಎಂದರು.
ಕಂಪ್ಯೂಟರ್, ಮೊಬೈಲ್ ಆ್ಯಪ್, ಎಲೆಕ್ಟ್ರಾನಿಕ್‌್ಸ ಉಪಕರಣಗಳನ್ನು ಬಳಸಿ ಆನ್‌ಲೈನ್ ಗೇಮ್ ಆಡುವುದನ್ನು ಕಾಯ್ದೆ ವ್ಯಾಪ್ತಿಗೆ ತರಲಾಗಿದೆ. ಕಳೆದ ಏ.8ರಂದು ಆನ್‌ಲೈನ್ ಗೇಮ್ ನಡೆಸುವವರ ಸಭೆ ನಡೆಸಿ ನಿಯಂತ್ರಣ ಮಾಡುವ ಬಗ್ಗೆ ಚರ್ಚಿಸಲಾಗಿತ್ತು. ಅವರು ಒಪ್ಪಿದ್ದಾರೆ ಎಂದು ಹೇಳಿದರು.
ಹಿರಿಯ ಪೊಲೀಸ್ ಅಧಿಕಾರಿ ಪ್ರಣಮ್ ಮೊಹಾಂತಿ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಸೆಪ್ಟೆಂಬರ್‌ನಲ್ಲಿ ಸಮಿತಿ ವರದಿ ಬರಲಿದೆ. ಆನ್‌ಲೈನ್ ಗೇಮ್ ನಿಯಂತ್ರಿಸಲು ಸಮಿತಿ ಮಾಡುವ ಶಿಫಾರಸ್ಸು ಆಧರಿಸಿ ಕ್ರಮ ಕೈಗೊಳ್ಳಲಾಗುವುದು. ಆನ್‌ಲೈನ್ ಗೇಮ್ ನಿಯಂತ್ರಿಸಲು ಬದ್ದವಾಗಿದೆ ಎಂದು ಹೇಳಿದರು.
ಕಳೆದ ಮೂರು ವರ್ಷಗಳಲ್ಲಿ ಆನ್‌ಲೈನ್ ಆಟಗಳಿಗೆ ಸಂಬಂಧಿಸಿದಂತೆ 347 ಪ್ರಕರಣಗಳು ದಾಖಲಾಗಿವೆ. 2025ರಲ್ಲಿ ಜುಲೈ ಅಂತ್ಯಕ್ಕೆ 159 ಪ್ರಕರಣಗಳು ದಾಖಲಾಗಿವೆ ಎಂದು ಅವರು ಮಾಹಿತಿ ನೀಡಿದರು.
ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಗ್ರಾಮೀಣಾಭಿವೃದ್ಧಿ ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಫ್ಯಾಂಟಸಿ ಕ್ರೀಡೆಯನ್ನು ಕೌಶಲ್ಯವೆಂದು ಪರಿಗಣಿಸಲಾಗಿದೆ. ಆನ್‌ಲೈನ್ ಗೇಮಿಂಗ್ 4.5 ಬಿಲಿಯನ್ ಡಾಲರ್ ವ್ಯವಹಾರವಾಗಿದೆ. ಶೇ.28ರಷ್ಟು ಜಿಎಸ್‌ಟಿ ಇದೆ. ಆದರೆ ಚೈನಾ ಹಾಗೂ ವಿದೇಶಗಳ ಸರ್ವರ್ ಆಧರಿಸಿ ಆಟ ಆಡಿಸುತ್ತಿದ್ದಾರೆ. ಜಿಎಸ್‌ಟಿ ಇಲ್ಲ, ಕೆವೈಸಿಯೂ ಇಲ್ಲ ಎಂಬಜಾಹಿರಾತು ನೀಡುತ್ತಾರೆ. ಮೋಸವಾದರೂ ಏನೂ ಮಾಡಲಾಗುವುದಿಲ್ಲ. ಇದಕ್ಕೆ ಕೇಂದ್ರ, ರಾಜ್ಯ ಸರ್ಕಾರಗಳು ಸೂಕ್ತ ನಿಯಂತ್ರಣ ಕೈಗೊಳ್ಳಬೇಕು ಎಂದರು.
ಇದಕ್ಕೂ ಮುನ್ನ ಮಾತನಾಡಿದ ಎಸ್.ಸುರೇಶ್‌ಕುಮಾರ್ ಅವರು, ಆನ್‌ಲೈನ್ ಗೇಮ್ ಮಕ್ಕಳಿಗೆ ಪಿಡುಗು ಆಗಿದೆ. ಡ್ರಗ್‌್ಸ ಮುಕ್ತ ರಾಜ್ಯ ಮಾಡುವ ರೀತಿಯಲ್ಲಿ ಆನ್‌ಲೈನ್ ಗೇಮ್ ಮುಕ್ತ ಮಾಡಬೇಕು. ಇಲ್ಲದಿದ್ದರೆ ಈ ಆನ್‌ಲೈನ್ ಗೇಮ್‌ಗಳಿಗೆ ಯುವ ಸಮುದಾಯವನ್ನು ಮುಗಿಸುತ್ತವೆ ಎಂದು ಕಳವಳ ವ್ಯಕ್ತಪಡಿಸಿದರು.
ಸಮಾಜದ ಸ್ವಾಸ್ಥ್ಯ ಕಾಪಾಡಲು ಯುವ ಸಮುದಾಯದ ರಕ್ಷಣೆಗೆ ಆನ್‌ಲೈನ್ ಗೇಮ್ ನಿರ್ಬಂಧ ಅಗತ್ಯವಿದ್ದು, ಸುಪ್ರೀಂಕೋರ್ಟ್ ನಲ್ಲಿರುವ ಈ ಸಂಬಂಧದ ಪ್ರಕರಣವನ್ನು ಶೀಘ್ರ ವಿಲೇವಾರಿ ಮಾಡಲುರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು, ಮಕ್ಕಳನ್ನು ಕಾಪಾಡಬೇಕೆಂದು ಆಗ್ರಹಿಸಿದರು.
ಅಲ್ಲದೆ ನನ್ನ ಮೊಬೈಲ್‌ಗೆ ರಮಿ ಆಡಿ ಬಹುಮಾನ ಗೆಲ್ಲಿರಿ ಎಂದು ಸಂದೇಶ ಬಂದಿದೆ. 8 ಸಾವಿರ ಬೋನಸ್ ಇದೆ, 1,62,000 ನಿಮ ವ್ಯಾಲೆಟ್‌ನಲ್ಲಿ ಸಂದೇಶ ಬಂದಿದೆ. ಇದರಿಂದ ಬಹಳಷ್ಟು ಜನ ಪ್ರಚೋದಿತರಾಗಿ ಆಡುತ್ತಾರೆ. ಅಲ್ಲದೆ ಪ್ರಖ್ಯಾತ ಕ್ರೀಡಾಪಟುಗಳು ಜಾಹಿರಾತಿನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಬಿಜೆಪಿ ಹಿರಿಯ ಶಾಸಕ ಅರಗ ಜ್ಞಾನೇಂದ್ರ ಮಾತನಾಡಿ, ಆನ್‌ಲೈನ್ ಗೇಮಿನ ಬಗ್ಗೆ ನ್ಯಾಯಾಲಯದಲ್ಲಿರುವ ತಡೆಯಾಜ್ಞೆಯನ್ನು ತೆರವುಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಆನ್‌ಲೈನ್ ಗೇಮ್‌ಗಳು ಯುವ ಸಮುದಾಯವನ್ನು ಹಾಳು ಮಾಡುತ್ತಿದೆ. ನಮ ಸರ್ಕಾರ ಇದ್ದಾಗ ಈ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರಲಾಗಿತ್ತು. ಆ ಸಂದರ್ಭದಲ್ಲಿ ಕಾಯ್ದೆಗೆ ತಿದ್ದುಪಡಿ ತಂದರೆ ನ್ಯಾಯಾಲಯದಿಂದ ತಡೆಯಾಜ್ಞೆ ತರುವುದಾಗಿ ಆನ್‌ಲೈನ್ ಗೇಮ್ ಆಡಿಸುವವರು ಹೇಳಿದ್ದರು. ಆದರೂ ನಾವು ಸಮಾಜದ, ಯುವ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕಾಯ್ದೆಗೆ ತಿದ್ದುಪಡಿ ತಂದಿದ್ದೆವು ಎಂದು ಹೇಳಿದರು.
ಬಿಜೆಪಿಯ ಮತ್ತೊಬ್ಬ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ಆನ್‌ಲೈನ್ ಗೇಮ್‌ನಲ್ಲಿ ಕೌಶಲ್ಯವಿದ್ದರೂ ಬೆಟ್ಟಿಂಗ್‌ಗೆ ಅವಕಾಶ ಇರಬಾರದು ಎಂದು ಸಲಹೆ ಮಾಡಿದರು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ಯು.ಟಿ.ಖಾದರ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಇದೊಂದು ಗಂಭೀರ ವಿಷಯವಾಗಿರುವುದರಿಂದ ಈ ಅಧಿವೇಶನ ಮುಗಿಯುವುದರೊಳಗೆ ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಪ್ರಕಟಿಸಿದರು.