ಬೆಂಗಳೂರು,ಡಿ.11- ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಆರು ದಶಕಗಳ ಸುದೀರ್ಘ ಅವಧಿಗೆ ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿದ್ದವರು. ತಾವು ಅಲಂಕರಿಸಿದ ಹುದ್ದೆಗಳಿಗೆ ನ್ಯಾಯ ಒದಗಿಸಿಕೊಟ್ಟ ಅವರು ಒಬ್ಬ ಶ್ರೇಷ್ಠ ರಾಜಕಾರಣಿ. ಅವರ ಸಾಧನೆಯನ್ನು ಪರಿಗಣಿಸಿ ಭಾರತ ಸರ್ಕಾರವು ಈಚೆಗೆ ಪದವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು. ಈಗ ರಾಜ್ಯ ಸರ್ಕಾರ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು ಎಂಬುದು ನಮೆಲ್ಲರ ಒತ್ತಾಸೆಯಾಗಿದೆ ಎಂದು ಶಾಸಕ ದಿನೇಶ್ ಗೂಳಿಗೌಡ ತಿಳಿಸಿದರು.
ರಾಷ್ಟ್ರದ ಪ್ರಜಾಪ್ರಭುತ್ವ ನಾಲ್ಕು ಸ್ತಂಭಗಳಾದ ವಿಧಾನಸಭೆ, ವಿಧಾನಪರಿಷತ್, ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರಾಗಿ ಕಳೆದ ಅರವತ್ತು ವರ್ಷಗಳ ಕಾಲ ನಾಡಿನ, ರಾಷ್ಟ್ರದ ಸೇವೆಗೈದ ಕೃಷ್ಣ ರವರು ತಾವು ನಿರ್ವಹಿಸಿದ ಪ್ರತಿ ಹುದ್ದೆಯಲ್ಲೂ ಹೆಜ್ಜೆ ಗುರುತು ಮೂಡಿಸಿದವರು. ಇವರ ನಿಧನ ತೀವ್ರ ದುಃಖ ತಂದಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದರು.
1999 ರಿಂದ 2004 ಕೃಷ್ಣ ರವರು ಮುಖ್ಯಮಂತ್ರಿ ಯಾಗಿ ನಾಡಿಗೆ ಸಲ್ಲಿಸಿದ ಸೇವೆ ಅವಿಸರಣೀಯ. ಸ್ತ್ರೀ ಶಕ್ತಿ, ಅಕ್ಷರ ದಾಸೋಹ, ರೈತರಿಗೆ ಪಹಣಿ ನೀಡುವ ಭೂಮಿ ಯೋಜನೆ, ಯಶಸ್ವಿನಿ ಯೋಜನೆ ಸಮಾಜದ ಸರ್ವ ಜನರನ್ನು ಸ್ಪರ್ಶಿಸಿ ಜನಮನ ಗೆದ್ದ ಯೋಜನೆಗಳಾಗಿದ್ದವು ಎಂದು ಸರಿಸಿದರು.
ಐಟಿ ಬಿಟಿ ಕ್ಷೇತ್ರಕ್ಕೆ ಅಗಾಧ ಬೆಂಬಲ ನೀಡಿ ಬೆಂಗಳೂರು ನಗರದ ಬೆಳವಣಿಗೆಗೆ ಹಾಕಿಕೊಟ್ಟ ಭದ್ರ ಭೂನಾದಿಯಿಂದ ಜಾಗತಿಕ ಮಟ್ಟದಲ್ಲಿ ಬೆಂಗಳೂರು ಸಿಲಿಕಾನ್ ವ್ಯಾಲಿ ಎಂದು ಹೆಸರು ಗಳಿಸಿ ಅಮೇರಿಕಾದ ಕ್ಯಾಲಿಪೋರ್ನಿಯಾ ನಗರಕ್ಕೆ ಪರ್ಯಾಯವಾಗಿ ಹೆಸರು ಗಳಿಸಿತ್ತು. ಇಂದು ರಾಜ್ಯದ ಆಯವ್ಯಯ ಮೂರು ಲಕ್ಷ ಕೋಟಿ ದಾಟಿದ್ದರೆ ಅದಕ್ಕೆ ಕೃಷ್ಣ ಅವರು ಐಟಿ ಕ್ಷೇತ್ರಕ್ಕೆ ನೀಡಿದ ಅವಕಾಶಗಲೇ ಕಾರಣ ಎಂದು ಹೇಳಿದರು. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.