ಬೆಂಗಳೂರು,ಮಾ.7- ಬಜೆಟ್ ಮಂಡನೆ ವೇಳೆ ಒಳಮೀಸಲಾತಿಗಾಗಿ ಆಗ್ರಹಿಸಿ ವಿಧಾನಸಭೆಯ ಸಭಾಂಗಣದಲ್ಲಿ ಕೆಲವರು ಘೋಷಣೆ ಕೂಗಿ ಗದ್ದಲ ಎಬ್ಬಿಸಿದ್ದಾರೆ.ವಿಧಾನಸಭೆ ಅಧಿವೇಶನ ವೀಕ್ಷಣೆಗೆ 7 ಮಂದಿ ಪಾಸ್ ಪಡೆದು ಸಭಾಧ್ಯಕ್ಷರ ಗ್ಯಾಲರಿಯಲ್ಲಿ ಕುಳಿತಿದ್ದರು. ಅವರಲ್ಲಿ 3 ಮಂದಿ ಏಕಾಏಕಿ ಎದ್ದು ಘೋಷಣೆಗಳನ್ನು ಕೂಗಿ ಗದ್ದಲ ಎಬ್ಬಿಸಿದ್ದಾರೆ.
ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಜಾರಿಯಾಗಬೇಕು. ಸುಪ್ರೀಂಕೋರ್ಟ್ ಆದೇಶವನ್ನು ಧಿಕ್ಕರಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದ್ದಾರೆ. ಕೂಡಲೇ ಘೋಷಣೆ ಕೂಗಿದ 5 ಮಂದಿಯನ್ನು ಮಾರ್ಷಲ್‌ಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಅವರಲ್ಲಿ ವಿಜಯಶಂಕರ್ ಎಂಬುವವರು ಸುದ್ದಿಗಾರರೊಂದಿಗೆ ಮಾತನಾಡಿ, 2024ರ ಆ.1 ರಂದು ಸುಪ್ರೀಂಕೋರ್ಟ್ ಆದೇಶ ನೀಡಿ ಒಳಮೀಸಲಾತಿ ಜಾರಿಗೆ ಸೂಚನೆ ನೀಡಿದೆ. ರಾಜ್ಯ ಸರ್ಕಾರ ಅದನ್ನು ಕಡೆಗಣಿಸಿತ್ತು ಎಂದರು. ಈ ಮೊದಲು ಮಾದಿಗ ಸಮುದಾಯ ಬೆಂಗಳೂರು ಫ್ರೀಡಂ ಪಾರ್ಕ್, ಬೆಳಗಾವಿಯ ಸುವರ್ಣ ಸೌಧ ಸೇರಿದಂತೆ ಹಲವು ಕಡೆ ಪ್ರತಿಭಟನೆ ನಡೆಸಿದೆ. ಇದರಲ್ಲಿ ಸಮುದಾಯದ ಹಲವಾರು ಮಂದಿ ಸಾವನ್ನಪ್ಪಿದ್ದಾರೆ.
ಬೆಳಗಾವಿಯಲ್ಲಿ ಸಮಾಜಕಲ್ಯಾಣ ಸಚಿವರು ಬಂದು ಒಂದೆರೆಡು ತಿಂಗಳಲ್ಲೇ ಒಳ ಮೀಸಲಾತಿಯನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದರು. ಆದರೆ ಅದು ಈವರೆಗೂ ಅನುಷ್ಠಾನಕ್ಕೆ ಬಂದಿಲ್ಲ, ಆ ಹಿನ್ನೆಲೆಯಲ್ಲಿ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.ಘೋಷಣೆ ಕೂಗಿದವರನ್ನು ವಶಕ್ಕೆ ತೆಗೆದುಕೊಳ್ಳುವ ಹಂತದಲ್ಲಿ ಪೊಲೀಸರ ಜೊತೆ ಮಾತಿನ ಚಕಮಕಿ ನಡೆಸಲಾಗಿದೆ.