Sunday, April 27, 2025
Homeರಾಷ್ಟ್ರೀಯ | Nationalಹಿಂದೂಗಳ ನರಮೇಧದ ವಿರುದ್ಧ ಪ್ರತಿಕಾರ, ಐದು ಉಗ್ರರ ಮನೆ ನೆಲಸಮ

ಹಿಂದೂಗಳ ನರಮೇಧದ ವಿರುದ್ಧ ಪ್ರತಿಕಾರ, ಐದು ಉಗ್ರರ ಮನೆ ನೆಲಸಮ

Demolished homes of 5 terrorists days after Pahalgam terror attack

ಶ್ರೀನಗರ,ಏ.26- ಪ್ರವಾಸಿಗರ ಮಾರಣಹೋಮ ನಡೆಸಿ ಅಟ್ಟಹಾಸ ಮೆರೆದಿದ್ದ ಉಗ್ರಗಾಮಿಗಳ ವಿರುದ್ದ ಸಮರವನ್ನೇ ಸಾರಿರುವ ಕೇಂದ್ರ ಸರ್ಕಾರ, ಮತ್ತೆ ಜಮ್ಮು ಮತ್ತು ಕಾಶೀರದಾದ್ಯಂತ ಲಷ್ಕರ್‌-ಎ-ತೊಯ್ಬಾ (ಎಲ್‌ಇಟಿ) ಕಮಾಂಡರ್‌ ಸೇರಿದಂತೆ ಐದು ಭಯೋತ್ಪಾದಕರಿಗೆ ಸೇರಿದ ಮನೆಗಳನ್ನು ನೆಲೆಸಮ ಮಾಡಿದೆ.

ಶುಕ್ರವಾರವಷ್ಟೇ ಇಬ್ಬರು ಉಗ್ರರ ಮನೆಗಳನ್ನು ಧ್ವಂಸ ಮಾಡಿದ ಬೆನ್ನಲ್ಲೇ ಜಮು ಮತ್ತು ಕಾಶೀರ ಸರ್ಕಾರ ಹಾಗೂ ಸೇನಾಪಡೆಗಳು ಶನಿವಾರ ಹಲವಾರು ಭಯೋತ್ಪಾದಕರ ಮನೆಗಳನ್ನು ನೆಲಸಮಗೊಳಿಸಿದೆ.

ಒಂದು ಮೂಲದ ಪ್ರಕಾರ ಪಾಕಿಸ್ತಾನಕ್ಕೆ ಕಾನೂನುಬದ್ಧವಾಗಿ ಪ್ರಯಾಣಿಸಿದ್ದ ಇವರು, ಕಳೆದ ವರ್ಷ ಜಮು ಮತ್ತು ಕಾಶೀರಕ್ಕೆ ನುಸುಳುವ ಮೊದಲು ದೇಶದೊಳಗೆ ಭಯೋತ್ಪಾದನಾ ಚಟುವಟಿಕೆ ಸೇರಿದಂತೆ ವಿಧ್ವಂಸಕ ಕೃತ್ಯ ನಡೆಸಲು ತರಬೇತಿ ಪಡೆದಿದ್ದರು. ಮಾರಣಾಂತಿಕ ಪಹಲ್ಗಾಮ್‌ ದಾಳಿಯ ಯೋಜನೆ ಮತ್ತು ಕಾರ್ಯಗತಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ.

ಶೋಪಿಯಾನ್‌, ಕುಲ್ಗಾಮ್‌ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು ಎಲ್‌ಇಟಿ ಕಾರ್ಯಕರ್ತರು ಮತ್ತು ಪಹಲ್ಗಾಮ್‌ ದಾಳಿಗೆ ಸಂಬಂಧಿಸಿದ ಶಂಕಿತರ ಮೇಲೆ ಕಠಿಣ ಕ್ರಮ ತೆಗೆದುಕೊಂಡಿವೆ. ಶೋಪಿಯಾನ್‌ನ ಚೋಟಿಪೋರಾ ಗ್ರಾಮದಲ್ಲಿ, ಎಲ್‌ಇಟಿ ಕಮಾಂಡರ್‌ ಶಾಹಿದ್‌ ಅಹದ್‌ ಕುಟ್ಟೆ ಅವರ ಮನೆಯನ್ನು ನೆಲಸಮ ಮಾಡಲಾಗಿದೆ. ಕುಟ್ಟೆ ಕಳೆದ ಮೂರರಿಂದ ನಾಲ್ಕು ವರ್ಷಗಳಿಂದ ಭಯೋತ್ಪಾದನಾ ಸಂಬಂಧಿತ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದಾನೆ ಮತ್ತು ರಾಷ್ಟ್ರವಿರೋಧಿ ಕಾರ್ಯಾಚರಣೆಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪುಲ್ವಾಮಾದ ಮುರ್ರಾನ್‌ ಪ್ರದೇಶದಲ್ಲಿ ಭಯೋತ್ಪಾದಕ ಅಹ್ಸಾನ್‌ ಉಲ್‌ ಹಕ್‌ ಮನೆಯನ್ನು ಸ್ಫೋಟಗೊಳಿಸಿ ನೆಲಸಮ ಮಾಡಲಾಗಿದೆ.2018 ರಲ್ಲಿ ಪಾಕಿಸ್ತಾನದಲ್ಲಿ ಭಯೋತ್ಪಾದನಾ ತರಬೇತಿ ಪಡೆದಿದ್ದ ಅಹ್ಸಾನ್‌ ಇತ್ತೀಚೆಗೆ ಕಣಿವೆಗೆ ಮತ್ತೆ ಬಂದು ಸಕ್ರಿಯನಾಗಿದ್ದ. ಜೂನ್‌ 2023 ರಿಂದ ಸಕ್ರಿಯವಾಗಿರುವ ಎಲ್‌ಇಟಿ ಭಯೋತ್ಪಾದಕ ಎಹ್ಸಾನ್‌ ಅಹದ್‌ ಶೇಖ್‌ನ ಮತ್ತೊಂದು ಎರಡು ಅಂತಸ್ತಿನ ಮನೆಯನ್ನು ಕೆಡವಲಾಯಿತು. ಪುಲ್ವಾಮಾದ ಕಚಿಪೋರಾ ಪ್ರದೇಶದಲ್ಲಿ ನಡೆದ ಸ್ಫೋಟದಲ್ಲಿ 2023 ರಿಂದ ಸಕ್ರಿಯವಾಗಿರುವ ಐದನೇ ಭಯೋತ್ಪಾದಕ ಹರಿಸ್‌‍ ಅಹದ್‌ನ ನಿವಾಸವನ್ನು ಧ್ವಂಸಗೊಳಿಸಲಾಯಿತು.

ಈತ ಪಹಲ್ಗಾಮ್‌ ದಾಳಿಯಲ್ಲೂ ಶಂಕಿತನಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಎಲ್ಲಾ ಭಯೋತ್ಪಾದಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇಲ್ಲಿಯವರೆಗೆ ಭದ್ರತಾ ಪಡೆ ಐವರು ಉಗ್ರರ ಮನೆಗಳನ್ನು ಧ್ವಂಸ ಮಾಡಿದ್ದು, ಈ ಪ್ರದೇಶದಲ್ಲಿ ಉಗ್ರರ ಶೋಧ ಕಾರ್ಯ ಮುಂದುವರೆದಿದೆ.

ಇದಕ್ಕೆ ಮುಂಚೆ ಅಂದರೆ ದಕ್ಷಿಣ ಕಾಶೀರದ ಟ್ರಾಲ್‌ನ ಮೊಂಘಮಾ ಗ್ರಾಮದಲ್ಲಿ ಭದ್ರತಾ ಪಡೆಗಳು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಆಸಿಫ್‌ ಶೇಖ್‌ ಮನೆಯನ್ನು ಸ್ಫೋಟಿಸಿ, ಧ್ವಂಸಗೊಳಿಸಲಾಗಿತ್ತು. ಆಸಿಫ್‌ ಶೇಖ್‌ ಉಗ್ರ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು, ಪಹಲ್ಗಾಮ್‌ ದಾಳಿಯಲ್ಲಿ ಈತನ ಹೆಸರೂ ಕೇಳಿಬರುತ್ತಿದೆ. ಈ ಮಧ್ಯೆ, ಅನಂತ್‌ನಾಗ್‌ ಜಿಲ್ಲೆಯ ಬಿಜ್‌ಬೆಹರಾದಲ್ಲಿ ಆದಿಲ್‌ ಥೋಕರ್‌ ಎಂಬ ಉಗ್ರನ ಮನೆಯನ್ನು ಧ್ವಂಸ ಮಾಡಲಾಗಿದೆ.

ಗುರುವಾರ ರಾತ್ರಿ, ಪಹಲ್ಗಾಮ್‌ ದಾಳಿಯ ಹಿಂದಿನ ಇಬ್ಬರು ಎಲ್‌ಇಟಿ ಭಯೋತ್ಪಾದಕರಾದ ಆದಿಲ್‌ ಹುಸೇನ್‌ ಥೋಕರ್‌ ಮತ್ತು ಆಸಿಫ್‌ ಶೇಖ್‌ ಮನೆಗಳು ಪ್ರತ್ಯೇಕ ಸ್ಫೋಟಗಳಲ್ಲಿ ಧ್ವಂಸಗೊಂಡಿದ್ದವು. ಕೆಲವು ಸ್ಫೋಟಕಗಳನ್ನು ಉಗ್ರರ ಮನೆಗಳಲ್ಲಿ ಇರಿಸಿ ಅದನ್ನು ಸ್ಫೋಟಿಸಲಾಗಿತ್ತು.

ಈಗಾಗಲೇ ಪಹಲ್ಗಾಮ್‌ ದಾಳಿಯಲ್ಲಿ ಭಾಗಿಯಾಗಿರುವ ಶಂಕಿತ ಥೋಕರ್‌ ಮತ್ತು ಇತರ ಇಬ್ಬರು ಭಯೋತ್ಪಾದಕರ ರೇಖಾಚಿತ್ರಗಳನ್ನು ಅನಂತನಾಗ್‌ ಪೊಲೀಸರು ಗುರುವಾರ ಬಿಡುಗಡೆ ಮಾಡಿದ್ದರು. ಇತರ ಇಬ್ಬರು ಶಂಕಿತರಾದ ಹಾಶಿಮ್‌ ಮೂಸಾ ಅಲಿಯಾಸ್‌‍ ಸುಲೇಮಾನ್‌ ಮತ್ತು ಅಲಿ ಭಾಯ್‌ ಅಲಿಯಾಸ್‌‍ ತಲ್ಹಾ ಭಾಯ್‌ ಪಾಕಿಸ್ತಾನಿ ಪ್ರಜೆಗಳಾಗಿದ್ದು, ಅವರ ಬಂಧನಕ್ಕೆ ತಲಾ 20 ಲಕ್ಷ ರೂ. ಬಹುಮಾನ ನೀಡುವುದಾಗಿ ಅಧಿಕಾರಿಗಳು ಘೋಷಿಸಿದ್ದಾರೆ.

ಮೋದಿ ಸರ್ಕಾರ ಈ ಘಟನೆ ನಂತರ ಸೇನೆಗೆ ಮುಕ್ತವಾಗಿ ಕೆಲಸ ಮಾಡುವಂತೆ ಅವಕಾಶವನ್ನು ನೀಡಿದೆ. ಇದೀಗ ಭಾರತದ ಸೇನೆ ಪಾಕ್‌ ಉಗ್ರರಿಗೆ ಒಂದರಂತೆ ಹೊಡೆತವನ್ನು ನೀಡುತ್ತಿದೆ. ಬಹುದೊಡ್ಡ ಕಾರ್ಯಾಚರಣೆಯನ್ನು ಸೇನೆ ಮಾಡುತ್ತಿದೆ. ಉಗ್ರರು ನೆಲೆಸಿರುವ ಪ್ರದೇಶಕ್ಕೆ ನುಗ್ಗಿ ಭಾರತೀಯ ಸೇನೆ ಹೊಡೆಯುತ್ತಿದೆ.

ಇತ್ತ ಉಗ್ರರ ಪತ್ತೆಗೆ ತೀವ್ರ ಶೋಧ ಕಾರ್ಯ ನಡೆದಿದೆ. ಇನ್ನು ಪಾಕಿಸ್ತಾನಿ ಉಗ್ರರಿಗೆ ಕುಮಕ್ಕು ನೀಡಿದ ಜಮು ಮತ್ತು ಕಾಶೀರ ನಿವಾಸಿಗಳಾದ ಉಗ್ರರ ಮನೆಯನ್ನು ಧ್ವಂಸ ಮಾಡಲಾಗಿದೆ, ಸ್ಥಳೀಯರನ್ನು ವಶಕ್ಕೆ ಪಡೆಯಲಾಗಿದೆ.ಒಟ್ಟಾರೆಯಾಗಿ, ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಸಕ್ರಿಯ ಲಷ್ಕರ್‌ ಕಾರ್ಯಕರ್ತರ ಐದು ಮನೆಗಳನ್ನು ನೆಲಸಮ ಮಾಡಲಾಗಿದೆ.

ಮಂಗಳವಾರ ಮಧ್ಯಾಹ್ನ, ಪಹಲ್ಗಾಮ್‌ನಿಂದ ಸುಮಾರು 5 ಕಿಮೀ ದೂರದಲ್ಲಿರುವ ಬೈಸರನ್‌ ಹುಲ್ಲುಗಾವಲಿನಲ್ಲಿ ಐದರಿಂದ ಆರು ಭಯೋತ್ಪಾದಕರು ಪ್ರವಾಸಿಗರ ಗುಂಪಿನ ಮೇಲೆ ಗುಂಡಿನ ದಾಳಿ ನಡೆಸಿ ಮಾರಣ ಹೋಮ ನಡೆಸಿದ್ದರು. ಇದನ್ನು ಮಿನಿ ಸ್ವಿಟ್ಜರ್ಲೆಂಡ್‌ಎಂದೂ ಕರೆಯುತ್ತಾರೆ – ಕಾಲ್ನಡಿಗೆಯ ಮೂಲಕ ಅಥವಾ ಕುದುರೆಯ ಮೂಲಕ ಮಾತ್ರ ಪ್ರವೇಶಿಸಬಹುದು. ಪಹಲ್ಗಾಮ್‌ ಹತ್ಯಾಕಾಂಡವು ಇತ್ತೀಚಿನ ವರ್ಷಗಳಲ್ಲಿ ಕಾಶೀರ ಕಣಿವೆಯಲ್ಲಿ ನಡೆದ ಅತ್ಯಂತ ಭೀಕರ ನಾಗರಿಕ ದಾಳಿಗಳಲ್ಲಿ ಒಂದಾಗಿದೆ.ಮ ಲಷ್ಕರ್‌-ಎ-ತೊಯ್ಬಾದ ಶಾಖೆಯಾದ ರೆಸಿಸ್ಟೆನ್‌್ಸ ಫ್ರಂಟ್‌ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಜಮು ಮತ್ತು ಕಾಶೀರ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅವರು ಇತ್ತೀಚಿನ ವರ್ಷಗಳಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡು ನಾವು ನೋಡಿದ್ದಕ್ಕಿಂತ ದೊಡ್ಡದಾದ ದಾಳಿ ಎಂದು ಹೇಳಿದ್ದಾರೆ.

RELATED ARTICLES

Latest News