ಬೆಂಗಳೂರು, ಸೆ.29- ವಾತವರಣದಲ್ಲಿ ಏರುಪೇರು ಆಗುತ್ತಿದ್ದಂತೆ ರಾಜ್ಯದಲ್ಲಿ ಸದ್ದಿಲ್ಲದೇ ಸಾಂಕ್ರಾಮಿಕ ಸೋಂಕುಗಳು ಏರಿಕೆಯಾಗ್ತಿವೆ. ಆದರಲ್ಲೂ ಮಾರಣಾಂತಿಕ ಡೆಂಘೀ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.ರಾಜ್ಯದಲ್ಲಿ ಇದುವರೆಗೂ ಡೆಂಘೀ ಸೋಂಕಿತರ ಸಂಖ್ಯೆ ಐದು ಸಾವಿರದ ಗಡಿ ದಾಟಿರುವುದು ವಿಶೇಷವಾಗಿದೆ.
ಇಡೀ ರಾಜ್ಯದಲ್ಲಿ ಡೆಂಘೀ ಪ್ರಕರಣಗಳು ಏರಿಕೆಯಾಗುತ್ತಿರುವುದರ ಜೊತೆಗೆ ಬೆಂಗಳೂರಿನಲ್ಲೂ ಸೋಂಕು ಉಲ್ಬಣಗೊಂಡಿರುವುದು ಕಂಡು ಬಂದಿದೆ. ಕಳೆದ ಒಂಬತ್ತು ತಿಂಗಳಿನಲ್ಲಿ ಇಡೀ ರಾಜ್ಯದಲ್ಲಿ 5093 ಕ್ಕೂ ಹೆಚ್ಚು ಡೆಂಘೀ ಪ್ರಕರಣಗಳು ಕಂಡು ಬಂದಿದ್ದರೆ, ರಾಜಧಾನಿ ಬೆಂಗಳೂರು ಒಂದರಲ್ಲೆ 2478 ಪ್ರಕರಣಗಳು ವರದಿಯಾಗಿರುವುದು ವಿಶೇಷವಾಗಿದೆ.
ಬೆಂಗಳೂರು ಹೊರತುಪಡಿಸಿ ರಾಜ್ಯಾದಾದ್ಯಂತ 2615 ಪ್ರಕರಣಗಳು ದೃಢಪಟ್ಟಿದ್ದು, ಈ ಸೋಂಕಿಗೆ ಈಡೀಸ್ ಈಜಿಪ್ಟೈ ಎಂಬ ಸೊಳ್ಳೆ ಕಡಿತವೇ ಕಾರಣವಾಗಿದೆ.ನಿಂತ ನೀರಲ್ಲಿ ಬೆಳೆಯುವ ಈ ಡೇಂಜರಸ್ ಸೊಳ್ಳೆ ಕಚ್ಚುವುದರಿಂದ ಡೆಂಘೀ ಗುಣಲಕ್ಷಣಗಳು ಕಂಡು ಬರುತ್ತಿವೆ. ವಿಪರೀತ ಜ್ವರ, ತಲೆನೋವು, ಮೈಕೈ ನೋವು,ಕೀಲುನೋವು, ವಾಂತಿ- ವಾಕರಿಕೆ,ಕಣ್ಣುಗಳ ಹಿಂಭಾಗದಲ್ಲಿ ನೋವು, ಊದಿಕೊಂಡ ಗ್ರಂಥಿಗಳು ಈ ಸೋಂಕಿನ ಲಕ್ಷಣಗಳಾಗಿರುತ್ತವೆ. ಇಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣ ಸಮೀಪದ ಪಾಲಿಕೆ ಆಸ್ಪತ್ರೆಗಳಿಗೆ ತೆರಳಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವಂತೆ ಆರೋಗ್ಯಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.