Thursday, July 4, 2024
Homeರಾಜ್ಯಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮಿತಿಮೀರಿದ ಡೆಂಘಿ ಮಹಾಮಾರಿ, 6ಮಂದಿ ಸಾವು

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮಿತಿಮೀರಿದ ಡೆಂಘಿ ಮಹಾಮಾರಿ, 6ಮಂದಿ ಸಾವು

ಬೆಂಗಳೂರು,ಜು.2- ರಾಜ್ಯದ ಹಲವೆಡೆ ಡೆಂಘಿ ಮಹಾಮಾರಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.ರಾಜಧಾನಿ ಬೆಂಗಳೂರು, ಹಾಸನ, ಶಿವಮೊಗ್ಗ, ಹಾವೇರಿ, , ಚಿಕ್ಕಮಗಳೂರು, ಮೈಸೂರು, ಚಿತ್ರದುರ್ಗ, ಧಾರವಾಡ ಸೇರಿದಂತೆ ಹಲವೆಡೆ ದಿನೇದಿನೇ ಡೆಂಘಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾವು-ನೋವು ಕೂಡ ಸಂಭವಿಸುತ್ತಿದೆ. ಈಗಾಗಲೇ ಡೆಂಘಿಗೆ ಸಾವನ್ನಪ್ಪಿದವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ 1, ಶಿವಮೊಗ್ಗ 1, ಹಾಸನ 2, ಹಾವೇರಿಯಲ್ಲಿ 1, ಧಾರವಾಡದಲ್ಲಿ ಒಬ್ಬರು ಡೆಂಘಿ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಡೆಂಘಿ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದ್ದು, ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಕೂಡ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

ಬೆಂಗಳೂರಿನಲ್ಲಿ 1,563, ಚಿಕ್ಕಮಗಳೂರು 491, ಮೈಸೂರು 479, ಹಾವೇರಿಯಲ್ಲಿ 451, ಚಿತ್ರದುರ್ಗ 265, ದಕ್ಷಿಣ ಕನ್ನಡ 233 ಮಂದಿ ಡೆಂಘಿ ಲಕ್ಷಣಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದ ವಿವಿಧೆಡೆ 5 ಸಾವಿರಕ್ಕೂ ಹೆಚ್ಚು ಮಂದಿಗೆ ಈ ರೋಗಲಕ್ಷಣಗಳು ಕಾಣಿಸಿಕೊಂಡಿದ್ದು, ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಬೇಕೆಂದು ಸೂಚನೆ ನೀಡಲಾಗಿದೆ.ವ್ಯಾಪಕವಾಗಿ ಡೆಂಘಿ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ಗ್ರಾಮೀಣಾಭಿವೃದ್ಧಿ, ಪಂಚಾಯತ್‌ ರಾಜ್‌ ಹಾಗೂ ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳ ಜೊತೆ ಇಂದು ಮಹತ್ವದ ಸಭೆ ನಡೆಸಲಿದ್ದಾರೆ.

ಡೆಂಘಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ರೋಗ ನಿಯಂತ್ರಣದ ಬಗ್ಗೆ ಕೈಗೊಳ್ಳುವ ಕ್ರಮಗಳ ಬಗ್ಗೆ ಚರ್ಚಿಸಲಿದ್ದಾರೆ.

ರಾಜಧಾನಿಯಲ್ಲಿ ಡೆಂಘಿ ಹೆಚ್ಚಳ :
ರಾಜಧಾನಿ ಬೆಂಗಳೂರಿನಲ್ಲಿ ಮಾರಕ ರೋಗ ಡೆಂಘಿ ದಿನೇದಿನೇ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಅಲರ್ಟ್‌ ಆಗಿರುವ ಬಿಬಿಎಂಪಿ ಮನೆಮನೆ ಸಮೀಕ್ಷೆ ನಡೆಸಿ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಮುಂದಾಗಿದೆ.

1500 ಜನರ ತಂಡ ರಚಿಸಿ 12 ಲಕ್ಷ ಮನೆಗಳ ಸಮೀಕ್ಷೆ ನಡೆಸಲು ಯೋಜನೆ ರೂಪಿಸಿದ್ದು, ಪ್ರತಿ ವಾರ ಈ ತಂಡ ಮನೆಮನೆಗಳಿಗೆ ತೆರಳಿ ಡೆಂಘಿ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದೆ. ರೋಗ ಪತ್ತೆ ತಡೆಯುವಿಕೆ, ರೋಗ ಬರದಂತೆ ಎಚ್ಚರ ವಹಿಸುವ ಕಾರ್ಯಗಳಲ್ಲಿ ಮುಂದಾಗಿದೆ.

ಆಶಾ ಕಾರ್ಯಕರ್ತೆಯರು, ಎಎನ್‌ಎಂ ಕಾರ್ಯಕರ್ತರು ಹಾಗೂ ಆರೋಗ್ಯಾಧಿಕಾರಿಗಳನ್ನೊಳಗೊಂಡ ಈ ತಂಡ ಎನ್‌ಎಸ್‌‍ಎಸ್‌‍ ಹಾಗೂ ನರ್ಸಿಂಗ್‌ ಕಾಲೇಜು ವಿದ್ಯಾರ್ಥಿಗಳನ್ನು ಬಳಸಿಕೊಂಡು ಈ ಮಾರಕ ಕಾಯಿಲೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮುಂದಾಗಿದೆ.

ಬೆಂಗಳೂರಿನಲ್ಲಿ 1,563 ಡೆಂಘಿ ಲಕ್ಷಣ ಪ್ರಕರಣಗಳು ಕಂಡುಬಂದಿವೆ. ಕೇವಲ 2 ದಿನದಲ್ಲಿ 78 ಸ್ಯಾಂಪಲ್‌ಗಳ ಪೈಕಿ 12 ಮಂದಿಗೆ ಡೆಂಘಿ ಇರುವುದು ದೃಢಪಟ್ಟಿದೆ. ಪಶ್ಚಿಮ ವಲಯದಲ್ಲಿ 5, ಬೊಮನಹಳ್ಳಿ ಹಾಗೂ ಮಹದೇವಪುರ ವಲಯದಲ್ಲಿ ತಲಾ 2 ಪ್ರಕರಣಗಳು ದೃಢಪಟ್ಟಿರುವುದು ಪತ್ತೆಯಗಿದೆ.

ಮುಂಜಾಗ್ರತಾ ಕ್ರಮವಾಗಿ ಎಲ್ಲಾ ವಲಯಗಳಲ್ಲೂ ಕಟ್ಟೆಚ್ಚರ ವಹಿಸುವಂತೆ ಹಿರಿಯ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೂಚನೆ ನೀಡಿದ್ದಾರೆ.ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವ ಡೆಂಘಿ ಪ್ರಕರಣಗಳ ಬಗ್ಗೆ ಕಡ್ಡಾಯವಾಗಿ ಸರ್ಕಾರಕ್ಕೆ ಮಾಹಿತಿ ನೀಡಬೇಕೆಂದು ಸೂಚನೆ ನೀಡಲಾಗಿದೆ.

ಹಾವೇರಿಯಲ್ಲಿ ಡೆಂಘಿ ಆತಂಕ :
ಹಾವೇರಿ ಜಿಲ್ಲೆಯಲ್ಲಿ ಡೆಂಘಿ ಪ್ರಕರಣಗಳು ಹೆಚ್ಚಾಗುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್‌ ನಿನ್ನೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಪ್ರತಿ ವಾರ್ಡ್‌ಗೂ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಡೆಂಘಿ ವಾರ್ಡ್‌ ಸೇರಿದಂತೆ ಮಹಿಳಾ, ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದ ಅವರು ಕ್ರಮಗಳ ಬಗ್ಗೆ ವೈದ್ಯರೊಂದಿಗೆ ಚರ್ಚಿಸಿದರು.

RELATED ARTICLES

Latest News