ಬೆಂಗಳೂರು,ಜು.5- ರಾಜಧಾನಿ ಬೆಂಗಳೂರು ಸೇರಿದಂತೆ ಮಹಾಮಾರಿ ಡೆಂಘೀ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಈಗಾಗಲೇ ಈ ಮಾರಕ ಕಾಯಿಲೆಗೆ ಮಕ್ಕಳು, ಮಹಿಳೆಯರು ಸೇರಿ ಏಳು ಮಂದಿ ಮೃತಪಟ್ಟಿದ್ದಾರೆ. ಸಾವುನೋವಿನ ಪ್ರಮಾಣವು ದಿನೇ ದಿನೇ ಹೆಚ್ಚಾಗುತ್ತಲೇ ಇದೆ.
ಡೆಂಘೀ ಮಹಾಮಾರಿ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿರುವ ನಡುವೆಯೇ ರೋಗ ಲಕ್ಷಣಗಳಿಂದ ಆಸ್ಪತ್ರೆ ಸೇರುವವರ ಸಂಖ್ಯೆಯು ಕೂಡ ಹೆಚ್ಚಾಗುತ್ತಿದೆ.ಶಿವಮೊಗ್ಗ, ಹಾವೇರಿ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಉಡುಪಿ, ಧಾರವಾಡ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಈವರೆಗೆ 6,676 ಮಂದಿಯಲ್ಲಿ ಡೆಂಘೀ ರೋಗ ಲಕ್ಷಣಗಳಿರುವುದು ಕಂಡುಬಂದಿದೆ.
ಸಾಂಕ್ರಾಮಿಕ ರೋಗಗಳ ವಿರುದ್ಧ ಜಾಗೃತಿ ಮೂಡಿಸುತ್ತಿದ್ದ ಆರೋಗ್ಯ ಇಲಾಖೆಯ ಸಮುದಾಯ ಆರೋಗ್ಯಾಧಿಕಾರಿಯೇ ಡೆಂಘೀಗೆ ಬಲಿಯಾಗಿರುವುದು ಸೇರಿದಂತೆ ಈವರೆಗೆ 7 ಮಂದಿ ರೋಗಕ್ಕೆ ಬಲಿಯಾಗಿದ್ದಾರೆ. ಹುಣಸೂರು ತಾಲ್ಲೂಕಿನ ಗುರುಪುರ ಉಪಕೇಂದ್ರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನಾಗೇಂದ್ರ ಎಂಬುವರು ತಾಲ್ಲೂಕಿನಾದ್ಯಂತ ಡೆಂಘೀ ವಿರುದ್ಧ ಜಾಗೃತಿ ಮೂಡಿಸುತ್ತಿದ್ದರು. ಇದೀಗ ಅವರೇ ಡೆಂಘೀಗೆ ಬಲಿಯಾಗಿದ್ದಾರೆ.
ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಡೆಂಘೀ ಪ್ರಕರಣಗಳಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗಿದ್ದು, ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ 512 ಡೆಂಘೀ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲಾಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರತಿದಿನ ತಪಾಸಣೆ ನಡೆಸಲಾಗುತ್ತಿದೆ. ಶಿವಮೊಗ್ಗದಲ್ಲೂ ಕೂಡ ಆಸ್ಪತ್ರೆಗಳು ರೋಗಿಗಳಿಂದ ತುಂಬಿದೆ.
ಈವರೆಗೆ 83 ಪ್ರಕರಣಗಳು ದಾಖಲಾಗಿವೆ. ರೋಗಕ್ಕೆ ಅಗತ್ಯವಾದ ವೈಟ್ ಪ್ಲೇಟ್‌ಲೇಟ್ ಸಂಗ್ರಹಿಸಿಡುವಂತೆ ಸೂಚಿಸಲಾಗಿದೆ. ಹಾವೇರಿ ಜಿಲ್ಲೆಯಲ್ಲಿ ಈ ರೋಗದಿಂದ ಈಗಾಗಲೇ ಇಬ್ಬರು ಸಾವನ್ನಪ್ಪಿದ್ದು, 463 ಮಂದಿ ಡೆಂಘೀ ಬಾಧಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿತ್ರದುರ್ಗ, ದಕ್ಷಿಣ ಕನ್ನಡದ ಆಸ್ಪತ್ರೆಗಳಲ್ಲಿ ಡೆಂಘೀ ರೋಗಗಳಿಗೆ ಪ್ರತ್ಯೇಕ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಡೆಂಘೀ ಅಬ್ಬರ ಜೋರಾಗುತ್ತಿದೆ. ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗುತ್ತಿದ್ದು , ಬಿಬಿಎಂಪಿ, ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮ ವಹಿಸಿವೆ. ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿರುವುದರಿಂದ ನೀರು ತುಂಬಿಕೊಳ್ಳುವುದರಿಂದ ಸೊಳ್ಳೆಗಳ ಸಂಖ್ಯೆ ಹೆಚ್ಚಾಗಿ ಡೆಂಘೀ ಹರಡಲು ಕಾರಣವಾಗುತ್ತದೆ.
ಈ ಹಿನ್ನೆಲೆಯಲ್ಲಿ ಮನೆಗಳ ಸುತ್ತಮುತ್ತ ಮತ್ತು ಖಾಲಿ ಜಾಗಗಳಲ್ಲಿ ಸ್ವಚ್ಛತೆ ಕಾಪಾಡಲು ಸೂಚನೆ ನೀಡಲಾಗಿದೆ. ಖಾಸಗಿ ಮಾಲೀಕತ್ವದ ಜಾಗಗಳಲ್ಲಿ ಸ್ವಚ್ಚತೆ ಕಾಪಾಡದವರಿಗೆ ದಂಡ ವಿಧಿಸಲು ಬಿಬಿಎಂಪಿ ಮುಂದಾಗಿದೆ. ಖಾಸಗಿಯವರ ನಿವೇಶನ ಮತ್ತು ಸ್ವತ್ತುಗಳಲ್ಲಿ ಸೊಳ್ಳೆ ಉತ್ಪತ್ತಿ ಕಂಡುಬಂದಲ್ಲಿ ಮೊದಲಿಗೆ ಎಚ್ಚರಿಕೆ ನೀಡಲಾಗುತ್ತದೆ. ಇದಕ್ಕೆ ಸ್ಪಂದಿಸದಿದ್ದರೆ 50 ರೂ. ದಂಡ ವಿಧಿಸಲಾಗುತ್ತದೆ. ನಂತರ ಸ್ಥಳ ಸ್ವಚ್ಚವಾಗುವವರೆಗೂ ಪ್ರತಿನಿತ್ಯ 15 ರೂ. ದಂಡ ವಿಧಿಸಲು ತೀರ್ಮಾನಿಸಲಾಗಿದೆ.
ಕಳೆದ ಏಪ್ರಿಲ್‌ನಿಂದ ಮೇ 10ರವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 1974 ತಪಾಸಣೆಗಳನ್ನು ನಡೆಸಲಾಗಿದ್ದು, 930 ಜನರಿಗೆ ಡೆಂಘೀ ಲಕ್ಷಣಗಳು ಕಂಡುಬಂದಿವೆ. ನಿರ್ಲಕ್ಷ್ಯ ಮಾಡಿದರೆ ಇನ್ನೂ ಹೆಚ್ಚಳವಾಗುವ ಸಾಧ್ಯತೆ ಇದೆ. ಬೊಮನಹಳ್ಳಿ ವಲಯದಲ್ಲಿ 20, ದಾಸರಹಳ್ಳಿ 2, ಮಹದೇವಪುರ 97, ಆರ್‌ಆರ್‌ನಗರ 18, ದಕ್ಷಿಣ ವಲಯ 453, ಪಶ್ಚಿಮ ವಲಯ 99, ಯಲಹಂಕದಲ್ಲಿ 17 ಡೆಂಘೀ ಪ್ರಕರಣಗಳು ದಾಖಲಾಗಿವೆ.