ಬೆಂಗಳೂರು,ಮಾ.22- ಸಾರ್ವಜನಿಕರ ಜೀವ ರಕ್ಷಣೆ ಮಾಡಬೇಕಾದ ಆರೋಗ್ಯ ಇಲಾಖೆಯೇ ಭ್ರೂಣ ಪತ್ತೆ-ಹತ್ಯೆ ಪ್ರಕರಣದಲ್ಲಿ ಶಾಮೀಲಾಗಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಆರೋಗ್ಯ ಇಲಾಖೆ ಮತ್ತು ಸರ್ಕಾರದ ವಿರುದ್ಧ ಸಾಲುಸಾಲು ಪೋಸ್ಟ್ ಗಳನ್ನು ಮಾಡಿ ಕಿಡಿಕಾರಿದ್ದಾರೆ.
ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬಂತೆ ಸಾರ್ವಜನಿಕರ ಜೀವ ರಕ್ಷಣೆ ಮಾಡಬೇಕಾದ ಆರೋಗ್ಯ ಇಲಾಖೆಯೇ ಜಾಲದಲ್ಲಿ ಶಾಮೀಲಾಗಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವಕ್ತಪಡಿಸಿದ್ದಾರೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೇ, ಭ್ರೂಣ ಹತ್ಯೆ ಪ್ರಕರಣದ ವರದಿ ಸಲಿಸಬಾರದು ಎಂದು ಇಷ್ಟೊಂದು ಒತ್ತಡ ಹೇರುತ್ತಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಕಾರಿಗೆ ಯಾರ ಕುಮ್ಮಕ್ಕಿದೆ, ಯಾವ ಬೆಂಬಲದಿಂದ ಅಕಾರಿಗಳ ಈ ಕಳ್ಳಾಟ ನಡೆಯುತ್ತಿದೆ? ಎಂದು ಪ್ರಶ್ನಿಸಿದ್ದಾರೆ.
ಇದನ್ನೆಲ್ಲಾ ನೋಡುತ್ತಿದ್ದರೆ ರಾಜ್ಯದಲ್ಲಿ ತಾಂಡವವಾಡುತ್ತಿರುವ ಅಮಾನುಷ ಭ್ರೂಣ ಪತ್ತೆ-ಹತ್ಯೆ ಜಾಲವನ್ನು ಭೇದಿಸಲು ಹಿಂದೇಟು ಹಾಕುತ್ತಿರುವ ಕಾಂಗ್ರೆಸ್ ಸರ್ಕಾರ ಕಾಣದ ಕೈಗಳ ಒತ್ತಡಕ್ಕೆ ಮಣಿದು ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ ಎಂಬ ಅನುಮಾನ ಮೂಡುತ್ತಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣದ ಆಳ-ಅಗಲ, ಗಂಭೀರತೆ, ಮತ್ತು ಇದರ ಹಿಂದಿರುವ ಪ್ರಭಾವಿ ಶಕ್ತಿಗಳನ್ನು ಅಂದಾಜಿಸಿಯೇ ನಾನು ಈ ಪ್ರಕರಣದ ತನಿಖೆಗೆ ಎಸ್ ಐಟಿ ರಚಿಸಬೇಕು, ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು ಎಂದು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಒತ್ತಾಯಿಸಲಾಗಿದೆ.
ಮಹಿಳೆಯರ ವೋಟಿಗಾಗಿ ಅವರ ಮೂಗಿಗೆ ತುಪ್ಪ ಸವರುವ ಶಕ್ತಿ, ಗೃಹಲಕ್ಷ್ಮಿ ಗ್ಯಾರಂಟಿಗಳನ್ನು ನೀಡಿದರೆ ಮಹಿಳೆಯರ ಸಬಲೀಕರಣ ಆಗುವುದಿಲ್ಲ ಸಿಎಂ ಸಿದ್ದರಾಮನವರೇ, ಹುಟ್ಟುವ ಮೊದಲೇ ಹೆಣ್ಣು ಮಕ್ಕಳ ಪ್ರಾಣ ಕಸಿದುಕೊಳ್ಳುವ ಈ ಅಮಾನುಷ ಜಾಲವನ್ನು ಭೇದಿಸುವ ಮೂಲಕ ಮಹಿಳಾ ಸಬಲೀಕರಣದ ಬಗ್ಗೆ ತಮ್ಮ ನಿಜವಾದ ಬದ್ಧತೆ ತೋರಿಸಿ ಎಂದು ಸವಾಲು ಹಾಕಿದ್ದಾರೆ.