ಬೆಂಗಳೂರು, ಅ.12- ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಗೊಲ್ಲಪಲ್ಲಿ ಗ್ರಾಮದ ಬಳಿ ಇಂದು ಬೆಳಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ದೇವದುರ್ಗ ಕ್ಷೇತ್ರದ ಜೆಡಿಎಸ್ ಶಾಸಕಿ ಕರೆಮ ನಾಯಕ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಶಾಸಕರು ಇಂದು ಬೆಳಗ್ಗೆ ಸುಮಾರು 8 ಗಂಟೆ ಸಂದರ್ಭದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ದೇವದುರ್ಗದಿಂದ ಹುಬ್ಬಳ್ಳಿಗೆ ಕಾರಿನಲ್ಲಿ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಗೊಲ್ಲಪಲ್ಲಿ ಗ್ರಾಮದ ಬಳಿ ಶಾಸಕರ ಕಾರು ಚಲಿಸುತ್ತಿತ್ತು. ಆಗ ಅವರ ಮುಂದೆ ಹೋಗುತ್ತಿದ್ದ ಮತ್ತೊಂದು ಕಾರಿಗೆ ನಾಯಿ ಅಡ್ಡ ಬಂದಿದ್ದರಿಂದ ಚಾಲಕ ದಿಢೀರನೆ ಬ್ರೇಕ್ ಹಾಕಿದ್ದಾನೆ.
ಆ ಸಂದರ್ಭದಲ್ಲಿ ಇವರ ಕಾರು ಮುಂದೆ ಚಲಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಅಪಘಾತದಲ್ಲಿ ಎರಡೂ ಕಾರುಗಳು ಜಖಂಗೊಂಡಿವೆ. ನಂತರ ಶಾಸಕರು ಕಾರಿನಲ್ಲಿ ಹುಬ್ಬಳ್ಳಿ ಕಡೆ ಪ್ರಯಾಣ ಬೆಳೆಸಿದ್ದಾರೆ. ಸುದ್ದಿ ತಿಳಿದ ಹಟ್ಟಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.