Friday, May 9, 2025
Homeರಾಜ್ಯಪ್ರಧಾನಿ ಮೋದಿ ನಾಯಕತ್ವಕ್ಕೆ ದೇವೇಗೌಡರ ಮೆಚ್ಚುಗೆ

ಪ್ರಧಾನಿ ಮೋದಿ ನಾಯಕತ್ವಕ್ಕೆ ದೇವೇಗೌಡರ ಮೆಚ್ಚುಗೆ

Deve Gowda praises PM Modi's leadership

ಬೆಂಗಳೂರು, ಮೇ 9 – ಕಾಶೀರದ ಪೆಹಲ್ಗಾಮ್‌ನಲ್ಲಿ ಉಗ್ರರು ಪ್ರವಾಸಿಗರ ಮೇಲೆ ನಡೆಸಿದ ದಾಳಿಯ ಹಿನ್ನೆಲೆಯಲ್ಲಿ ಉಗ್ರರ ಅಡುಗುತಾಣಗಳ ಮೇಲೆ ಭಾರತೀಯ ಸೇನೆ ಆಪರೇಷನ್‌ ಸಿಂಧೂರ ನಡೆಸಿರುವುದಕ್ಕೆ ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡರು ಮೆಚ್ಚುಗೆ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಪಾಕಿಸ್ತಾನದೊಂದಿಗಿನ ಯುದ್ಧ ಸನ್ನಿವೇಶದಲ್ಲಿ ಸಮರ್ಥ ನಾಯಕತ್ವ ವಹಿಸಿದ್ದೀರಿ ಎಂದು ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ಶ್ಲಾಘಿಸಿದ್ದಾರೆ. ಪೆಹಲ್ಗಾಮ್‌ನ ಉಗ್ರರ ದಾಳಿಗೆ ಮೇ 7ರಂದು ಭಾರತೀಯ ಸೇನೆ ತೆಗೆದುಕೊಂಡ ಪ್ರತೀಕಾರ ಕ್ರಮವನ್ನು ಶ್ಲಾಘಿಸುವುದಾಗಿ ಹೇಳಿದ್ದಾರೆ.

ಈ ವಿಚಾರದಲ್ಲಿ ಮೊದಲ ದಿನದಿಂದಲೂ ನೀವು ಕೈಗೊಳ್ಳುತ್ತಿರುವ ನಿರ್ಣಾಯಕ ಮತ್ತು ಪ್ರಬುದ್ಧ ಕ್ರಮಗಳನ್ನು ನಾನು ಗಮನಿಸುತ್ತಿದ್ದೇನೆ. ಉಗ್ರರ ದಾಳಿ ವಿಚಾರ ತಿಳಿಯುತ್ತಿದ್ದಂತೆ ನೀವು ಸೌದಿ ಅರೇಬಿಯಾದ ಭೇಟಿಯನ್ನು ಮೊಟಕುಗೊಳಿಸಿ ಸ್ವದೇಶಕ್ಕೆ ಮರಳಿ ಕಾರ್ಯತಂತ್ರದ ಸಭೆಗಳನ್ನು ನಡೆಸಿದ್ದೀರಿ. ಅಲ್ಲದೆ, ಅಂತರರಾಷ್ಟ್ರೀಯ ಬೆಂಬಲ ಕ್ರೋಡೀಕರಿಸಿ ನಮ ಸೇನಾಪಡೆಗಳಿಗೆ ಸ್ಫೂರ್ತಿ ತುಂಬಿರುವುದನ್ನು ನೋಡಿದ್ದೇನೆ. ನೀವು ಐರೋಪ್ಯ ರಾಷ್ಟ್ರಗಳ ಪ್ರವಾಸವನ್ನು ರದ್ದುಗೊಳಿಸಿ ಇಂತಹ ತುರ್ತು ಪರಿಸ್ಥಿತಿಯಲ್ಲಿ ದೇಶ ಸೇವೆಯಲ್ಲಿ ತೊಡಗಿಕೊಂಡಿದ್ದೀರಿ ಎಂದು ದೇವೇಗೌಡರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆಳವಾದ ಆಧ್ಯಾತಿಕ ಶಕ್ತಿ ಮತ್ತು ನಿರಂತರ ಪ್ರಾರ್ಥನೆಯ ಬಲವಿಲ್ಲದಿದ್ದರೆ, ಇಂಥ ಸನ್ನಿವೇಶದಲ್ಲಿ ಸಮತೋಲ ಸಾಧಿಸುವುದು ಕಷ್ಟಕರ ಎಂಬುದು ನನಗೆ ತಿಳಿದಿದೆ. ನೀವು ಆಧ್ಯಾತಿಕವಾಗಿ ಶಕ್ತರಾಗಿದ್ದು, ಈ ಹಿಂದೆ ಕೂಡ ನಿಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದೀರಿ ಎಂದು ಅವರು ಪ್ರಶಂಸಿಸಿದ್ದಾರೆ.

ದೇವರು ನಿಮೊಂದಿಗೆ ಮತ್ತು ನಮ ಮಹಾನ್‌ ದೇಶದ ಜೊತೆಗಿರಲಿ. ಭಯೋತ್ಪಾದನೆಯಂತಹ ಅಧರ್ಮದ ವಿರುದ್ಧ ಧರ್ಮಯುದ್ಧ ಸಾರಿರುವ ನಮ ದೇಶವು ಒಂದು ಶಾಂತಿಪ್ರಿಯ ರಾಷ್ಟ್ರವಾಗಿ ವಿಶ್ವಕ್ಕೆ ಸದಾಕಾಲ ಸಕಾರಾತಕ ಬೆಳಕನ್ನು ಪಸರಿಸಿದೆ.ಆದರೆ, ಯಾರಾದರೂ ಇದನ್ನು ದೌರ್ಬಲ್ಯವೆಂದು ಭಾವಿಸಿದ್ದರೆ, ಅವರಿಗೆ ಈಗ ನಮ ಸಾಮರ್ಥ್ಯದ ಅರಿವಾಗಿರಬೇಕು ಎಂದು ಪರೋಕ್ಷವಾಗಿ ಪಾಕಿಸ್ತಾವನ್ನು ಅವರು ದೂಷಿಸಿದ್ದಾರೆ.

ನಾವು ಎದುರಿಸುತ್ತಿರುವ ಸವಾಲುಗಳು ಖಂಡಿತವಾಗಿಯೂ ಇಲ್ಲಿಗೇ ಕೊನೆಗೊಳ್ಳದಿರಬಹುದು. ಆದರೆ, ನಾವೆಲ್ಲರೂ ಒಂದು ರಾಷ್ಟ್ರವಾಗಿ ಒಗ್ಗಟ್ಟಾಗಿರುವುದು ಸಮಾಧಾನದ ಸಂಗತಿಯಾಗಿದೆ. ನಾವು ಒಟ್ಟಿಗೆ ಕಷ್ಟಪಡುತ್ತೇವೆ. ಆದರೆ, ನಾವು ಒಂದು ರಾಷ್ಟ್ರವಾಗಿ ಮತ್ತು ಒಂದು ಜನತೆಯಾಗಿ ಒಟ್ಟಾಗಿ ಪುಟಿದೇಳುತ್ತೇವೆ ಎಂದು ಗೌಡರು ಪತ್ರದಲ್ಲಿ ತಿಳಿಸಿದ್ದಾರೆ.

RELATED ARTICLES

Latest News