Tuesday, February 25, 2025
Homeರಾಜ್ಯಗೋದಾವರಿ-ಕಾವೇರಿ ಜೋಡಣೆಗೆ ರಾಜ್ಯಸಭೆಯಲ್ಲಿ ದೇವೇಗೌಡರ ಆಗ್ರಹ

ಗೋದಾವರಿ-ಕಾವೇರಿ ಜೋಡಣೆಗೆ ರಾಜ್ಯಸಭೆಯಲ್ಲಿ ದೇವೇಗೌಡರ ಆಗ್ರಹ

Deve Gowda's demand for Godavari-Cauvery linking


ನವದೆಹಲಿ, ಫೆ.14-ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆಯನ್ನು ರಾಜ್ಯಸಭೆ ಮತ್ತೆ ಪ್ರಸ್ತಾಪಿಸಿದ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರು, ನೀರಿನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಗೋದಾವರಿ-ಕಾವೇರಿ ಜೋಡಣೆಗೆ ಆದ್ಯತೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಅನಾರೋಗ್ಯದ ನಡುವೆಯೂ ರಾಜ್ಯಸಭೆಯಲ್ಲಿ ನಿನ್ನೆ ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಅವರು, ಬೆಂಗಳೂರಿನಲ್ಲಿ ನೀರಿನ ಟ್ಯಾಂಕರ್‌ಗಳು ಬಡ ನಿವಾಸಿಗಳನ್ನು ಶೋಷಿಸುತ್ತಿವೆ ಎಂಬ ಅಂಶವನ್ನು ಸದನದ ಗಮನಕ್ಕೆ ತಂದರು.

ಹಣಕಾಸು ಸಚಿವರು ಕುಡಿಯುವ ನೀರಿನ ಯೋಜನೆಗಳಿಗೆ 1,400 ಕೋಟಿ ಮಂಜೂರು ಮಾಡಿದ್ದಾರೆ. ಆದರೆ ದೀರ್ಘಾವಧಿಯ ನೀರಿನ ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ಯೋಜನೆ ಅಗತ್ಯವಾಗಿದೆ ಎಂದ ಅವರು, ಇಡೀ ರಾಷ್ಟ್ರದ ಎಲ್ಲಾ ವರ್ಗಗಳ ಜನರಿಗೆ ಶಕ್ತಿ ತುಂಬುವ ಆಯವ್ಯಯ ಮಂಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನದಿ ಜಲ ಸಂಪನೂಲ ಸದ್ವಿನಿಯೋಗಕ್ಕೆ ಎಲ್ಲಾ ಪರಿಣಾಮಕಾರಿ ಕ್ರಮಗಳ ಅಗತ್ಯವಿದೆ. ಅದಕ್ಕೆ ದೀರ್ಘಾವಧಿ ಕಾರ್ಯಕ್ರಮಗಳ ಅನುಷ್ಠಾನ ಅಗತ್ಯವಿದೆ. ಈ ನಿಟ್ಟಿನಲ್ಲಿ ಗೋದಾವರಿ-ಕಾವೇರಿ ನದಿ ಜೋಡಣೆ ಯೋಜನೆಗೆ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಿಂದ ಯುವಜನರು ನಗರಗಳಿಗೆ ವಲಸೆ ಬರುವವರ ಪ್ರಮಾಣ ಹೆಚ್ಚುತ್ತಲೇ ಇದೆ. ಬೆಂಗಳೂರಿನ ಜನಸಂಖ್ಯೆ ಈಗ 1.4 ಕೋಟಿಗೆ ಮುಟ್ಟಿದೆ. ಎಲ್ಲಾ ಯುವಕರು ತಮ ವಿದ್ಯಾಭ್ಯಾಸ ಮುಗಿದ ತಕ್ಷಣ ಹಳ್ಳಿಗಳನ್ನು ತೊರೆದು ನಗರಗಳಿಗೆ ಬಂದು ಸೇರುತ್ತಿದ್ದಾರೆ. ಇದು ಜೀವನೋಪಾಯದ ಸಮತೋಲನವನ್ನು ತಪ್ಪಿಸುತ್ತಿದೆ. ಯುವಕರಿಗೆ ತಮ ಪ್ರದೇಶಗಳಿಗಳಲ್ಲಿಯೇ ಹೆಚ್ಚೆಚ್ಚು ಉದ್ಯೋಗವಕಾಶ ಕಲ್ಪಿಸುವ ಅಗತ್ಯವಿದೆ ಎಂದು ಮಾಜಿ ಪ್ರಧಾನಿಗಳು ಸಲಹೆ ನೀಡಿದರು.

ಸಮತೋಲಿತ ಜೀವನೋಪಾಯ ಸೃಷ್ಟಿ ಮಾಡುವ ನಿಟ್ಟಿನಲ್ಲಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳನ್ನು ಬೆಂಬಲಿಸಲು ಹೆಚ್ಚು ಸೂಕ್ತವಾದ ಉಪಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಹಣಕಾಸು ಬೆಂಬಲ ಪಡೆಯುವಲ್ಲಿ ಅತಿಸಣ್ಣ, ಸಣ್ಣ ಕೈಗಾರಿಕೆಗಳು ಮಧ್ಯಮ ಗಾತ್ರದ ಕೈಗಾರಿಕೆಗಳೊಂದಿಗೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಉದ್ದೇಶಕ್ಕಾಗಿ ಪ್ರತ್ಯೇಕ ನೀತಿ, ಕಾರ್ಯಕ್ರಮಗಳನ್ನು ರೂಪಿಸುವ ಅಗತ್ಯ ತುಂಬಾ ಇದೆ ಎಂದು ಅವರು ತಿಳಿಸಿದರು.

ಹಲಸಿನ ಹಣ್ಣು, ನೇರಳೆ, ಹುಣಸೆಹಣ್ಣು ಮಂಡಳಿ ರಚಿಸಿ:
ಕೃಷಿ ಉತ್ಪನ್ನಗಳಿಗೆ ನಾವು ಹೆಚ್ಚು ಬೆಂಬಲ ನೀಡುವುದನ್ನು ನಾವು ಮುಂದುವರಿಸಬೇಕು. ಬಿಹಾರದಲ್ಲಿ ಮಖಾನಾ ಮಂಡಳಿ ರಚನೆ ಮಾಡಿರುವುದನ್ನು ನಾನು ಸ್ವಾಗತ ಮಾಡುತ್ತೇನೆ ಎಂದ ದೇವೇಗೌಡರು, ಅದೇ ರೀತಿ ಹಲಸಿನ ಹಣ್ಣು, ನೇರಳೆ, ಹುಣಸೆಹಣ್ಣು ಮಂಡಳಿ ರಚಿಸಬೇಕು ಎಂದು ಒತ್ತಾಯ ಮಾಡಿದರು.

ಅತಿ ಕಡಿಮೆ ಬಂಡವಾಳದಿಂದ ಮಖಾನಾ ಬೆಳೆಯಲಾಗುತ್ತಿದೆ. ಇದರಿಂದ ರೈತರಿಗೆ ಹೆಚ್ಚು ಅನುಕೂಲ ಆಗುತ್ತಿದೆ. ಮಂಡಳಿ ರಚನೆಯಿಂದ ಮತ್ತಷ್ಟು ಅನುಕೂಲ ಆಗುತ್ತದೆ. ಹೀಗಿದ್ದ ಮೇಲೆ ಕನಿಷ್ಠ ಬಂಡವಾಳದಿಂದ ನೈಸರ್ಗಿಕವಾಗಿ ಬೆಳೆಯಲಾಗುವ ಹಲಸಿನ ಹಣ್ಣು, ನೇರಳೆ ಹಾಗೂ ಹುಣಸೆಹಣ್ಣು ಮಂಡಳಿಯನ್ನು ರಚಿಸಬಾರದೇಕೆ ಎಂದು ಮಾಜಿ ಪ್ರಧಾನಿಗಳು ಸಲಹೆ ನೀಡಿದರು.
ತಮ್ಮ ಭಾಷಣದ ಕೊನೆಯಲ್ಲಿ ದೀರ್ಘಾವಧಿಯ ಆರ್ಥಿಕ ಸ್ಥಿರತೆಯತ್ತ ಗಮನ ಹರಿಸುವಂತೆ ಸರಕಾರಕ್ಕೆ ಸಲಹೆ ನೀಡಿದರಲ್ಲದೆ; ನಾವು ಅಲ್ಪಾವಧಿಯ ಜನಪರ ಕ್ರಮಗಳನ್ನು ಮೀರಿ ಮುನ್ನಡೆಯಬೇಕು ಮತ್ತು ಭವಿಷ್ಯದ ಪೀಳಿಗೆಗೆ ಆಸ್ತಿಗಳನ್ನು ನಿರ್ಮಿಸಬೇಕು ಎಂದರು.

RELATED ARTICLES

Latest News