Friday, January 10, 2025
Homeಇದೀಗ ಬಂದ ಸುದ್ದಿನಾಡಿನೆಲ್ಲೆಡೆ ವೈಕುಂಠ ಏಕಾದಶಿಯ ವೈಭವ..

ನಾಡಿನೆಲ್ಲೆಡೆ ವೈಕುಂಠ ಏಕಾದಶಿಯ ವೈಭವ..

ಬೆಂಗಳೂರು,ಜ.10- ನಾಡಿನೆಲ್ಲೆಡೆ ವೈಕುಂಠ ಏಕಾದಶಿಯ ವೈಭವ…. ಗೋವಿಂದ ನಾಮಸರಣೆ… ಪ್ರತೀವರ್ಷ ವೈಕುಂಠ ಏಕಾದಶಿಯನ್ನು ಭಕ್ತರು ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ. ಧನುರ್ಮಾಸದಲ್ಲಿ ಶುಕ್ಲಪಕ್ಷದ ಈ ಪುಣ್ಯದಿನವು ಬರುತ್ತದೆ. ದೇಶದಾದ್ಯಂತ ಹಲವು ದೇಗುಲಗಳಲ್ಲಿ ಶ್ರದ್ಧಾಭಕ್ತಿಯಿಂದ ವೈಕುಂಠ ಏಕಾದಶಿ ನಡೆಯುತ್ತದೆ.

ಇಂದು ವೈಕುಂಠ ದ್ವಾರದ ಮೂಲಕ ಭಗವಂತನ ದರ್ಶನ ಮಾಡಿದರೆ ಮೋಕ್ಷ ಸಿಗುತ್ತದೆ ಎಂದು ಪ್ರತೀತಿ ಇರುವುದರಿಂದ ವೆಂಕಟೇಶ್ವರ ಸ್ವಾಮಿಯ ದರ್ಶನ ಮಾಡಿ ಜನ ಪುನೀತರಾಗುತ್ತಾರೆ.
ತಿರುಪತಿ ತಿರುಮಲ ದೇವಸ್ಥಾನದಲ್ಲಿ ವೆಂಕಟೇಶ್ವರನ ದರ್ಶನಕ್ಕೆ ಭಕ್ತಸಾಗರವೇ ಹರಿದುಬಂದಿತ್ತು. ವೈಕುಂಠ ದ್ವಾರದ ಮೂಲಕ ತಿಮಪ್ಪನ ದರ್ಶನಕ್ಕೆ ಬೆಳಿಗ್ಗೆಯಿಂದಲೇ ಜನ ಸಾಗರೋಪಾದಿಯಲ್ಲಿ ಬಂದು ದರ್ಶನ ಪಡೆದು ಧನ್ಯರಾದರು. ದೇಶದ ಹಲವು ದೇಗುಲಗಳಲ್ಲಿ ವಿಶೇಷ ಪೂಜೆ, ಪುನಸ್ಕಾರಗಳು ಜರುಗಿದವು. ಬೆಳಗಿನ ಜಾವ 3.30ರಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತಗಣ ವೈಕುಂಠ ದ್ವಾರದ ಮೂಲಕ ಭಗವಂತನ ದರ್ಶನ ಮಾಡಿ ವೆಂಕಟೇಶ್ವರ ಕೃಪೆಗೆ ಪಾತ್ರರಾದರು.

ಅರಸೀಕೆರೆ ಸಮೀಪದ ಮಾಲೆಕಲ್‌ ಚಿಕ್ಕತಿರುಪತಿ, ಕೋಲಾರದ ವೆಂಕಟರಮಣ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತಗಣ ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡು ದರುಶನ ಪಡೆದು ಪ್ರಸಾದ ಸ್ವೀಕರಿಸಿದರು. ರಾಜಧಾನಿ ಬೆಂಗಳೂರಿನಲ್ಲೂ ವೈಕುಂಠ ಏಕಾದಶಿಯ ಆಚರಣೆ ವಿಜೃಂಭಣೆಯಿಂದ ನಡೆಯಿತು. ಇಸ್ಕಾನ್‌ನ ವೆಂಕಟೇಶ್ವರ, ಮಲ್ಲೇಶ್ವರದ ವಯ್ಯಾಲಿಕಾವಲ್‌ನ ತಿರುಪತಿ ತಿರುಮಲ ದೇವಾಲಯದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ತಿಮಪ್ಪನ ದರುಶನ ಪಡೆದರು. ಮುಂಜಾನೆಯಿಂದಲೇ ಸರತಿಸಾಲಿನಲ್ಲಿ ನಿಂತು ವೈಕುಂಠ ದ್ವಾರದ ಮೂಲಕ ವೆಂಕಟೇಶ್ವರನ ದರ್ಶನ ಪಡೆದರು.

ಮಹಾಲಕ್ಷ್ಮಿಲೇಔಟ್‌ನಲ್ಲಿರುವ ವೆಂಕಟೇಶ್ವರನ ಸನ್ನಿಧಾನಕ್ಕೂ ಜನಸಾಗರ ಹರಿದುಬಂದಿತ್ತು. ಚಾಮರಾಜಪೇಟೆ ವೆಂಕಟರಮಣ ದೇವಾಲಯ, ಮುದ್ದಯ್ಯನಪಾಳ್ಯದ ಶ್ರೀಲಕ್ಷ್ಮಿಮಹಾಕ್ಷೇತ್ರ, ವೆಂಕಟೇಶ್ವರ ದೇವಾಲಯ, ರಾಜಾಜಿನಗರದ ಕೈಲಾಸ ವೈಕುಂಠ ಮಹಾಕ್ಷೇತ್ರ, ಮೈಸೂರು ಬ್ಯಾಂಕ್‌ ವೃತ್ತದಲ್ಲಿರುವ ದೇವಾಲಯ, ಕಾಮಾಕ್ಷಿಪಾಳ್ಯದ ವೃಷಭಾವತಿ ನಗರದಲ್ಲಿರುವ ಸಣ್ಣಕ್ಕಿಬೈಲಿನ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಾಲಯ ಸೇರಿದಂತೆ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ವಿಜೃಂಭಣೆಯಿಂದ ನೆರವೇರಿದವು. ಅಪಾರಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ಪುನೀತರಾದರು.

RELATED ARTICLES

Latest News