ಬೆಂಗಳೂರು,ಸೆ.8- ಖಗ್ರಾಸ ಚಂದ್ರಗ್ರಹಣ ಪೂರ್ಣಗೊಂಡ ಬಳಿಕ ಗ್ರಹಣ ಶಾಂತಿಗಾಗಿ ಇಂದು ಬೆಳಿಗ್ಗೆ ದೇವಾಲಯಗಳಿಗೆ ಭಕ್ತರ ದಂಡೇ ಹರಿದುಬಂದಿತ್ತು.ಚಂದ್ರಗ್ರಹಣ ಹಿನ್ನೆಲೆಯಲ್ಲಿ ನಿನ್ನೆ ಮಧ್ಯಾಹ್ನದಿಂದಲೇ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ದೇವಾಲಯಗಳ ಬಾಗಿಲುಗಳು ಬಂದ್ ಮಾಡಲಾಗಿತ್ತು.
ಗ್ರಹಣ ಮುಗಿದ ಕೂಡಲೇ ದೇವಾಲಯವನ್ನು ಸ್ವಚ್ಛಗೊಳಿಸಿ ಇಂದು ಬೆಳಿಗ್ಗೆ ಜಲಾಭಿಷೇಕದೊಂದಿಗೆ ವಿವಿಧ ಪೂಜಾ ಕಾರ್ಯಗಳು ನೆರವೇರಿದವು.ಚಿಕ್ಕಮಗಳೂರು ಜಿಲ್ಲೆಯ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ನಿರಂತರವಾಗಿ ಜಲಾಭಿಷೇಕ ನಡೆಸಲಾಯಿತು. ಗ್ರಹಣ ಆರಂಭದಿಂದ ಅಂತ್ಯದವರೆಗೂ ಅನ್ನಪೂರ್ಣೇಶ್ವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ ಆತಲಿಂಗನ ದರ್ಶನಕ್ಕೆ ಭಕ್ತಸಾಗರವೇ ಹರಿದುಬಂದಿದೆ. ಬಾದಾಮಿಯ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಮಹಾಕೂಟದಲ್ಲಿ ಭಕ್ತರು ಲೋಕದ ಒಳಿತಿಗಾಗಿ ನೀರಿನಲ್ಲಿ ಧ್ಯಾನ ಮಾಡಿದರು. ಪುಷ್ಕರಣಿಯಲ್ಲಿ ಸಾವಿರಾರು ಭಕ್ತರು ಮಿಂದೆದ್ದು ದೇವರ ಜಪ ಮಾಡಿದರು.
ಇದೇ ರೀತಿ ಬೆಂಗಳೂರಿನ ಗವಿಗಂಗಾಧರೇಶ್ವರ, ಕಾಡು ಮಲ್ಲೇಶ್ವರ, ರಾಮಮಂದಿರ, ನಿಮಿಷಾಂಬ, ರಾಜರಾಜೇಶ್ವರಿ ದೇವಸ್ಥಾನ, ಮೆಜೆಸ್ಟಿಕ್‌ನ ಅಣ್ಣಮ ದೇವಾಲಯ, ಮೈಸೂರು ರಸ್ತೆಯ ಗಾಳಿ ಆಂಜನೇಯ ದೇವಾಲಯ, ಚಿಕ್ಕಬಳ್ಳಾಪುರ ಜಿಲ್ಲೆಯ ಯೋಗ ಮತ್ತು ಭೋಗ ನಂದೀಶ್ವರ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಪೂಜಾ ಕೈಂಕರ್ಯಗಳು ನಡೆದವು.
ಮುಂಜಾನೆಯೇ ಭಕ್ತರ ದಂಡು ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಇನ್ನು ಗ್ರಹಣ ದೋಷವುಳ್ಳವರು ಅರ್ಚಕರಿಗೆ ಎಳ್ಳು, ಬೆಲ್ಲ, ಕಡ್ಲೆಬೇಳೆ, ಉದ್ದಿನಬೇಳೆ, ಎಳ್ಳೆಣ್ಣೆ, ತುಪ್ಪ, ದವಸ-ಧಾನ್ಯಗಳನ್ನು ದಾನ ಮಾಡಿದ್ದು ಸರ್ವೇ ಸಾಮಾನ್ಯವಾಗಿತ್ತು.
ಗ್ರಂಥಿಗೆ ಅಂಗಡಿಗಳಲ್ಲಿ ವ್ಯಾಪಾರ ಜೋರು :
ಗ್ರಹಣ ಹಿನ್ನೆಲೆಯಲ್ಲಿ ದೋಷವುಳ್ಳವರು ದಾನಕ್ಕಾಗಿ ದವಸ ಧಾನ್ಯ, ಎಣ್ಣೆ, ತುಪ್ಪ ಸೇರಿದಂತೆ ಮತ್ತಿತರ ಪೂಜಾ ಸಾಮಗ್ರಿಗಳ ಖರೀದಿಗಾಗಿ ಜನರು ಗ್ರಂಥಿಗೆ ಅಂಗಡಿಗಳಲ್ಲಿ ಖರೀದಿಸಿದ ದೃಶ್ಯಗಳು ಕಂಡುಬಂದವು.