ಪಾಟ್ನಾ, ಅ.28– ಛಾತ್ ಪೂಜೆಯ ಕೊನೆಯ ದಿನವಾದ ಇಂದು ಬಿಹಾರದಾದ್ಯಂತ ಇರುವ ಘಾಟ್‌ಗಳಲ್ಲಿ ಭಕ್ತರು ಪ್ರಾರ್ಥನೆ ಸಲ್ಲಿಸಿ ಪುನಿತರಾದರು. ನಾಲ್ಕು ದಿನಗಳ ಛಾತ್ ಪೂಜಾ ಉತ್ಸವದ ಪರಾಕಾಷ್ಠೆಯನ್ನು ಗುರುತಿಸುವ ಸಲುವಾಗಿ ಬಿಹಾರದಾದ್ಯಂತ ಲಕ್ಷಾಂತರ ಭಕ್ತರು ಇಂದು ಉದಯಿಸುತ್ತಿರುವ ಸೂರ್ಯನಿಗೆ ಬೆಳಗಿನ ಪ್ರಾರ್ಥನೆ ಸಲ್ಲಿಸಿದರು.
ಉದಯಿಸುತ್ತಿರುವ ಸೂರ್ಯನಿಗೆ ಉಷಾ ಅರ್ಘ್ಯ ಅರ್ಪಿಸಲು ಭಕ್ತರು ಬೆಳಗಿನ ಜಾವದಿಂದಲೇ ಗಂಗಾ ಮತ್ತು ಇತರ ಜಲಮೂಲಗಳ ದಡದಲ್ಲಿ ಜಮಾಯಿಸಿದರು.ಬಿಹಾರದ ಅತಿದೊಡ್ಡ ಹಬ್ಬವಾದ ಈ ಪೂಜೆಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪಾಟ್ನಾ ಜಿಲ್ಲಾಡಳಿತವು ನದಿಯ ಉದ್ದಕ್ಕೂ 100 ಕ್ಕೂ ಹೆಚ್ಚು ಘಾಟ್‌ಗಳಲ್ಲಿ ವಿಸ್ತಾರವಾದ ವ್ಯವಸ್ಥೆಗಳನ್ನು ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಟ್ನಾದ ವಿವಿಧ ಘಾಟ್‌ಗಳಲ್ಲಿ ಹಲವಾರು ವೈದ್ಯಕೀಯ ಶಿಬಿರಗಳನ್ನು ಸಹ ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಇಂದು ಬೆಳಿಗ್ಗೆ ತಮ್ಮ ಅಧಿಕೃತ ನಿವಾಸದಲ್ಲಿ ನಡೆದ ಛಾತ್ ಪೂಜಾ ಉತ್ಸವದಲ್ಲಿ ತಮ್ಮ ಕುಟುಂಬ ಸದಸ್ಯರೊಂದಿಗೆ ಭಾಗವಹಿಸಿದರು.
ರಾಜ್ಯ ರಾಜಧಾನಿಯಲ್ಲಿ ಹಲವಾರು ರಾಜಕಾರಣಿಗಳ ನಿವಾಸಗಳಲ್ಲಿ ಛಠ್ ಪೂಜೆಯನ್ನು ಆಚರಿಸಲಾಯಿತು.ನಾಲ್ಕು ದಿನಗಳ ಹಬ್ಬಗಳು ಅಕ್ಟೋಬರ್ 25 ರಂದು ೞನಹೈ ಖೈೞ ಆಚರಣೆಯೊಂದಿಗೆ ಪ್ರಾರಂಭವಾದವು. ಇದನ್ನು ಕಾರ್ತಿಕ ಶುಕ್ಲದ ಆರನೇ ದಿನ ಮತ್ತು ದೀಪಾವಳಿಯ ಆರು ದಿನಗಳ ನಂತರ ಆಚರಿಸಲಾಗುತ್ತದೆ.ಈ ಮಧ್ಯೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತಿತರರು ಛಾತ್ ಪೂಜೆಯ ಶುಭಾಷಯಗಳನ್ನು ಕೋರಿದ್ದಾರೆ.
