ಮುಂಬೈ, ಮಾ.4- ಸರಪಂಚ್ ಸಂತೋಷ್ ದೇಶಮುಖ್ ಹತ್ಯೆ ಪ್ರಕರಣದಲ್ಲಿ ಆಪ್ತ ಸಹಾಯಕ ಆರೋಪಿಯಗಿರುವುದರಿಂದ ನೀವು ರಾಜೀನಾಮೆ ನೀಡುವಂತೆ ಸಚಿವ ಧನಂಜಯ್ ಮುಂಡೆ ಅವರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೂಚನೆ ನೀಡಿದ್ದಾರೆ. ದೇಶಮುಖ್ ಹತ್ಯೆ ಪ್ರಕರಣದಲ್ಲಿ ಸಿಐಡಿ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಸಚಿವರ ಆಪ್ತ ಸಹಾಯಕ ವಾಲಿಕ್‌ಕರದ್ ಆರೋಪಿಯನ್ನಾಗಿ ಹೆಸರಿಸಿರುವ ಕಾರಣ ಉಪಮುಖ್ಯಮಂತ್ರಿ ಅಜಿತ್ ಪವಾರ್ ಕಳೆದ ರಾತ್ರಿ ಫಡ್ನವೀಸ್ ಅವರನ್ನು ಭೇಟಿ ಮಾಡಿ ಮಾತುಕತೆ ನಂತರ ಈ ಬೆಳವಣಿಗೆ ನಡೆದಿದೆ.
ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಮುಂಡೆ ಅವರು ಬೀಡ್ ಜಿಲ್ಲೆಯ ಪಾರ್ಲಿಯ ಕ್ಷೇತ್ರದ ಎನ್‌ಸಿಪಿ ಶಾಸಕರಾಗಿದ್ದಾರೆ. ಅವರು ಈ ಹಿಂದೆ ಬೀಡ್‌ನ ಉಸ್ತುವಾರಿ ಸಚಿವರಾಗಿದ್ದರು.
ಧನಂಜಯ್ ಮುಂಡೆ ಅವರನ್ನು ಇಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಫಡ್ನವೀಸ್ ಕೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿದೆ ಪ್ರಸ್ತುತ, ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಪುಣೆ ಜೊತೆಗೆ ಬೀಡ್ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾರೆ.
ಬೀಡ್‌ನ ಮಸಾಜೋಗ್ ಗ್ರಾಮದ ಸರಪಂಚ ದೇಶಮುಖ್ ಅವರನ್ನು ಕಳೆದ ವರ್ಷ ಡಿ. 9 ರಂದು ಅಪಹರಿಸಿ, ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿತ್ತು. ದೇಶಮುಖ್ ಹತ್ಯೆ ಮತ್ತು ಸಂಬಂಧಿತ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ) ಕಳೆದ ಫೆ.27 ರಂದು ಬೀಡ್ ಜಿಲ್ಲೆಯ ನ್ಯಾಯಾಲಯದಲ್ಲಿ 1,200 ಕ್ಕೂ ಹೆಚ್ಚು ಪುಟಗಳ ಆರೋಪಪಟ್ಟಿ ಸಲ್ಲಿಸಿದೆ. ಈವರೆಗೆ ಏಳು ಜನರನ್ನು ಬಂಧಿಸಲಾಗಿದೆ ಮತ್ತು ಎಂಸಿಒಸಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳಲ್ಲಿ ಒಬ್ಬರು ಇನ್ನೂ ತಲೆಮರೆಸಿಕೊಂಡಿದ್ದಾರೆ.