Friday, August 22, 2025
Homeರಾಜ್ಯಧರ್ಮಸ್ಥಳ ಪ್ರಕರಣ : ಡ್ಯಾಮೆಜ್‌ ಕಂಟ್ರೋಲ್‌ಗೆ ಮುಂದಾದ ಸರ್ಕಾರ

ಧರ್ಮಸ್ಥಳ ಪ್ರಕರಣ : ಡ್ಯಾಮೆಜ್‌ ಕಂಟ್ರೋಲ್‌ಗೆ ಮುಂದಾದ ಸರ್ಕಾರ

Dharamsthala case

ಬೆಂಗಳೂರು, ಆ.22- ಧರ್ಮಸ್ಥಳ ಶ್ರೀಕ್ಷೇತ್ರ ಕುರಿತಂತೆ ಅಪಪ್ರಚಾರ ಮಾಡಲು ಯತ್ನಿಸಿದವರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ರಾಜ್ಯ ಸರ್ಕಾರ ಡ್ಯಾಮೆಜ್‌ ಕಂಟ್ರೋಲ್‌ಗೆ ಮುಂದಾಗಿದೆ.
ನಿನ್ನೆ ಉಜರೆಯಲ್ಲಿ ಮಹೇಶ್‌ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಲಾಗಿದೆ. ಯೂ-ಟ್ಯೂಬರ್‌ ಸಮೀರ್‌ ಜಾಮೀನು ಪಡೆದು ಬಂಧನದಿಂದ ಬಚಾವ್‌ ಆಗಿದ್ದಾರೆ.

ಧರ್ಮಸ್ಥಳದ ಪ್ರಕರಣದಲ್ಲಿ ಎಸ್‌‍ಐಟಿ ತನಿಖೆ ನಡೆಯುತ್ತಿರುವಾಗ ಬಹಿರಂಗ ಹೇಳಿಕೆಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಅವಹೇಳನಕಾರಿ ಮತ್ತು ಪ್ರಚೋದನಕಾರಿ ಅಂಶಗಳನ್ನು ಪ್ರಚಾರ ಮಾಡಿದವರನ್ನು ಪಟ್ಟಿ ಮಾಡಲಾಗಿದ್ದು, ಕೆಲವರನ್ನು ಕರೆದು ಎಚ್ಚರಿಕೆ ನೀಡಲಾಗುತ್ತಿದೆ. ಇನ್ನೂ ಕೆಲವರ ಮೇಲೆ ಕ್ರಿಮಿನಲ್‌ ಪ್ರಕರಣಗಳಿದ್ದು, ಹಳೆಯ ಪ್ರಕರಣಗಳಲ್ಲಿ ಮತ್ತೆ ಬಂಧಿಸುವ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ.

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ಅನಾಮಧೇಯನ ಹೇಳಿಕೆ ಆಧರಿಸಿ, ಎಸ್‌‍ಐಟಿ ರಚಿಸಲಾಗಿತ್ತು. ಆರಂಭದಲ್ಲಿ ಅನಾಮಧೇಯನ ಹೇಳಿಕೆಯಲ್ಲಿ ಸತ್ಯಾಂಶಗಳು ಇರಬಹುದು ಎಂದು ಎಲ್ಲರೂ ಮೌನಕ್ಕೆ ಶರಣಾಗಿದ್ದರು. ಆತ ತೋರಿಸಿದ 17 ಸ್ಥಳಗಳಲ್ಲಿ ಉತ್ಖನನ ಮಾಡಿದ ಬಳಿಕ, ಯಾವುದೇ ಮಹತ್ವದ ಪುರಾವೆಗಳು ದೊರಕಿಲ್ಲ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾಗಿದೆ.

ಹಲವಾರು ವರ್ಷಗಳಿಂದ ಧರ್ಮಸ್ಥಳ ವಿರುದ್ಧ ವ್ಯವಸ್ಥಿತವಾದ ಷಡ್ಯಂತ್ರ ನಡೆಯುತ್ತಲೇ ಇದೆ ಎಂಬ ಆಕ್ಷೇಪಗಳಿದ್ದವು. ಈ ಮೊದಲು ಯುವತಿ ನಾಪತ್ತೆ ಪ್ರಕರಣದಲ್ಲಿ ತನಿಖೆ ಕೂಡ ಆಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅನಾಮಧೇಯನ ಮಾತಿನಲ್ಲಿ ಎಸ್‌‍ಐಟಿ ರಚನೆ ಮಾಡಿತ್ತು. ತನಿಖೆ ಆರಂಭಿಸಿದಾಗಲೇ ಸರ್ಕಾರದ ವಿರುದ್ಧ ಒಳಗೊಳಗೆ ಅಪಸ್ವರಗಳು ಕೇಳಿಬಂದಿದ್ದವು. ಹಿಂದು ಧಾರ್ಮಿಕ ಸ್ಪರ್ಧಾ ಕೇಂದ್ರಗಳನ್ನು ಉದ್ದೇಶಪೂರ್ವಕವಾಗಿ ಗುರಿ ಮಾಡಲಾಗುತ್ತಿದೆ ಎಂಬ ಟೀಕೆಗಳಿದ್ದವು.

ತನಿಖೆಯಲ್ಲಿ ನಿರೀಕ್ಷಿಸಿದ ಮಟ್ಟದ ಪುರಾವೆಗಳು ದೊರೆಯದೇ ಇರುವುದು ಮತ್ತು ಅನಾಮಧೇಯ ದೂರುದಾರನ ವಿರುದ್ಧ ಆತನ ಮೊದಲ ಪತ್ನಿಯೇ ಹೇಳಿಕೆ ನೀಡುತ್ತಿರುವುದು ಪ್ರಕರಣಕ್ಕೆ ಮಹತ್ವದ ತಿರುವು ನೀಡಿದೆ.ಬಿಜೆಪಿ ಎಸ್‌‍ಐಟಿ ತನಿಖೆಯನ್ನೇ ಗುರಿ ಮಾಡಿ ರೋಷಾವೇಶ ಪ್ರದರ್ಶಿಸುತ್ತಿದೆ. ಜೊತೆಗೆ ಕಾಂಗ್ರೆಸ್‌‍ ಸರ್ಕಾರವನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಮತ್ತಷ್ಟು ಹೋರಾಟಗಳನ್ನು ಸಂಘಟಿಸುತ್ತಿದೆ. ವಿಧಾನ ಮಂಡಲದ ಅಧಿವೇಶನದ ಬಳಿಕ ವಿಧಾನಸಭಾ ಕ್ಷೇತ್ರವಾರು ಹೋರಾಟಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ರಾಜಕೀಯವಾಗಿ ಎದುರಾಗಬಹುದಾದ ನಷ್ಟವನ್ನು ತಪ್ಪಿಸಲು ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುವವರ ವಿರುದ್ಧ ಕ್ರಮಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.

ಈ ಎಲ್ಲಾ ಷಡ್ಯಂತ್ರದ ಹಿಂದೆ ತಮಿಳುನಾಡಿನ ಸಂಸದ ಶಶಿಕಾಂತ್‌ ಸಂತಿಲ್‌ ಕೈವಾಡವಿದೆ ಎಂಬ ಆರೋಪಗಳಿವೆ.ಮಹೇಶ್‌ಶೆಟ್ಟಿ ತಿಮರೋಡಿ ಹಾಗೂ ಇತರರ ವಿರುದ್ಧ ಕ್ರಮಕೈಗೊಂಡಂತೆ ಸಂಚಿನ ಕೇಂದ್ರ ಬಿಂದುವಾಗಿರುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಎಷ್ಟೇ ಪ್ರಭಾವಿಗಳಾಗಿದ್ದರೂ, ಅವರನ್ನು ಬಂಧಿಸಿ ಕಾನೂನು ಕ್ರಮತೆಗೆದು ಕೊಳ್ಳಬೇಕು ಎಂಬುದು ಬಿಜೆಪಿ ಒತ್ತಾಯವಾಗಿದೆ.

ಈ ಹಿನ್ನೆಲೆಯಲ್ಲಿ ಆರಂಭದಲ್ಲೇ ಕೆಲವರ ವಿರುದ್ಧ ಕ್ರಮಕೈಗೊಳ್ಳುವ ಮೂಲಕ ಧರ್ಮಸ್ಥಳದ ವಿಚಾರದಲ್ಲಿ ವಿರೋಧ ಪಕ್ಷಗಳು ರಾಜಕೀಯ ಲಾಭ ಮಾಡಿಕೊಳ್ಳಲು ಅವಕಾಶ ನೀಡದಂತೆ ಕಾಂಗ್ರೆಸ್‌‍ ಸರ್ಕಾರ ಮುನ್ನೆಚ್ಚರಿಕೆ ವಹಿಸಲಾರಂಭಿಸಿದೆ.ಒಂದೆಡೆ ಡ್ಯಾಮೇಜ್‌ ಕಂಟ್ರೋಲ್‌ಗೆ ಬಂಧಿಸಲಾಗುತ್ತಿರುವ ವ್ಯಕ್ತಿಗಳ ಪರವಾಗಿರುವ ಗುಂಪು ಕಾಂಗ್ರೆಸ್‌‍ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿಯುವ ಸಾಧ್ಯತೆಗಳಿವೆ.

RELATED ARTICLES

Latest News