ಬೆಂಗಳೂರು, ಆ.16- ಧರ್ಮಸ್ಥಳದ ಸುತ್ತಮುತ್ತ ಶವಗಳನ್ನು ಹೂತಿಡಲಾಗಿದೆ ಎಂದು ಹೇಳಿದ್ದ ಅನಾಮಿಕನ ಪ್ರಕರಣದ ಕುರಿತು ವಿಧಾನಸಭೆಯಲ್ಲಿ ಉತ್ತರ ನೀಡಬೇಕಿರುವುದರಿಂದ ಮಧ್ಯಂತರ ವರದಿ ನೀಡಲು ಎಸ್‌ಐಟಿ ಅಧಿಕಾರಿಗಳು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.
ಅನಾಮಿಕ ವ್ಯಕ್ತಿಯ ಹೇಳಿಕೆ ಆಧರಿಸಿ ಎಸ್‌ಐಟಿ ತನಿಖೆ ನಡೆಸಲು ರಾಜ್ಯ ಸರ್ಕಾರ ಕಳೆದ ಜು.20 ರಂದು ಹಿರಿಯ ಅಧಿಕಾರಿ ಪ್ರಣವ್‌ಮೊಹಾಂತಿ ನೇತೃತ್ವದಲ್ಲಿ ತಂಡ ರಚಿಸಿತ್ತು. ಅಂದಿನಿಂದಲೂ ಕಾರ್ಯ ಪ್ರವೃತ್ತರಾಗಿರುವ ಎಸ್‌ಐಟಿ ಅಧಿಕಾರಿಗಳು ನಾನಾ ರೀತಿಯ ತನಿಖೆಗಳನ್ನು ನಡೆಸುತ್ತಿದ್ದಾರೆ.
ಸುಮಾರು 20 ದಿನಗಳಿಂದಲೂ ಒಟ್ಟು 17 ಸ್ಥಳಗಳಲ್ಲಿ ಅಗೆದು ಶವ ಅಥವಾ ಕಳೇಬರಗಳಿಗಾಗಿ ಶೋಧ ನಡೆಸಿದ್ದಾರೆ. ಕೆಲವು ಸ್ಥಳಗಳಲ್ಲಿ ಸಣ್ಣ-ಪುಟ್ಟ ಮೂಳೆಗಳು ಪತ್ತೆಯಾಗಿದ್ದು, ಇನ್ನೂ ಕೆಲವು ಕಡೆ ಗುರುತಿನ ಚೀಟಿಯಂತಹ ಮೂಲಭೂತ ದಾಖಲೆಗಳು ದೊರೆತ್ತಿವೆ. ಆದರೆ ಅವುಗಳಿಗೂ ಮಾಸ್ಕ್‌ಮ್ಯಾನ್ ಮಾಡಿರುವ ಆರೋಪಗಳಿಗೂ ಹೆಚ್ಚಿನ ಸಂಬಂಧವಿಲ್ಲ ಎಂದು ತಿಳಿದು ಬಂದಿದೆ.
ಈ ಹಿಂದೆ ಧರ್ಮಸ್ಥಳದಲ್ಲಿ ನೈರ್ಮಲೀಕರಣ ಕೆಲಸ ಮಾಡುತ್ತಿದ್ದ 48 ವರ್ಷದ ಅನಾಮಿಕ ವ್ಯಕ್ತಿ, ತಾನು 1995 ರಿಂದ 2014ರ ವರೆಗೂ ಹಲವಾರು ಶವಗಳನ್ನು ಧರ್ಮಸ್ಥಳದ ಸುತ್ತಮುತ್ತ ನೇತ್ರಾವತಿ ನದಿಯ ದಂಡೆಗಳಲ್ಲಿ ಹೂತಿಟ್ಟಿದ್ದಾಗಿ ಹೇಳಿದ್ದ. ಆ ರೀತಿ ಸಂಸ್ಕಾರ ಮಾಡಲಾದ ಕಳೇಬರಗಳಲ್ಲಿ ಹೆಚ್ಚಿನದಾಗಿ ಮಹಿಳೆಯರು ಮತ್ತು ಬಾಲಕಿಯರ ಶವಗಳಿದ್ದವು ಎಂದಿದ್ದ.
ಲೈಂಗಿಕ ದೌರ್ಜನ್ಯವೆಸಗಿ ಬಳಿಕ, ಕೊಲೆ ಮಾಡಲಾಗಿತ್ತು ಎಂದು ಆರೋಪಿ ತಿಳಿಸಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದು ರಾಷ್ಟ್ರಮಟ್ಟದಲ್ಲೂ ಗಮನ ಸೆಳೆದಿತ್ತು. ಆನಾಮಧೇಯನ ಆರೋಪದ ಬೆನ್ನಲ್ಲೇ ಅನನ್ಯಭಟ್, ಪದಲತಾ, ಸುಜಾತ ಭಟ್ ಎಂಬ ಯುವತಿಯರ ನಾಪತ್ತೆ ಪ್ರಕರಣಗಳು ಮುನ್ನೆಲೆಗೆ ಬಂದವು.
ಅನಾಮಧೇಯ ವ್ಯಕ್ತಿ ಆರಂಭದಲ್ಲಿ 13 ಸ್ಥಳಗಳನ್ನು ಗುರುತಿಸಿದ್ದ ನಂತರ ಹೆಚ್ಚುವರಿ 4 ಜಾಗಗಳನ್ನು ತೋರಿಸಿ ಅಗೆಯಲು ಹೇಳಿದ್ದ. ಒಟ್ಟು 17 ಜಾಗಗಳನ್ನು ಎಸ್‌ಐಟಿ ಅಧಿಕಾರಿಗಳು ಅಗೆದಿದ್ದಾರೆ. ಅದರೂ ಯಾವುದೇ ಮಹತ್ವದ ಸುಳಿವು ದೊರಕಿಲ್ಲ ಎಂದು ತಿಳಿದು ಬಂದಿದೆ. ಕೊನೆಗೆ ಅನಾಮಧೇಯನ ಒತ್ತಾಯದ ಮೇರೆಗೆ ಗ್ರೌಂಡ್‌ಪೆನೆಟ್ರೇಟಿಂಗ್ ರಾಡರ್ (ಜಿಪಿಆರ್)ಬಳಸಿಯೂ ಅನ್ವೇಷಣೆ ನಡೆಸಲಾಗಿದೆ.
ಇದೆಲ್ಲದರ ಬಳಿಕ ಈಗ ಅನಾಮಧೇಯನ ಹೇಳಿಕೆಗಳ ಬಗ್ಗೆಯೇ ಅನುಮಾನಗಳು ಸೃಷ್ಟಿಯಾಗಿವೆ. ಪೊಲೀಸರು ಆತ ಮೊದಲು ತಂದಿಟ್ಟಿದ್ದ ತಲೆ ಬುರುಡೆಯಿಂದ ಈಗ ತನಿಖೆ ಆರಂಭಿಸಿದ್ದಾರೆ. ಎಸ್‌ಐಟಿ ತನಿಖೆಗೂ ಮೊದಲೇ ಆರೋಪಿ ಒಂದು ತಲೆ ಬುರುಡೆಯನ್ನು ತಂದು, ಇದು ಒಬ್ಬ ಬಾಲಕಿಯದು. ಆಕೆಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು. ಶಾಲಾ ಬ್ಯಾಗ್‌ನ ಸಹಿತ ನಾನೇ ಆಕೆಯ ಶವವನ್ನು 2010ರಲ್ಲಿ ಹೂತಿಟ್ಟಿದ್ದಾಗಿ ಹೇಳಿದ್ದ. ನೇತ್ರಾವತಿ ದಂಡೆಯ ಬೋಳಿಯಾರ್ ಎಂಬ ಬಳಿ ಸಂಸ್ಕಾರ ಮಾಡಿದ್ದಾಗಿ ಅನಾಮಧೇಯ ಹೇಳಿದ್ದು, ಆ ಸ್ಥಳವನ್ನು 15ನೇ ಸ್ಪಾಟ್ ಎಂದು ಗುರುತಿಸಲಾಗಿತ್ತು. ಅಲ್ಲಿ ಅಗೆದ ಬಳಿಕವೂ ಯಾವುದೇ ಪುರಾವೆಗಳು ಸಿಕ್ಕಿಲ್ಲ ಎನ್ನಲಾಗಿದೆ.
ಆದರೆ ತನ್ನ ಪಟ್ಟು ಬಿಡದ ಅನಾಮಧೇಯ ಸ್ಥಳೀಯರನ್ನು ವಿಚಾರಣೆಗೊಳಪಡಿಸಬೇಕು ಎಂದು ಒತ್ತಾಯಿಸಿದ್ದಾನೆ. ಆತನ ಸೂಚನೆಯ ಮೇರೆಗೆ ಸ್ಥಳೀಯ ಮಹಿಳೆಯೊಬ್ಬರನ್ನು ಎಸ್‌ಐಟಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ.
ಈವರೆಗಿನ ತನಿಖೆಯ ಎಲ್ಲಾ ಅಂಶಗಳನ್ನು ಕ್ರೋಡೀಕರಿಸಿ ಸರ್ಕಾರಕ್ಕೆ ಎಸ್‌ಐಟಿ ಮಧ್ಯಂತರ ವರದಿ ಸಲ್ಲಿಸಬೇಕಿದೆ. ಸೋಮವಾರ ಗೃಹ ಸಚಿವರು ಮಧ್ಯಂತರ ವರದಿಯನ್ನು ಆಧರಿಸಿ ಒಂದಿಷ್ಟು ಮಾಹಿತಿಗಳನ್ನು ಸದನಕ್ಕೆ ನೀಡಬಹುದು ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಭೈರತಿಸುರೇಶ್, ರಾಮಲಿಂಗಾರೆಡ್ಡಿ, ಎಚ್.ಕೆ. ಪಾಟೀಲ್ ಮತ್ತಿತರರು ಹೇಳಿಕೆ ನೀಡಿದ್ದು ಸೋಮವಾರ ಸದನದಲ್ಲಿ ಗೃಹ ಸಚಿವರು ನೀಡುವ ಉತ್ತರದಲ್ಲಿ ಮಹತ್ವದ ಅಂಶಗಳು ಪ್ರಕಟಗೊಳ್ಳಲಿವೆ ಎಂದಿದ್ದಾರೆ. ಹೀಗಾಗಿ ಇಡೀ ದೇಶದ ಕುತೂಹಲ ಸೋಮವಾರ ಸರ್ಕಾರ ನೀಡುವ ಹೇಳಿಕೆಯ ಮೇಲೆ ಕೇಂದ್ರೀಕೃತವಾಗಿದೆ.