Thursday, July 31, 2025
Homeರಾಜ್ಯಧರ್ಮಸ್ಥಳ ಪ್ರಕರಣ : ಶವಗಳಿಗಾಗಿ ಇನ್ನೆರೆಡು ಹೊಸ ಸ್ಥಳಗಳಲ್ಲೂ ಉತ್ಖನನ ಆರಂಭ

ಧರ್ಮಸ್ಥಳ ಪ್ರಕರಣ : ಶವಗಳಿಗಾಗಿ ಇನ್ನೆರೆಡು ಹೊಸ ಸ್ಥಳಗಳಲ್ಲೂ ಉತ್ಖನನ ಆರಂಭ

Dharmasthala case: Excavation begins at two new locations for bodies

ಮಂಗಳೂರು,ಜು.30- ಧರ್ಮಸ್ಥಳ ಹಾಗೂ ಸುತ್ತಮುತ್ತ ಅನಾಮಧೇಯ ವ್ಯಕ್ತಿ ಹೇಳಲಾದ ಸ್ಥಳಗಳಲ್ಲಿ ಶವಗಳ ಕಳೆಬರಹಗಳನ್ನು ಹುಡುಕುವ ಕಾರ್ಯಾಚರಣೆ ಎರಡನೇ ದಿನವಾದ ಇಂದೂ ಮುಂದುವರೆದಿದ್ದು, ಹಳೆಯ ಗುಂಡಿಯ ಜೊತೆಗೆ ಹೊಸದಾಗಿ ಇನ್ನೆರೆಡು ಸ್ಥಳಗಳಲ್ಲೂ ಉತ್ಖನನ ಆರಂಭವಾಗಿದೆ.

ಅನಾಮಿಕ ವ್ಯಕ್ತಿ ತೋರಿಸಿರುವ 13 ಸ್ಥಳಗಳ ಪೈಕಿ ನಿನ್ನೆ ಧರ್ಮಸ್ಥಳದ ಸ್ನಾನಘಟ್ಟ ಸಮೀಪದ ಅರಣ್ಯ ಪ್ರದೇಶದಲ್ಲಿ ದಿನವಿಡೀ ಉತ್ಖನನ ನಡೆಸಲಾಯಿತು.ಆರಂಭದಲ್ಲಿ ಹಾರೆ, ಗುದ್ದಲಿ, ಪಿಕಾಸಿ, ಸಲಿಕೆ ಬಳಸಿ ಕೂಲಿಕಾರ್ಮಿಕರಿಂದ ಶಂಕಿತ ಗುಂಡಿಯನ್ನು 8 ಅಡಿ ಆಳ, 15 ಅಡಿ ಸುತ್ತಳತೆಯ ಉತ್ಖನನ ನಡೆಸಲಾಯಿತು. ಏನೂ ಸಿಗದೇ ಇದ್ದಾಗ ಜೆಸಿಬಿಯನ್ನು ಬಳಸಿ ಗುಂಡಿ ಅಗೆಯುವ ಕೆಲಸ ಮುಂದುವರೆದಿತ್ತು. ಸುರಿವ ಮಳೆಯ ನಡುವೆಯೇ ನಡೆದ ಕಾರ್ಯಾಚರಣೆಯಲ್ಲಿ ಮಣ್ಣು ಹೊರತುಪಡಿಸಿ ಉಳಿದ ಯಾವುದೇ ಪಳಯುಳಿಕೆ ಸಿಗಲಿಲ್ಲ. ಹೀಗಾಗಿ ಸಂಜೆಯ ವೇಳೆಗೆ ಕಾರ್ಯಾಚರಣೆಗೆ ತಾತ್ಕಾಲಿಕ ಬಿಡುವು ನೀಡಲಾಯಿತು.

ಅನಾಮಿಕನ ಹೇಳಿಕೆಗಳ ಮೇಲೆ ಅನುಮಾನಗಳು ವ್ಯಕ್ತವಾಗಿದ್ದವು. ಸ್ಥಳದಲ್ಲಿದ್ದ ಎಸ್‌‍ಐಟಿ ಅಧಿಕಾರಿಗಳು ನಾನಾ ರೀತಿಯ ಪ್ರಶ್ನೆಗಳನ್ನು ಅನಾಮಿಕ ವ್ಯಕ್ತಿಯ ಮುಂದಿಟ್ಟರು. ನಿಜವಾಗಿಯೂ ಇಲ್ಲಿ ಶವಗಳನ್ನು ಹೂಳಲಾಗಿದೆಯೇ ಎಂಬ ಪ್ರಶ್ನೆಗಳು ಕಾಡಲಾರಂಭಿಸಿದವು.

ಪ್ರಚಾರಕ್ಕಾಗಿಯೋ?, ಶ್ರೀಕ್ಷೇತ್ರಕ್ಕೆ ಕೆಟ್ಟ ಹೆಸರು ತರುವ ದುರುದ್ದೇಶದಿಂದಲೋ? ಅಥವಾ ಇನ್ಯಾರದೋ ಕುಮಕ್ಕಿನಿಂದ ತಪ್ಪು ಹೇಳಿಕೆ ನೀಡುತ್ತಿರಬಹುದೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಎಸ್‌‍ಐಟಿ ಅಧಿಕಾರಿಗಳು ನಾನಾ ರೀತಿಯ ವಿಚಾರಣೆಯನ್ನು ನಡೆಸಿದರು. ಆದರೆ ಎಲ್ಲದಕ್ಕೂ ಒಂದೇ ರೀತಿಯ ಮಾಹಿತಿ ನೀಡಿದ ದೂರುದಾರ ತಾವು ಇದೇ ಸ್ಥಳದಲ್ಲೇ ಶವ ಹೂತಿಟ್ಟಿದ್ದಾಗಿ ಪುನರುಚ್ಚರಿಸಿದ್ದಾನೆ.

ಆತನ ಒತ್ತಡದ ಮೇರೆಗೆ ಜೆಸಿಬಿ ಬಳಸಿ ಮತ್ತಷ್ಟೂ ಆಳವಾಗಿ ಅಗೆದರೂ ಯಾವುದೇ ಪ್ರಯೋಜನವಾಗಿಲ್ಲ. ಮೊದಲ ಪ್ರಯತ್ನವೇ ವಿಫಲವಾಗಿದ್ದರಿಂದ ಎಸ್‌‍ಐಟಿ ಅಧಿಕಾರಿಗಳು ಅನಾಮಿಕನ ಹೇಳಿಕೆ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ಇಂದು ಎರಡು ಸ್ಥಳಗಳಲ್ಲಿ ಆರಂಭದಲ್ಲಿ ಜೆಸಿಬಿಯಿಂದ ಮೂರ್ನಾಲ್ಕು ಅಡಿಗಳಷ್ಟು ಅಗೆದರು. ಅನಂತರ ಮನುಷ್ಯರಿಂದ ಉತ್ಖನನವನ್ನು ಮುಂದುವರೆಸುವ ಕಾರ್ಯಾಚರಣೆ ನಡೆಯಿತು.

ಜೆಸಿಬಿಯಿಂದ ಅಗೆದಾಗ ಒಂದು ವೇಳೆ ಅಸ್ಥಿಪಂಜರ ಲಭ್ಯವಿದ್ದರೆ ಅದಕ್ಕೆ ಹಾನಿಯಾಗಬಹುದು. ಅಪರಾಧದ ಸ್ವರೂಪ ಪತ್ತೆಹಚ್ಚಲು ಫೋರೆನ್ಸಿಕ್‌ಗೆ ತೊಂದರೆಯಾಗಬಹುದು ಎಂಬ ಕಾಳಜಿ ವಹಿಸಲಾಗಿತ್ತು. ಆದರೆ ನಿನ್ನೆ ಇಡೀ ದಿನದ ಕಾರ್ಯಾಚರಣೆಯಲ್ಲಿ ಯಾವುದೇ ಪ್ರಯೋಜನಗಳಾಗದೇ ಇದ್ದುದ್ದರಿಂದ ಎಸ್‌‍ಐಟಿ ತಂಡ ನಾನಾ ರೀತಿಯ ಅನುಮಾನಗಳನ್ನು ವ್ಯಕ್ತಪಡಿಸಿದೆ.

ಅನಾಮಿಕ ತೋರಿಸಿದ 13 ಸ್ಥಳಗಳನ್ನು ಶೋಧಿಸಿದ ಬಳಿಕ ಏನೂ ಸಿಗದೇ ಇದ್ದರೆ ಅನಾಮಿಕನನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಆತನ ಹೇಳಿಕೆ ಹಾಗೂ ಅದರ ಹಿಂದಿರುವವರ ಪತ್ತೆಗೆ ಎಸ್‌‍ಐಟಿ ಅಧಿಕಾರಿಗಳು ಮುಂದಾಗಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಅನಾಮಿಕ ವ್ಯಕ್ತಿ ಜಾಗವೊಂದನ್ನು ಅಗೆದು ತಲೆಬುರಡೆಯನ್ನು ಹೊರತೆಗೆದಿದ್ದ. ಅದನ್ನು ರಾಷ್ಟ್ರೀಯ ಮಾಧ್ಯಮವೊಂದರಲ್ಲಿ ಪ್ರಸಾರ ಮಾಡಲಾಗಿತ್ತು. ಇದು ಭಾರೀ ಚರ್ಚೆಗೆ ಗ್ರಾಸವಾಯಿತಲ್ಲದೆ, ಅನಾಮಿಕನ ಆರೋಪಗಳಲ್ಲಿ ಸತ್ಯಾಂಶಗಳಿರಬಹುದು ಎಂಬ ವದಂತಿಗಳು ಹರಡಿದ್ದವು.

ಆತ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿ ಪ್ರಕರಣ ದಾಖಲಾಗುವಂತೆ ಮಾಡಿದ್ದ. ಸುಮಾರು 15-20 ವರ್ಷಗಳ ಹಿಂದೆ ಹಲವಾರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ. ಆ ಶವಗಳನ್ನು ನಾನೇ ಹೂತಿದ್ದಾಗಿ ಅನಾಮಿಕ ಪದೇಪದೇ ಹೇಳಿದ್ದಾನೆ. ಶಾಲಾ ಬಾಲಕಿಯೊಬ್ಬಳನ್ನು ಆಕೆಯ ಬ್ಯಾಗ್‌ ಸಮೇತವಾಗಿ ಹೂತಿಟ್ಟಿದ್ದ ಪಾಪಪ್ರಜ್ಞೆ ನನ್ನನ್ನು ಕಾಡಿದೆ. ಈ ಕಾರಣಕ್ಕೆ ಈಗ ಮಾಫಿ ಸಾಕ್ಷಿಯಾಗಲು ಬಂದಿದ್ದೇನೆ ಎಂದು ಆತ ಹೇಳಿದ್ದ. ರಾಜ್ಯಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸತ್ಯಾಂಶ ಪತ್ತೆ ಹಚ್ಚಲು ಎಸ್‌‍ಐಟಿ ರಚಿಸಿತ್ತು.

ಎಸ್‌‍ಐಟಿ ಅಧಿಕಾರಿಗಳು ಕಂದಾಯ, ಅರಣ್ಯ, ವೈದ್ಯಕೀಯ ಇಲಾಖೆ ಅಧಿಕಾರಿಗಳ ನೆರವಿನೊಂದಿಗೆ ಫೋರೆನ್ಸಿಕ್‌ ತಜ್ಞರ ಸಮುಖದಲ್ಲಿ ಉತ್ಖನನ ನಡೆಸಿದೆ. ಎರಡನೇ ದಿನದ ಕಾರ್ಯಾಚರಣೆಯಲ್ಲೂ ಯಾವುದೇ ಪುರಾವೆ ದೊರೆಯದೇ ಇದ್ದರೆ ಅನಾಮಿಕನ ಹೇಳಿಕೆ ಮೇಲೆ ಅನುಮಾನಗಳು ತೀವ್ರವಾಗುವುದಲ್ಲದೆ, ಪ್ರಕರಣ ಗಂಭೀರ ಸ್ವರೂಪಕ್ಕೆ ತಿರುಗುವ ಎಲ್ಲಾ ಸಾಧ್ಯತೆಗಳಿವೆ.

RELATED ARTICLES

Latest News